
ಹುಬ್ಬಳ್ಳಿ, ಮೇ 19: ಹುಬ್ಬಳ್ಳಿ ಧಾರವಾಡ (Hubballi-Dharwad) ನಗರದಲ್ಲಿ ಮೇ 2 ರಿಂದ 10 ರವರಗೆ ಒಬ್ಬನೇ ವ್ಯಕ್ತಿಯ ಹೆಸರಿನಲ್ಲಿ ಅತಿ ಹೆಚ್ಚು ಸಿಮ್ಗಳು ಮಾರಾಟವಾಗಿವೆ. ಅನೇಕ ಅಂಗಡಿಗಳಲ್ಲಿ ಹೆಚ್ಚಿನ ಸಿಮ್ ಮಾರಾಟವಾಗಿದ್ದರ ಬಗ್ಗೆ ಮಾಹಿತಿ ಇದೆ. ಯಾರು ಖರೀದಿ ಮಾಡಿದ್ದಾರೆ, ಯಾಕೆ ಖರೀದಿ ಮಾಡಿದ್ದಾರೆ, ದೇಶದ್ರೋಹಿ ಕೆಲಸಕ್ಕೆ ಅಥವಾ ಪಾಕಿಸ್ತಾನ ಪರ ಚಟುವಟಿಕೆಗಳಿಗೆ ಆ ಸಿಮ್ ಬಳಕೆಯಾಗುತ್ತಿದೆಯಾ ಎಂಬ ಬಗ್ಗೆ ತನಿಖೆ ಮಾಡಬೇಕಿದೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ (Arvind Bellad) ಆಗ್ರಹಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ದಲ್ಲಿ ಪಾಕಿಸ್ತಾನಿ ಪ್ರಜೆಗಳು ಇದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೇ 10 ಕ್ಕೆ ಈ ಸಂಬಂಧ ಧಾರವಾಡದ ಆಯುಕ್ತ ಶಶಿಕುಮಾರ್ ಅವರಿಗೆ ಪತ್ರ ಬರೆದಿದ್ದೆ. ಕೆಲವು ಮಸೀದಿಗಳಿಗೆ ಅಪರಿಚಿತರು ಬರುತ್ತಿದ್ದಾರೆ. ಅವರು ನಮ್ಮ ದೇಶದವರು ಅನಿಸುತ್ತಿಲ್ಲ. ಪಾಕಿಸ್ತಾನ ದವರು ಇರಬಹುದು ಎಂದು ಮಾಹಿತಿ ನೀಡಿದ್ದೆ. ಕಮಿಷನರ್ ಮಾತ್ರವಲ್ಲದೆ ಗೃಹ ಸಚಿವರಿಗೂ ಪತ್ರ ಬರೆದಿದ್ದೆ. ಇವತ್ತಿನವರಗೆ ಯಾವುದೇ ಕ್ರಮವನ್ನು ಪೊಲೀಸರು ಕೈಗೊಂಡಿಲ್ಲ ಎಂದು ಬೆಲ್ಲದ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪೊಲೀಸರು ವಸೂಲಿ ದಂಧೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಸಿಎಂ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಎಷ್ಟು ಜನ ಪಾಕಿಸ್ತಾನಿ ಪ್ರಜೆಗಳನ್ನು ಮರಳಿ ಅವರ ದೇಶಕ್ಕೆ ಕಳುಹಿಸಲಾಗಿದೆ? ವಿಸಾ ಇಲ್ಲದ ಎಷ್ಟು ಪಾಕಿಸ್ತಾನಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಶ್ನಿಸಿರುವ ಬೆಲ್ಲದ್, ಮಾಹಿತಿ ನೀಡಿದರೂ ಕೂಡಾ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೃಹ ಮಂತ್ರಿಗಳಿಗೆ ಹಾಗೂ ಕಮಿಷನರ್ಗೆ ಪತ್ರ ಬರೆದ ವಿಚಾರವನ್ನು ಮತ್ಯಾರಿಗೂ ಇದನ್ನು ಹೇಳಿರಲಿಲ್ಲ. ಮಾಧ್ಯಮಗಳಿಗೂ ಪತ್ರ ಬಿಡುಗಡೆ ಮಾಡಿರಲಿಲ್ಲ. ಆದರೆ ಪತ್ರ ಬರೆದು ಎಂಟು ದಿನಗಳಾದ ನಂತರ ಅದು ಬಹಿರಂಗವಾಗಿದೆ. ಬಹುಶಃ ಕಮಿಷನರ್ ಕಚೇರಿಯಿಂದಲೇ ಲೀಕ್ ಆಗಿರಬಹುದು. ಆದರೆ ಆಯುಕ್ತರು ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದಿದ್ದಾರೆ. ಇದೊಂದು ಬೇಜವಾಬ್ದಾರಿ ಹೇಳಿಕೆ ಎಂದು ಬೆಲ್ಲದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದ ಕೆಲ ಮಸೀದಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ: ಪೊಲೀಸರಿಗೆ ಬೆಲ್ಲದ್ ಪತ್ರ
ಇಷ್ಟೊಂದು ಗಂಭೀರವಾದ ಆರೋಪ ಮಾಡಿದ್ದೇನೆ. ಆದರೂ ಅವರು ಏನು ಕ್ರಮ ಕೈಗೊಂಡರು ಎಂಬುದನ್ನು ಹೇಳಿಲ್ಲ. ವಿಚಾರಣೆ ಮಾಡಬೇಕೆಂಬ ಮನಸ್ಥಿತಿಯೂ ಅವರಲ್ಲಿಲ್ಲ. ಇದು ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ ಎಂದು ಬೆಲ್ಲದ್ ಭಾನುವಾರ ಕಿಡಿ ಕಾರಿದ್ದರು.
Published On - 12:38 pm, Mon, 19 May 25