ರಾಜಕೀಯ ನಾಯಕರ ತಿಕ್ಕಾಟ: ವರ್ಗಾವಣೆಯಾದರೂ ನಿಯುಕ್ತಿಗೆ ಅವಕಾಶ ಸಿಗದೇ ಪೊಲೀಸ್ ಇನ್ಸ್​ಪೆಕ್ಟರ್​ಗಳ ಪರದಾಟ

ವರ್ಗಾವಣೆಯಾಗಿದ್ದರೂ ಕೂಡ, ಧಾರವಾಡ ಜಿಲ್ಲೆಯ ಕೆಲ ಜನಪ್ರತಿನಿಧಿಗಳು, ನಾಯಕರ ಒಳಜಗಳ ಮತ್ತು ತಿಕ್ಕಾಟದಿಂದ ಕೆಲಸಕ್ಕೆ ಹಾಜರಾಗಲು ಪೊಲೀಸ್ ಇನ್ಸ್ಪೆಕ್ಟರ್ ಗಳು ಪರದಾಡುವಂತಾಗಿದೆ. ನ್ಯಾಯ ಕೊಡಿಸುವ ಕೆಲಸ ಮಾಡುವ ಇನ್ಸ್ಪೆಕ್ಟರ್​​ಗಳೇ ಇದೀಗ ನ್ಯಾಯಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಮೇಲೆ ಕೂಡ ಪರಿಣಾಮವಾಗುತ್ತಿರುವುದು ಸುಳ್ಳಲ್ಲ.

ರಾಜಕೀಯ ನಾಯಕರ ತಿಕ್ಕಾಟ: ವರ್ಗಾವಣೆಯಾದರೂ ನಿಯುಕ್ತಿಗೆ ಅವಕಾಶ ಸಿಗದೇ ಪೊಲೀಸ್ ಇನ್ಸ್​ಪೆಕ್ಟರ್​ಗಳ ಪರದಾಟ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Oct 10, 2025 | 10:08 AM

ಹುಬ್ಬಳ್ಳಿ, ಅಕ್ಟೋಬರ್ 10: ಸೆಪ್ಟೆಂಬರ್ 6 ರಂದು ಗೃಹ ಇಲಾಖೆ ಮೇಜರ್ ಸರ್ಜರಿ ಮಾಡಿದ್ದು, ರಾಜ್ಯದ 131 ಇನ್ಸ್​ಪೆಕ್ಟರ್​​ಗಳನ್ನು ವರ್ಗಾವಣೆ (Police Transfer)ಮಾಡಿ ಆದೇಶ ಹೊರಡಿಸಿತ್ತು. ವರ್ಗಾವಣೆ ಮಾಡುವುದು ಪೊಲೀಸ್ ಮಂಡಳಿಯೇ ಎಂಬುದಾಗಿ ಖುದ್ದು ಗೃಹ ಸಚಿವರು ಹತ್ತಾರು ಬಾರಿ ಹೇಳಿದ್ದಾರೆ. ಆದರೆ ಸ್ಥಳೀಯ ನಾಯಕರ, ಜನಪ್ರತಿನಿಧಿಗಳ ಶಿಪಾರಸ್ಸು ಇಲ್ಲದೇ ವರ್ಗಾವಣೆ ಅಸಾಧ್ಯ. ಒಂದು ವೇಳೆ ವರ್ಗಾವಣೆಯಾದರೂ ಆದ ಜಾಗಕ್ಕೆ ಕರ್ತವ್ಯಕ್ಕೆ ಹಾಜರಾಗುವುದು ಕಷ್ಟದ ವಿಚಾರ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇದು ಹುಬ್ಬಳ್ಳಿ ಧಾರವಾಡ (Dharawad)ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಸಾಬೀತಾಗುತ್ತಿದೆ. ಅವಳಿ ನಗರದಲ್ಲಿ ವಿವಿಧ ಠಾಣೆ ಗಳಿಗೆ ಇನ್ಸ್ಪೆಕ್ಟರ್​​ಗಳು ವರ್ಗಾವಣೆಯಾದರೂ ಕರ್ತವ್ಯಕ್ಕೆ ಹಾಜರಾಗಲು ಕೆಲ ನಾಯಕರು ಅಡ್ಡಿಯಾಗಿದ್ದಾರೆ.

ಸೆಪ್ಟೆಂಬರ್ 6 ರಂದು ಹುಬ್ಬಳ್ಳಿ ಯ ಗೋಕಲ್ ರೋಡ್, ವಿದ್ಯಾನಗರ, ಹುಬ್ಬಳ್ಳಿ ಶಹರ್, ಕಸಬಾಪೇಟ್, ಧಾರವಾಡ ಟೌನ್ ಇನ್ಸ್​ಪೆಕ್ಟರ್​​ಗಳ ವರ್ಗಾವಣೆಯಾಗಿದ್ದು ಆ ಜಾಗಕ್ಕೆ ಬೇರೆ ಇನ್ಸ್​ಪೆಕ್ಟರ್​​ಗಳನ್ನು ನೇಮಕ ಮಾಡಲಾಗಿದೆ. ಆದರೆ, ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಇನ್ಸ್​ಪೆಕ್ಟರ್​ ಆಗಿ‌ ಡಿಸೋಜಾ ಎಂಬವರು ಅಧಿಕಾರ ಸ್ವೀಕಾರ ಮಾಡಿದ್ದು ಬಿಟ್ಟರೆ ಉಳಿದವರ ಕರ್ತವ್ಯಕ್ಕೆ ರಾಜಕೀಯ ನಾಯಕರ ಅಹಂ ಅಡ್ಡಿಯಾಗಿದೆ. ಪೊಲೀಸ್ ಕಮಿಷನರ್ ಮೇಲೆ ಒತ್ತಡ ಹಾಕಿರುವ ಜನಪ್ರತಿನಿಧಿಗಳು ಮತ್ತು ನಾಯಕರು, ಸದ್ಯ ವರ್ಗಾವಣೆಯಾಗಿರುವವರನ್ನು ರಿಲಿವ್ ಮಾಡದೇ, ಹೊಸದಾಗಿ ನೇಮಕವಾದವರಿಗೆ ಅಧಿಕಾರ ಪಡೆಯಲು ಅವಕಾಶ ನೀಡದಂತೆ ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ವರ್ಗಾವಣೆಯಾಗಿ ಐದು ದಿನವಾದರೂ ವರ್ಗಾವಣೆ ಹೈಡ್ರಾಮಾ ಮುಗಿಯದಂತಾಗಿದೆ.

ಪ್ರತಿಷ್ಠೆಯಾದ ಗೋಕುಲ ರೋಡ್ ಠಾಣೆ

ಎರಡು ದಿನಗಳ ಹಿಂದಷ್ಟೇ ವರ್ಗಾವಣೆಯಾಗಿರುವವರ ವಿಚಾರದಲ್ಲಿ ಅತಿ ಹೆಚ್ಚು ಪ್ರತಿಷ್ಠೆಯಾಗಿರುವುದು ಹುಬ್ಬಳ್ಳಿ ಗೋಕಲರೋಡ್ ಪೊಲೀಸ್ ಠಾಣೆ. ಈ ಹುದ್ದೆಯಲ್ಲಿ ಪ್ರವೀಣ್ ನೀಲಮ್ಮನವರ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ಸ್ಥಳದಲ್ಲಿ ಮುಂದುವರಿಯುವ ಇಚ್ಛೆ ಕೂಡಾ ಹೊಂದಿದ್ದರು. ಸ್ಥಳೀಯ ಕಾಂಗ್ರೆಸ್ ನಾಯಕರು ಬೇರೆಯವರನ್ನು ಈ ಕುರ್ಚಿಯಲ್ಲಿ ಕೂರಿಸಲು ಮುಂದಾಗಿದ್ದರು. ಆದರೆ, ವರ್ಗಾವಣೆ ಆದೇಶದಲ್ಲಿ ಅವರು ಹೇಳಿದ ಇನ್ಸ್​ಪೆಕ್ಟರ್​ಗೆ ಸಿಗಬೇಕಾದ ಸ್ಥಾನ, ಬೇರಯವರಿಗೆ ಸಿಕ್ಕಿತ್ತು. ಮೂಲತ ಧಾರವಾಡ ಜಿಲ್ಲೆಯವರಾಗಿರುವ ಶಿವರುದ್ರಪ್ಪ ಮೇಟಿ ಎಂಬವರಿಗೆ ಇಲಾಖೆ, ಗೋಕುಲರೋಡ್ ಠಾಣೆ ಸಿಪಿಐ ಆಗಿ ವರ್ಗಾವಣೆ ಮಾಡಿತ್ತು.

ಇದನ್ನೂ ಓದಿ: ಪೊಲೀಸ್ ವರ್ಗಾವಣೆಯಲ್ಲಿ ಮಹತ್ತರ ಬದಲಾವಣೆ: ಮುಂಬಡ್ತಿ ಪಡೆದು ವರ್ಗಾವಣೆಯಾದ ಅಧಿಕಾರಿಗಳಿಗೆ ಹಲವು ನಿಯಮ

ತಾವು ಹೇಳಿದ ವ್ಯಕ್ತಿಗೆ ವರ್ಗಾವಣೆಯಾಗಿಲ್ಲ ಎಂಬುದು ಅನ್ನೋದು ಗೊತ್ತಾಗುತ್ತಿದ್ದಂತೆಯೇ ನಾಯಕರು ಗೋಕುಲ್ ರೋಡ್ ಠಾಣೆಗೆ ನಿಯುಕ್ತಿಯಾಗಿರುವ ಇನ್ಸ್​ಪೆಕ್ಟರ್​ಗೆ ಕೆಲಸಕ್ಕೆ ಹಾಜರಾಗಲು ಅವಕಾಶ ನೀಡಿಲ್ಲ. ಇದೇ ರೀತಿ ಉಳಿದ ಠಾಣೆಗಳಲ್ಲಿ ಕೂಡಾ ಸ್ಥಿತಿ ಇದೆ.

ವರ್ಗಾವಣೆ ಆದೇಶ ಮಾರ್ಪಡಿಸಲು ಕಸರತ್ತು

ಈಗಾಗಲೇ ವರ್ಗಾವಣೆ ಆದೇಶ ಹೊರಬಿದ್ದಿದ್ದರೂ, ಅದನ್ನು ಪರಿಷ್ಕರಿಸಿ ಮತ್ತೊಂದು ಆದೇಶ ಹೊರಡಿಸುವಂತೆ ನಾಯಕರು ಗೃಹ ಸಚಿವ ಪರಮೇಶ್ವರ ಅವರ ದುಂಬಾಲು ಬಿದ್ದಿದ್ದಾರೆ. ತಾವು ಹೇಳಿದವರಿಗೆ ಪೋಸ್ಟಿಂಗ್ ಆಗಿಲ್ಲ ಅಂತ ತಮ್ಮ ತಮ್ಮ ನಾಯಕರ ಮೂಲಕ ಗೃಹ‌ ಸಚಿವ ಪರಮೇಶ್ವರ ಮತ್ತು ಹೈಕಮಾಂಡ್ ನಾಯಕರ ಮುಂದೆ ವಿಚಾರ ಪ್ರಸ್ತಾಪಿಸಿ, ಆದೇಶ ಪರಿಷ್ಕರಣೆಗೆ ಒತ್ತಡ ಹಾಕುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 am, Fri, 10 October 25