ಹುಬ್ಬಳ್ಳಿ: ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ; ವಿವಾದದ ಹಿಂದಿದೆ ರಸ್ತೆ ನಿರ್ಮಾಣ ರಾಜಕೀಯ!
ಹುಬ್ಬಳ್ಳಿಯಲ್ಲಿ ರಸ್ತೆ ಕಾಮಗಾರಿ ಭೂಮಿಪೂಜೆ ವೇಳೆ ನಡೆದ ಕುರಾನ್ ಪಠಣ ವಿವಾದಕ್ಕೆ ಕಾರಣವಾಗಿದೆ. ಇದು ಸರ್ಕಾರಿ ಕಾರ್ಯಕ್ರಮವೆಂದು ಬಿಜೆಪಿ ಆರೋಪಿಸಿ ಹೋಮ ನಡೆಸಿ ಪ್ರತಿಭಟಿಸಿದ್ದರೆ, ಕಾಂಗ್ರೆಸ್ ನಾಯಕರು ಖಾಸಗಿ ಕಾರ್ಯಕ್ರಮ ಹಾಗೂ ಭಾವೈಕ್ಯತೆಯ ಸಂಕೇತವೆಂದು ಸಮರ್ಥಿಸಿಕೊಂಡಿದ್ದಾರೆ. ಸದ್ಯ ಇದು ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ, ಅಕ್ಟೋಬರ್ 10: ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುರಾನ್ ಪಠಣ (Quran) ಮಾಡಿದ್ದು ವಿವಾದವಾಗಿದ್ದು, ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ ಮಾಡಲಾಗಿದೆ ಅಂತ ಆರೋಪಿಸಿ ಬಿಜೆಪಿ (bjp) ಶಾಸಕ ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋಮ-ಹವನ ಮಾಡಿದ್ದಾರೆ. ಇನ್ನೊಂದೆಡೆ ಅಂದು ನಡೆದಿದ್ದು ಸರ್ಕಾರಿ ಕಾರ್ಯಕ್ರಮವೇ ಅಲ್ಲಾ, ಅದು ಖಾಸಗಿ ಕಾರ್ಯಕ್ರಮವಾಗಿತ್ತು. ಶಾಸಕರು ಹೊಟ್ಟೆ ಕಿಚ್ಚಿಗೆ ಈ ರೀತಿ ಮಾಡುತ್ತಿದ್ದಾರೆ ಎಂದು ಕೈ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಇದೆಲ್ಲದರ ಹಿಂದಿರುವುದು ಹುಬ್ಬಳ್ಳಿ ನಗರದ ರಸ್ತೆ ರಾಜಕೀಯ.
ಹುಬ್ಬಳ್ಳಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯಿಂದ ಹುಬ್ಬಳ್ಳಿ ತಾಲೂಕಿನ ಗುಡಿಹಾಳ ಮತ್ತು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಮಯವಾಗಿದೆ. ರಸ್ತೆಯಲ್ಲಿ ಗುಂಡಿ ಇದೆಯೋ ಗುಂಡಿಯಲ್ಲಿ ರಸ್ತೆಯಿದೆಯೋ ಎಂಬ ಸ್ಥಿತಿಯಿದೆ. ಇದೇ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಹೆಚ್ಚಿನ ಜನದಟ್ಟಣೆ ಇರುವ ಇದೇ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ.
ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ ಆರೋಪ, ಖಂಡನೆ: ಡಿಸಿ ಕಚೇರಿ ಎದುರು ಹೋಮ ನಡೆಸಲು ಬಿಜೆಪಿ ಸಜ್ಜು
ಇಂತಹ ರಸ್ತೆಯಲ್ಲಿ ಅನೇಕರು ಬಿದ್ದು ಗಾಯಗೊಂಡಿದ್ದಾರೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಅನುದಾನ ಬಂದರೂ ಕೂಡ ಕಾಮಗಾರಿ ಆರಂಭಕ್ಕೆ ವಿಘ್ನಗಳು ಎದುರಾಗಿದ್ದವು. ಆದರೆ ಎಲ್ಲಾ ವಿಘ್ನಗಳು ನಿವಾರಣೆಯಾಗಿ ಸೆಪ್ಟಂಬರ್ 5 ರಂದು ಹುಬ್ಬಳ್ಳಿ ನಗರದ ವಿಶಾಲ್ ನಗರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಹುಬ್ಬಳ್ಳಿ ನಗರದ ವಾರ್ಡ್ ನಂಬರ್ 34 ರ ಗುಡಿಹಾಳ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್, ನೂತನ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಐದು ಕೋಟಿ ಎಪ್ಪತ್ತೆಂಟು ಲಕ್ಷ ವೆಚ್ಚದಲ್ಲಿ, 1.2 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಗಣೇಶ ಸ್ತೋತ್ರದ ಪ್ರಾರ್ಥನೆ ಜೊತೆಗೆ ಕುರಾನ್ ಪಠಣ ಮಾಡಲಾಗಿತ್ತು. ಇದು ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ಅಂದು ನಡೆದಿದ್ದು ಸರ್ಕಾರಿ ಕಾರ್ಯಕ್ರಮ. ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ ಮಾಡಿಸಲಾಗಿದೆ. ಜೊತೆಗೆ ಕಾರ್ಯಕ್ರಮದ ಬ್ಯಾನರ್ ಕಾಂಗ್ರೆಸ್ ಮಯವಾಗಿತ್ತು. ಜೊತೆಗೆ ಸ್ಥಳೀಯ ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಿಲ್ಲ. ಆ ಮೂಲಕ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಅಂತ ಆರೋಪಿಸಿದ್ದರು. ಈ ಬಗ್ಗೆ ಮುಖ್ಯಕಾರ್ಯದರ್ಶಿಗೆ ಪತ್ರ ಕೂಡ ಬರೆದಿದ್ದಾರೆ.
ನನ್ನನ್ನು ಹೊರಗಿಟ್ಟು ಕಾರ್ಯಕ್ರಮ ಮಾಡಿದ್ದಾರೆ: ಶಾಸಕ ಅರವಿಂದ್ ಬೆಲ್ಲದ್
ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮುಲ್ಲಾ ಮೋಕ್ಷ ಹೋಮ, ರುದ್ರಪಠಣ ಮೂಲಕ ಶುದ್ದೀಕರಣ ಅಂತ ಹೋಮ-ಹವನ ಮಾಡಲಾಗಿದೆ. ಶಾಸಕ ಅರವಿಂದ್ ಬೆಲ್ಲದ್ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಮಾತನಾಡಿದ ಅರವಿಂದ್ ಬೆಲ್ಲದ್, ಸ್ಥಳೀಯ ಶಾಸಕನಾಗಿರುವ ನನ್ನನ್ನು ಹೊರಗಿಟ್ಟು ಕಾಂಗ್ರೆಸ್ ಮಯವಾದ ಕಾರ್ಯಕ್ರಮ ಮಾಡಿದ್ದಾರೆ. ಜೊತೆಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ ಮಾಡಿಸಿದ್ದಾರೆ ಅಂತ ಆರೋಪಿಸಿದ್ದಾರೆ.
ಶಾಸಕ ಬೆಲ್ಲದ ಆರೋಪ ನಿರಾಕರಿಸಿದ ಕಾಂಗ್ರೆಸ್ ನಾಯಕರು
ಇನ್ನು ಶಾಸಕ ಅರವಿಂದ್ ಬೆಲ್ಲದ ಆರೋಪವನ್ನು ಅಂದು ಕಾರ್ಯಕ್ರಮ ಆಯೋಜಿಸಿದ್ದ ವಾರ್ಡ್ ನಂಬರ್ 34 ರ ಕಾಂಗ್ರೆಸ್ ಸದಸ್ಯೆಯ ಪುತ್ರ ಹಾಗೂ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ್ ಗೌರಿ ಅಲ್ಲಗಳೆದಿದ್ದಾರೆ. ಅಂದು ರಸ್ತೆ ನಿರ್ಮಾಣ ಸೇರಿ 14 ಕೋಟಿ ರೂ ಕಾಮಗಾರಿಗಳಿಗೆ ಬೇರೆಡೆ ಪೂಜೆ ಮಾಡಲಾಗಿತ್ತು. ನಂತರ ತಮ್ಮ ಕಾಂಗ್ರೆಸ್ ಜನಸಂಪರ್ಕ ಕಚೇರಿ ಹಾಗೂ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಅಭಿನಂದನಾ ಸಮಾರಂಭ, ಸರ್ಕಾರಿ ಕಾರ್ಯಕ್ರಮವಲ್ಲಾ. ಅದು ಖಾಸಗಿ ಕಾರ್ಯಕ್ರಮ. ಅಲ್ಲಿ ಕುರಾನ್ ಪಠಣಕ್ಕೂ ಮುನ್ನವೇ ಗಣೇಶ ಸ್ತೋತ್ರ ಹೇಳಲಾಗಿತ್ತು. ನಂತರ ಕುರಾನ್ ಪಠಣ ನಡೆದಿದೆ. ಆ ಬಡಾವಣೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡು ಸಮುದಾಯದವರು ಇದ್ದಾರೆ. ಹೀಗಾಗಿ ಸರ್ವಧರ್ಮ ಭಾವೈಕ್ಯತೆಗಾಗಿ ಈ ಕ್ರಮ ಅನುಸರಿಸಲಾಗಿದೆ. ಆದರೆ ಶಾಸಕರು ಅದು ಸರ್ಕಾರಿ ಕಾರ್ಯಕ್ರಮ ಅಂತ ಬಿಂಬಿಸುತ್ತಿದ್ದಾರೆ ಅಂತ ನಾಗರಾಜ್ ಗೌರಿ ಆರೋಪಿಸಿದ್ದಾರೆ.
ವಿವಾದದ ಹಿಂದಿದೆ ರಸ್ತೆ ನಿರ್ಮಾಣ ರಾಜಕೀಯ
ಇನ್ನು ವೇದಿಕೆ ಮೇಲೆ ಕುರಾನ್ ಪಠಣ ವಿವಾದ ದೊಡ್ಡದಾಗಲು ಕಾರಣ, ರಸ್ತೆ ರಾಜಕೀಯ. ಹೌದು, ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ, ಗುಡಿಹಾಳ ರಸ್ತೆಗೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿಕೊಂಡು ಬಂದಿದ್ದರು. ಈ ಹಿಂದೆ ಈ ರಸ್ತೆ ನಿರ್ಮಾಣಕ್ಕೆ ಶಾಸಕ ಅರವಿಂದ್ ಬೆಲ್ಲದ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗಾಗಲೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರಸ್ತೆ ನಿರ್ಮಾಣಕ್ಕೆ ಅನುಧಾನ ನೀಡಲಾಗಿದೆ. ಇದೀಗ ಮತ್ತೆ ಅದೇ ರಸ್ತೆ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ಅನುದಾನ ನೀಡಿದೆ.
ಈ ಅನುದಾನವನ್ನು ಬೇರೆಡೆ ಹಾಕಬೇಕು ಅಂತ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಈ ಹಿಂದೆ ನೀಡಿದ್ದ ಅನುದಾನ ಬೇರೆ, ಸದ್ಯ ನೀಡಿರುವ ಅನುದಾನ ರಸ್ತೆ ಕಾಮಗಾರಿಯೇ ಬೇರೆ ಅಂತ ವಾದಿಸಿದ್ದ ಕಾಂಗ್ರೆಸ್ ನಾಯಕರು, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿ, ಅನುದಾನ ತರುವಲ್ಲಿ ಸಫಲವಾಗಿತ್ತು. ನಂತರ ಕಾಮಗಾರಿ ಪೂಜೆಯನ್ನು ಕೂಡ ಮಾಡಿದೆ. ಇದೇ ಕಾರಣಕ್ಕೆ ಶಾಸಕ ಅರವಿಂದ್ ಬೆಲ್ಲದ್ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಇದನ್ನೂ ಓದಿ: ರಾಜಕೀಯ ನಾಯಕರ ತಿಕ್ಕಾಟ: ವರ್ಗಾವಣೆಯಾದರೂ ನಿಯುಕ್ತಿಗೆ ಅವಕಾಶ ಸಿಗದೇ ಪೊಲೀಸ್ ಇನ್ಸ್ಪೆಕ್ಟರ್ಗಳ ಪರದಾಟ
ದೇವರ ಗುಡಿಹಾಳ ರಸ್ತೆ ನಿರ್ಮಾಣ ಕಾಮಗಾರಿ, ಶಾಸಕ ಅರವಿಂದ್ ಬೆಲ್ಲದ್ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರ ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದೆ. ಹೀಗಾಗಿ ಸರ್ಕಾರದ ಅನುದಾನ ಬಂದರೂ ಕಾಮಗಾರಿ ಆರಂಭವಾಗಿರಲಿಲ್ಲ. ಇದೀಗ ಭೂಮಿ ಪೂಜೆಯಾದರು ಕೂಡ ಕಾರ್ಯಕ್ರಮದಲ್ಲಿ ಕುರಾನ್ ಪಠಣ ವಿವಾದ ಸ್ವರೂಪ ಪಡೆದುಕೊಂಡಿದೆ. ಆದರೆ ರಾಜಕೀಯ ನಾಯಕರು ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು, ಕ್ಷೇತ್ರದ ಅಭಿವೃದ್ದಿಗೆ ಗಮನ ನೀಡಬೇಕು ಅನ್ನೋದು ಸ್ಥಳೀಯರ ಮಾತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



