ಹುಬ್ಬಳ್ಳಿ-ಧಾರವಾಡ ಕಮಿಷನರ್ ಹುದ್ದೆಗೆ ಐಪಿಎಸ್ ಅಧಿಕಾರಿಗಳ ನಿರಾಸಕ್ತಿ: ಆದೇಶವಾದರೂ ಅಧಿಕಾರ ವಹಿಸಿಕೊಳ್ಳದ ಭೂಷಣ್ ಬೋರಸೆ

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಹುದ್ದೆ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಎನ್. ಶಶಿಕುಮಾರ್ ವರ್ಗಾವಣೆಗೊಂಡರೂ, ನೂತನ ಆಯುಕ್ತರಾಗಿ ಆದೇಶವಾಗಿದ್ದ ಭೂಷಣ್ ಬೋರಸೆ ಅಧಿಕಾರ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಈ ವರ್ಗಾವಣೆ ಪ್ರಕ್ರಿಯೆ ಹಿಂದೆ ಆಡಳಿತಾರೂಢ ಕಾಂಗ್ರೆಸ್‌ನ ಆಂತರಿಕ ರಾಜಕೀಯದ ಕೈವಾಡವಿದೆ ಎನ್ನಲಾಗುತ್ತಿದೆ. ಐಪಿಎಸ್ ಅಧಿಕಾರಿಗಳು ಹುಬ್ಬಳ್ಳಿ ಹುದ್ದೆಯನ್ನು 'ಸೂಕ್ಷ್ಮ' ಎಂದು ಪರಿಗಣಿಸಿ, ಬೇರೆಡೆ ಕಾರ್ಯನಿರ್ವಹಿಸುವುದೇ 'ಸೇಫ್' ಎಂದು ಭಾವಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಹುಬ್ಬಳ್ಳಿ-ಧಾರವಾಡ ಕಮಿಷನರ್ ಹುದ್ದೆಗೆ ಐಪಿಎಸ್ ಅಧಿಕಾರಿಗಳ ನಿರಾಸಕ್ತಿ: ಆದೇಶವಾದರೂ ಅಧಿಕಾರ ವಹಿಸಿಕೊಳ್ಳದ ಭೂಷಣ್ ಬೋರಸೆ
ಎನ್. ಶಶಿಕುಮಾರ್ ಭೂಷಣ್ ಬೋರಸೆ
Image Credit source: Google
Edited By:

Updated on: Sep 03, 2026 | 2:54 PM

ಹುಬ್ಬಳ್ಳಿ, ಸೆ.2: ಒಂದು ಕಾಲದಲ್ಲಿ ಐಪಿಎಸ್ ಅಧಿಕಾರಿಗಳ ನಡುವೆ ತೀವ್ರ ಪೈಪೋಟಿ ಸೃಷ್ಟಿಸುತ್ತಿದ್ದ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪೊಲೀಸ್ ಆಯುಕ್ತರ  ಹುದ್ದೆಗೆ ಇದೀಗ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ನೂತನ ಆಯುಕ್ತರಾಗಿ ಸರ್ಕಾರದಿಂದ ಆದೇಶವಾಗಿದ್ದರೂ ಐಪಿಎಸ್ ಅಧಿಕಾರಿ ಭೂಷಣ್ ಬೋರಸೆ ಅವರು ಅಧಿಕಾರ ಸ್ವೀಕರಿಸದೇ ಇರುವುದು ಮತ್ತು ಹಾಲಿ ಕಮಿಷನರ್ ಎನ್. ಶಶಿಕುಮಾರ್ ಅವರ ವರ್ಗಾವಣೆ ಹಿನ್ನೆಲೆಯಲ್ಲಿ ರಾಜಕೀಯ ತೆರೆಮರೆಯ ಆಟಗಳು ನಡೆಯುತ್ತಿವೆ ಎಂಬ ಗುಮಾನಿ ಜೋರಾಗಿದೆ.

ಕಳೆದ ಎರಡು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್. ಶಶಿಕುಮಾರ್ ಅವರನ್ನು ಸರ್ಕಾರ ಮೂರು ದಿನಗಳ ಹಿಂದೆ ಯಾವುದೇ ನಿರ್ದಿಷ್ಟ ಸ್ಥಳ ತೋರಿಸದೆ ವರ್ಗಾವಣೆ ಮಾಡಿತ್ತು. ಅವರ ಜಾಗಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ಆಗಿರುವ ಭೂಷಣ್ ಬೋರಸೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು.

ಆದೇಶವಾಗಿ ಮೂರು ದಿನ ಕಳೆದರೂ ಭೂಷಣ್ ಬೋರಸೆ ಅವರು ಹುಬ್ಬಳ್ಳಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿಲ್ಲ. ಮೂಲಗಳ ಪ್ರಕಾರ, ತಾವು ಬೆಳಗಾವಿಯಲ್ಲೇ ಮುಂದುವರಿಯುವುದಾಗಿ ಅವರು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದು, ಈ ಹುದ್ದೆ ವಹಿಸಿಕೊಳ್ಳಲು ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಪೋಲಿಸ್ ಕಮಿಷನರ್ ವರ್ಗಾವಣೆ ಪ್ರಕ್ರಿಯೆಯ ಹಿಂದೆ ಆಡಳಿತಾರೂಢ ಕಾಂಗ್ರೆಸ್‌ನ ಆಂತರಿಕ ರಾಜಕೀಯದ ಕೈವಾಡವಿದೆ ಎಂಬ ಚರ್ಚೆಗಳು ಆರಂಭವಾಗಿವೆ.

ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಮೂರು ತಿಂಗಳ ಹಿಂದೆಯೇ ಎನ್. ಶಶಿಕುಮಾರ್ ಅವರ ವರ್ಗಾವಣೆಗೆ ಪಟ್ಟು ಹಿಡಿದಿದ್ದರು. ಇದೀಗ ವರ್ಗಾವಣೆ ಆದೇಶ ಹೊರಬಿದ್ದಿದ್ದರೂ, ಹೊಸ ಅಧಿಕಾರಿ ಅಧಿಕಾರ ವಹಿಸಿಕೊಳ್ಳದಿರಲು ಕಾಂಗ್ರೆಸ್‌ನ ಮತ್ತೊಂದು ಗುಂಪಿನ ಒತ್ತಡವೇ ಕಾರಣ ಎನ್ನಲಾಗುತ್ತಿದೆ. ಹಾಲಿ ಕಮಿಷನರ್ ಶಶಿಕುಮಾರ್ ಅವರನ್ನೇ ಹುಬ್ಬಳ್ಳಿಯಲ್ಲಿ ಮುಂದುವರಿಸಲು ಈ ಗುಂಪು ಶ್ರಮಿಸುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ.

ಇದನ್ನೂ ಓದಿ: ಕೆಪಿಎಸ್​​​​ಸಿ ಹಗರಣ: ಸಿಐಡಿ ಮುಂದೆ ಮತ್ತಷ್ಟು ಅಭ್ಯರ್ಥಿಗಳ ತಪ್ಪೊಪ್ಪಿಗೆ, ಸಿಎಂ ಡಿಕೆಶಿ ಮಹತ್ವದ ಹೇಳಿಕೆ

ಅಧಿಕಾರಿಗಳ ನಿರಾಸಕ್ತಿ ಏಕೆ?:

1989 ರಲ್ಲಿ ಸ್ಥಾಪನೆಯಾದ ಹುಬ್ಬಳ್ಳಿ-ಧಾರವಾಡ ಆಯುಕ್ತಾಲಯವು 15 ಪೊಲೀಸ್ ಠಾಣೆಗಳು, 4 ಸಂಚಾರಿ ಠಾಣೆಗಳು ಸೇರಿದಂತೆ ಬೃಹತ್ ಅಧಿಕಾರಿ ವರ್ಗಗಳನ್ನು ಹೊಂದಿದೆ. ಹಿಂದೆ ಲಾಬುರಾಮ್, ಪಾಂಡುರಂಗ ರಾಣೆ, ಗಗನದೀಪ, ರಮಣಗುಪ್ತ ಅವರಂತಹ ಹಿರಿಯ ಅಧಿಕಾರಿಗಳು ಅತ್ಯಂತ ಹೆಮ್ಮೆಯಿಂದ ನಿರ್ವಹಿಸಿದ್ದ ಹುದ್ದೆ ಇದಾಗಿತ್ತು. ಆದರೆ, ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ತೀರಾ ಸೂಕ್ಷ್ಮ ಹಾಗೂ ಸವಾಲಿನ ಕೆಲಸವಾಗಿದೆ. ಸಣ್ಣ ಲೋಪವಾದರೂ ಇಮೇಜ್‌ಗೆ ಧಕ್ಕೆಯಾಗುವ ಹಾಗೂ ಅಧಿಕಾರಿಗಳ ತಲೆದಂಡವಾಗುವ ಭೀತಿ ಇರುವ ಕಾರಣ, ಐಪಿಎಸ್ ಅಧಿಕಾರಿಗಳು ಹುಬ್ಬಳ್ಳಿ-ಧಾರವಾಡಕ್ಕಿಂತ ಬೇರೆಡೆ ಕಾರ್ಯನಿರ್ವಹಿಸುವುದೇ ‘ಸೇಫ್’ ಎಂಬ ಭಾವನೆಗೆ ಬಂದಿದ್ದಾರೆ ಎನ್ನಲಾಗಿದೆ.

“ಯಾರು ಹೊಸದಾಗಿ ಬಂದು ಚಾರ್ಜ್ ತಗೊಳ್ತಾರೋ ಅವರಿಗೆ ಅಧಿಕಾರ ಹಸ್ತಾಂತರಿಸಿ ಹೋಗುತ್ತೇನೆ. ಸರ್ಕಾರ ಎಲ್ಲಿ ಹುದ್ದೆ ನೀಡುತ್ತೋ ಅಲ್ಲಿ ಅಧಿಕಾರ ವಹಿಸಿಕೊಳ್ಳುತ್ತೇನೆ.” ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Wed, 2 September 26

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us