ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ 5 ಪ್ರಶ್ನೆ ಕೇಳಿದ ಮೇಯರ್: ಅವ್ಯವಹಾರ ಶಂಕೆ

Hubli Dharwad: ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮೇಯರ್ ಈರೇಶ್ ಅಂಚಟಗೇರಿ ಹಲವು ಪ್ರಶ್ನೆ. ಅವಳಿ ನಗರದಲ್ಲಿ ಚರ್ಚೆಗೆ ಗ್ರಾಸವಾದ ಹೊಸ ಬೆಳವಣಿಗೆ.

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ 5 ಪ್ರಶ್ನೆ ಕೇಳಿದ ಮೇಯರ್: ಅವ್ಯವಹಾರ ಶಂಕೆ
ಹುಬ್ಬಳ್ಳಿ & ಧಾರವಾಡ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 20, 2022 | 2:55 PM

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರವನ್ನು ಕೇಂದ್ರ ಸರ್ಕಾರವು ಸ್ಮಾರ್ಟ್ ಸಿಟಿ (smart city) ಯೋಜನೆಯಡಿ ಆಯ್ಕೆ ಮಾಡಿಕೊಂಡಿದೆ. ಹೆಚ್ಚು ಕಡಿಮೆ ಒಂದುವರೆ ವರ್ಷದಿಂದ ಈ ಯೋಜನೆಗೆ ಸಂಬಂಧಿಸಿದ ಹಲವು ಕಾಮಗಾರಿಗಳು  ಮಹಾನಗರದಲ್ಲಿ ಅನುಷ್ಠಾನಗೊಳ್ಳುತ್ತಿವೆ. ಕಾಮಗಾರಿ ಎಲ್ಲಿ ಹೇಗೆ ಜರುಗುತ್ತಿದೆ. ಯಾವ ಮಟ್ಟದಲ್ಲಿ ಕೆಲಸ ಪ್ರಗತಿಯಲ್ಲಿದೆ ಎನ್ನುವ ಮಾಹಿತಿಯೂ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಮೂರು ತಿಂಗಳಲ್ಲಿ ಒಮ್ಮೆ ಮಂತ್ರಿಗಳು ಮೀಟಿಂಗ್​ಗೆ ಬಂದು ಹೋದರೆ ಮುಗೀತು. ಮತ್ತೆ ಕಾಮಗಾರಿ ಬಗ್ಗೆ ಕೇಳುವವರು ಇಲ್ಲ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಹುಬ್ಬಳ್ಳಿಧಾರವಾಡ ಮಹಾನಗರದಲ್ಲಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳುವುದು,ರಾಜಕಾರಿಣಿಗಳು ಕೇಳುವುದು ನಿರಂತರವಾಗಿ ನಡೆಯುತ್ತಿದೆ. ಆದರೆ ಕಾಮಗಾರಿ ಎಲ್ಲಿ, ಹೇಗೆ ನಡೀತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ ಅನ್ನುವ ಆರೋಪಗಳೂ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಹಾನಗರ ಪಾಲಿಕೆಯ ಮೇಯರ್ ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಈರೇಶ್ ಅಂಚಟಗೇರಿ, ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕೆಲವು ಮುಖ್ಯ ಪ್ರಶ್ನೆಗಳನ್ನು ಕೇಳಿದ್ದೆನೆ. ಈವರೆಗೆ ಪಟ್ಟಿ ಮಾಡಲಾದ ಒಟ್ಟು ಕಾಮಗಾರಿಗಳ ವಿವರ, ಗುತ್ತಿಗೆದಾರ ಯಾರು? ಅವರಿಗೆ ಬಿಡುಗಡೆ ಮಾಡಲಾದ ಮುಂಗಡ ಪಾವತಿ ಎಷ್ಟು? ಕಾಮಗಾರಿಗಾಗಿ ಮಾಡಿಕೊಂಡಿರುವ ಬದಲಾವಣೆಗಳೇನು? ಹೆಚ್ಚುವರಿ ಅನುದಾನ ಪಾವತಿಯಾಗಿದೆಯೇ? ಇಲ್ಲವೇ ದಂಡ ಹಾಕಲಾಗಿದೆಯೇ ಎಂಬ ವಿವರಗಳನ್ನು ಮೇಯರ್ ಕೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಅಗ್ನಿ ಅವಗಢ, ಹೋಟೆಲ್ ಮತ್ತು ಎಟಿಎಮ್ ಕಿಯಾಸ್ಕ್ ಗೆ ಬೆಂಕಿ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

ಕಾಮಗಾರಿ ಪ್ರಾರಂಭ ಮಾಡಿದ ದಿನದಿಂದ ಇಲ್ಲಿತನಕ ತಿಂಗಳವಾರು ಮಾಹಿತಿ ಒದಗಿಸುವಂತೆ ಕೋರಿದ್ದಾರೆ. ಐದು ಪ್ರಶ್ನೆಗಳನ್ನು ಕೇಳಿ ಹೆಚ್ಚು ಕಡಿಮೆ ನಾಲ್ಕು ತಿಂಗಳು ಕಳೆದರೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಉತ್ತರವೇ ನೀಡಿಲ್ಲ. ಒಂದುವರೆ ಸಾವಿರ ಕೋಟಿ ರೂಪಾಯಿ ಅನುದಾನದಲ್ಲಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. ಎಲ್ಲಿಯೂ ಯಾವುದೇ  ಕಾಮಗಾರಿ ನಡೆದಿದೆ ಎನ್ನುವುದು ಕಣ್ಣಿಗೆ ಕಂಡಿಲ್ಲ. ಇದೀಗ ಹಲವು ಅನುಮಾನಗಳ ಹಿನ್ನೆಲೆಯಲ್ಲಿ ಮೇಯರ್ ಈರೇಶ್ ಅಂಚಟಗೇರಿ ಸ್ಮಾರ್ಟ್​ ಸಿಟಿ ಯೋಜನೆಗಳ ಅಧಿಕಾರಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಇದು ಅವಳಿ ನಗರದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರತಿಕ್ರಿಯಿಸುವಂತೆ ‘ಸ್ಮಾರ್ಟ್ ಸಿಟಿ’ ಅಧಿಕಾರಿಗಳಿಗೆ ಈ ಬಗ್ಗೆ ಟಿವಿ 9 ಪ್ರತಿನಿಧಿ ಪ್ರಶ್ನಿಸಿದರಾದರೂ ಯಾವುದೇ ಉತ್ತರ ಸಿಗಲಿಲ್ಲ.

ವರದಿ: ರಹಮತ್ ಕಂಚಗಾರ್ ಟಿವಿ9 ಹುಬ್ಬಳ್ಳಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:54 pm, Sun, 20 November 22