ಹುಬ್ಬಳ್ಳಿ, ಡಿಸೆಂಬರ್ 29: ಗ್ಯಾಸ್ ಸಿಲಿಂಡರ್ (Gas Cylinder) ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡು ಕಿಮ್ಸ್ಗೆ (Kims) ದಾಖಲಾಗಿದ್ದ ಮತ್ತೋರ್ವ ಅಯ್ಯಪ್ಪ (Ayyappa) ಮಾಲಾಧಾರಿ ಮೃತಪಟ್ಟಿದ್ದಾರೆ. ಶಂಕರ್ ಚವ್ಹಾಣ್ (29) ಮೃತ ಅಯ್ಯಪ್ಪ ಮಾಲಾಧಾರಿ. ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ನಾಲ್ವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಹುಬ್ಬಳ್ಳಿಯ ಉಣಕಲ್ ನಿವಾಸಿಯಾಗಿದ್ದ ಶಂಕರ್ ಚವ್ಹಾಣ್, ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ 13 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಶಂಕರ್ ಚವ್ಹಾಣ್ ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ದೊಡ್ಡಮ್ಮನ ಆರೈಕೆಯಲ್ಲಿ ಬೆಳೆದಿದ್ದರು. ಶಂಕರ್ ಚವ್ಹಾಣ್ ಮೊದಲ ಬಾರಿ ಅಯ್ಯಪ್ಪನ ಮಾಲೆ ಧರಿಸಿದ್ದರು. ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 22ರಂದು ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ತೀರ್ವವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ: ಸಿಲಿಂಡರ್ ಸ್ಪೋಟಗೊಂಡು 9 ಜನ ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯ
ಶಂಕರ್ ಚವ್ಹಾಣ್ಗೆ ಕಳೆದ ಏಳು ದಿನಗಳಿಂದ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಂಕರ್ ಚವ್ಹಾಣ್ ಶನಿವಾರ ಮಧ್ಯರಾತ್ರಿ ಕೊನೆಯುಸಿರು ಎಳೆದಿದ್ದಾರೆ. ಶವಗಾರಾದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಾಯಿನಗರದ ಅಚ್ಚವ್ವಳ ಕಾಲೋನಿಯಲ್ಲಿ ಕಳೆದ ಭಾನುವಾರ ರಾತ್ರಿ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ಒಟ್ಟು 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಮಂದಿಯಲ್ಲಿ ಐವರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24), ಶಂಕರ್ ಚವ್ಹಾಣ್ (29) ಮೃತ ದುರ್ದೈವಿಗಳು. ಇನ್ನುಳಿದ ನಾಲ್ವರು ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಮೃತರಾದ ನಿಜಲಿಂಗಪ್ಪ ಬೇಪುರಿಯ ದೇಹ ಶೇ86 ರಷ್ಟು, ಸಂಜಯ್ ಸವದತ್ತಿಯ ದೇಹ ಶೇ80 ರಷ್ಟು, ರಾಜು ಮೂಗೇರಿಯ ದೇಹ ಶೇ74 ರಷ್ಟು, ಲಿಂಗಾರಾಜು ಬೀರನೂರ ದೇಹ ಶೇ86 ರಷ್ಟು, ಶಂಕರ್ ಚವ್ಹಾಣ್ ದೇಹ ಶೇ99 ರಷ್ಟು ಸುಟ್ಟಿತ್ತು.
ಇನ್ನು, ಚಿಂತಾಜನಕ ಸ್ಥಿತಿಯಲ್ಲಿರುವ ಮಂಜುನಾಥ್ ವಾಗ್ಮೋಡೆಯ ದೇಹ ಶೇ70 ರಷ್ಟು, ಪ್ರಕಾಶ್ ಬಾರಕೇರ್ ದೇಹ ಶೇ91 ರಷ್ಟು, ತೇಜಸ್ವರ್ ಸಾತರೆಯ ದೇಹ ಶೇ74 ರಷ್ಟು ಸುಟ್ಟಿದೆ. ವಿನಾಯಕ್ ಭಾರಕೇರ್ ದೇಹ ಶೇ25 ರಷ್ಟು ಸುಟ್ಟಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:23 am, Sun, 29 December 24