ಹುಬ್ಬಳ್ಳಿ ಬಾಲಕಿ ಹತ್ಯೆ ಕೇಸ್​: ನುಡಿದಂತೆ ನಡೆಯದ ಸರ್ಕಾರ, ಕುಟುಂಬಕ್ಕೆ ಬಾರದ ಪರಿಹಾರ

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ನಂತರ, ಸರ್ಕಾರವು 10 ಲಕ್ಷ ರೂ ಪರಿಹಾರ ಘೋಷಿಸಿತ್ತು. ಆದರೆ, ಘಟನೆ ನಡೆದು ಹಲವು ದಿನಗಳು ಕಳೆದರೂ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ. ಆದರೆ ನಮ್ಮ ಮಗಳೇ ಇಲ್ಲ, ಪರಿಹಾರ ಏನು ಮಾಡೋದು ಎಂದು ಕುಟುಂಬದವರು ಹೇಳುತ್ತಿದ್ದಾರೆ.

ಹುಬ್ಬಳ್ಳಿ ಬಾಲಕಿ ಹತ್ಯೆ ಕೇಸ್​: ನುಡಿದಂತೆ ನಡೆಯದ ಸರ್ಕಾರ, ಕುಟುಂಬಕ್ಕೆ ಬಾರದ ಪರಿಹಾರ
ಹುಬ್ಬಳ್ಳಿ ಬಾಲಕಿ ಹತ್ಯೆ ಕೇಸ್
Updated By: ಗಂಗಾಧರ​ ಬ. ಸಾಬೋಜಿ

Updated on: May 01, 2025 | 8:29 AM

ಹುಬ್ಬಳ್ಳಿ, ಮೇ 01: ನಗರದಲ್ಲಿ ಹಾಡಹಗಲೇ ಐದು ವರ್ಷದ ಬಾಲಕಿಯ (girl) ಮೇಲೆ ಬಿಹಾರ್ ಮೂಲದ ವ್ಯಕ್ತಿ ಅತ್ಯಾಚಾರ ಮಾಡಿ ಬಳಿಕ ಕೊಲೆ ಮಾಡಿದ್ದ. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬಿಳಿಸಿತ್ತು. ಪೊಲೀಸರ ಗುಂಡೇಟಿಗೆ ಆರೋಪಿ ಕೂಡ ಬಲಿ ಆಗಿದ್ದ. ಆದರೆ ಸದ್ಯ ವಿಷಯವೆಂದರೆ ಬಾಲಕಿ ಕುಟುಂಬಕ್ಕೆ ಸರ್ಕಾರ (government) ಹತ್ತು ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. ಆದರೆ ಇಲ್ಲಿವರಗೆ ಪರಿಹಾರ ಮಾತ್ರ ಮರಿಚಿಕೆಯಾಗಿದೆ.

ಏಪ್ರಿಲ್ 13 ರಂದು ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಬಿಹಾರ್ ಮೂಲದ ರಿತೇಶ್ ಕುಮಾರ್ ನಂತರ ಬಾಲಕಿಯನ್ನು ಕೊಲೆ ಮಾಡಿದ್ದ. ಈ ಪ್ರಕರಣ ಖಂಡಿಸಿ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ಈ ಬಗ್ಗೆ ಹುಬ್ಬಳ್ಳಿ ನಗರದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಕೆಲವೇ ಹೊತ್ತಲ್ಲಿ ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ನಂತರ‌ ವಿಚಾರಣೆಗೆ ಕರೆದುಕೊಂಡು ಹೋಗುವಾಗ ಆರೋಪಿ ತಪ್ಪಿಸಿಕೊಳ್ಳಲು ಮುಂದಾದಾಗ ಪೊಲೀಸರು‌ ಎನಕೌಂಟರ್ ಮಾಡಿದ್ದರು. ಘಟನೆ ನಡೆದು ಹದಿನೈದು ದಿನವಾದರೂ ಇಲ್ಲಿವರಗೆ ಆರೋಪಿ ಕುಟುಂಬದವರು ಸಿಕ್ಕಿಲ್ಲ. ಹೀಗಾಗಿ ಆರೋಪಿ ಶವ ಕಿಮ್ಸ್ ಶವಾಗಾರದಲ್ಲಿ ಅನಾಥವಾಗಿದೆ.

ಘಟನೆ ನಡೆದು ಹದಿನೇಳು ದಿನವಾದರೂ ಬಾರದ ಪರಿಹಾರ 

ಇನ್ನು ಘಟನೆ ನಡೆದ ದಿನ, ಕಿಮ್ಸ್​ಗೆ ಭೇಟಿ ನೀಡಿದ್ದ ವಿಧಾನಪರಿಷತ್ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ಪ್ರಸಾದ್ ಅಬ್ಬಯ್ಯ, ತಾವು ಸಿಎಂ ಜೊತೆ ಮಾತನಾಡಿದ್ದು, ಬಾಲಕಿ ಕುಟುಂಬಕ್ಕೆ ಸರ್ಕಾರ ಹತ್ತು ಲಕ್ಷ ರೂ ಪರಿಹಾರ ಮತ್ತು ಒಂದು ಮನೆಯನ್ನು ನೀಡೋದಾಗಿ ಘೋಷಣೆ ಮಾಡಿದ್ದರು. ಆದಷ್ಟು ಬೇಗನೆ ಪರಿಹಾರ ನೀಡೋದಾಗಿ ಹೇಳಿದ್ದರು. ಬಾಲಕಿ ಕುಟುಂಬ ಕಡುಬಡತನದಲ್ಲಿದೆ. ಮೃತ ಬಾಲಕಿ ಸಹೋದರಿ ಕೂಡ ವಿಕಲಾಂಗ ಚೇತನಳಾಗಿದ್ದಾಳೆ. ಹೀಗಾಗಿ ಸರ್ಕಾರದಿಂದ ಪರಿಹಾರ ನೀಡೋದಾಗಿ ಹೇಳಿದ್ದರು. ಆದರೆ ಪರಿಹಾರ ಘೋಷಣೆ ಮಾಡಿ ಬರೋಬ್ಬರಿ ಹದಿನೇಳು ದಿನವಾದರೂ ಕೂಡ, ಇಲ್ಲಿವರಗೆ ಬಾಲಕಿ ಕುಟುಂಬಕ್ಕೆ ಪರಿಹಾರ ಮಾತ್ರ ಬಂದಿಲ್ಲ.

ಇದನ್ನೂ ಓದಿ
ಹುಬ್ಬಳ್ಳಿ ಎನ್‌ಕೌಂಟರ್‌ ಕೇಸ್​: ಪಿಎಸ್​ಐ ಅನ್ನಪೂರ್ಣಗೆ ಮೆಚ್ಚುಗೆಯ ಮಹಾಪೂರ
ಹೊರ ರಾಜ್ಯಗಳಿಂದ ಬಂದವರಿಂದಲೇ ಹೆಚ್ಚು ಅಪರಾಧ ಕೃತ್ಯ: ಗೃಹ ಸಚಿವ ಪರಮೇಶ್ವರ್
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಹುಬ್ಬಳ್ಳಿ: ಬಾಲಕಿಯನ್ನ ಕೊಲೆಗೈದಿದ್ದ ಆರೋಪಿ ಪೊಲೀಸ್​ ಗುಂಡಿಗೆ ಬಲಿ

ಇದನ್ನೂ ಓದಿ: ಹುಬ್ಬಳ್ಳಿ ಬಾಲಕಿ ಹತ್ಯೆ, ಎನ್ಕೌಂಟರ್:​ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

ಸಂತ್ರಸ್ಥೆ ಬಾಲಕಿ ಮನೆಗೆ, ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ ಭೇಟಿ ನೀಡಿದೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸೇರಿದಂತೆ ಅನೇಕ ಶಾಸಕರು ಕುಟುಂಬದವರನ್ನು ಭೇಟಿ ಮಾಡಿ, ಸಾಂತ್ವಾನ ಹೇಳಿದ್ದಾರೆ. ಬಂದವರೆಲ್ಲರು ಪರಿಹಾರದ ಬಗ್ಗೆ ಮಾತನಾಡಿದ್ದಾರೆ ವಿನಃ ಯಾರು ಕೂಡ ಪರಿಹಾರ ಕೊಡಿಸುವ ಕೆಲಸ ಮಾಡಿಲ್ಲ. ಪರಿಹಾರದ ಬಗ್ಗೆ ಕುಟುಂಬದವರಿಗೆ ಇಲ್ಲಿವರಗೆ ಯಾವುದೇ ಮಾಹಿತಿ ಬಂದಿಲ್ಲವಂತೆ.

ನಮ್ಮ ಮಗಳೇ ಇಲ್ಲ, ಪರಿಹಾರ ಏನು ಮಾಡೋದು: ಕುಟುಂಬಸ್ಥರು

ಘಟನೆ ನಡೆದ ದಿನ ಪರಿಹಾರ ಕೊಡಿಸೋದಾಗಿ ಅನೇಕರು ಹೇಳಿದ್ದರು. ಆದರೆ ನಮ್ಮ ಮಗಳೇ ಇಲ್ಲ. ಪರಿಹಾರ ಏನು ಮಾಡೋದು ಎಂದು ಕುಟುಂಬದವರು ಹೇಳುತ್ತಿದ್ದಾರೆ. ಇನ್ನು ಈ ಬಗ್ಗೆ ಪರಿಹಾರ ಘೋಷಣೆ ಮಾಡಿದ್ದ ಶಾಸಕ ಪ್ರಸಾದ್ ಅಬ್ಬಯ್ಯರನ್ನು ಕೇಳಿದರೆ, ಆದಷ್ಟು ಬೇಗನೆ ಪರಿಹಾರ ಕೊಡಿಸುವ ಕೆಲಸ ಮಾಡೋದಾಗಿ ಹೇಳಿದ್ದಾರೆ. ಕಡು ಬಡತನದಲ್ಲಿರುವ ಕುಟುಂಬಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಆದಷ್ಟು ಬೇಗ ಪರಿಹಾರ ಕೊಡಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.