ಹುಬ್ಬಳ್ಳಿಯಲ್ಲಿ ಘೋರ ದುರಂತ: ಸಿಲಿಂಡರ್ ಸ್ಪೋಟಗೊಂಡು 9 ಜನ ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯ
ಹುಬ್ಬಳ್ಳಿಯ ಉಣಕಲ್‌ನ ಅಯ್ಯಪ್ಪ ದೇವಸ್ಥಾನದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ 9 ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದಾರೆ. ನಿದ್ರೆಯಲ್ಲಿ ಸಿಲಿಂಡರ್‌ಗೆ ಕಾಲು ತಾಗಿ ಸ್ಫೋಟ ಸಂಭವಿಸಿದೆ. ಗಾಯಾಳುಗಳಲ್ಲಿ ಕೆಲವರಿಗೆ ತೀವ್ರ ಸುಟ್ಟಗಾಯಗಳಾಗಿವೆ. ಕಿಮ್ಸ್ ಆಸ್ಪತ್ರೆಯ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.
ಹುಬ್ಬಳ್ಳಿ, ಡಿಸೆಂಬರ್ 23: ನಿದ್ದೆ ಮಂಪರಲ್ಲಿ ಸಿಲಿಂಡರ್‌ಗೆ (Gas Cylinder Blast) ಕಾಲು ತಾಗಿದ ಪರಿಣಾಮ ದೇವರ ಮುಂದೆ ಇದ್ದ ದೀಪಕ್ಕೆ ತಗುಲಿ ಸಿಲಿಂಡರ್ ಬ್ಲಾಸ್ಟ್ ಆಗಿ 9 ಜನ ಮಾಲಾಧಾರಿಗಳಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ನಗರದ ಉಣಕಲ್ ಸಮೀಪದ ಅಚ್ಚವ್ವನ ಕಾಲೋನಿಯಲ್ಲಿರುವ ಈಶ್ವರ ದೇವಸ್ಥಾನದ ಮೇಲೆ ಇರುವ ಅಯ್ಯಪ್ಪನ ಸನ್ನಿಧಿಯಲ್ಲಿ ಅವಘಡ ಸಂಭವಿಸಿದ್ದು, 8 ಮಾಲಾಧಾರಿಗಳು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾರೆ.
ನಡೆದದ್ದೇನು?
8X10 ಅಳತೆಯ ಚಿಕ್ಕ ಕೋಣೆಯಲ್ಲಿ ಒಂಬತ್ತು ಜನ ಅಯ್ಯಪ್ಪ ಮಾಲಾಧಾರಿಗಳು ಮಲಗಿದ್ದರು. ಈ ವೇಳೆ ನಿದ್ರೆ ಮಂಪರಿನಲ್ಲಿ ಅಯ್ಯಪ್ಪ ಮಾಲಾಧಾರಿಯೊಬ್ಬರ ಕಾಲು ಸಿಲಿಂಡರ್‌ಗೆ ತಾಗಿದೆ. ಪರಿಣಾಮ ಅದು ಅಯ್ಯಪ್ಪನ ಮುಂದೆ ಇದ್ದ ದೀಪಕ್ಕೆ ಹತ್ತಿಕೊಂಡು ಸಿಲಿಂಡರ್ ಬ್ಲಾಸ್ಟ್ ಆಗಿದೆ. ಕಳೆದ ಮೂರು ದಿನಗಳಿಂದ ಅಯ್ಯಪ್ಪ ಮಾಲಾಧಾರಿಗಳು ಸಿಲಿಂಡರ್ ಬಳಕೆ ಮಾಡಿರಲಿಲ್ಲ, ರೆಗ್ಯುಲೇಟರ್ ಪೈಪ್ನಿಂದ ಸಣ್ಣದಾಗಿ ಅನಿಲ ಸೋರಿಕೆಯಾಗಿದ ಹಿನ್ನಲೆ ಸಿಲಿಂಡರ್, ದೀಪಕ್ಕೆ ತಾಗಿದ ಕೂಡಲೇ ಬ್ಲಾಸ್ಟ್ ಆಗಿದೆ. ಪರಿಣಾಮ ಸನ್ನಿಧಿಯಲ್ಲಿದ್ದ 9 ಮಾಲಾಧಾರಿಗಳು ಗಾಯಗೊಂಡಿದ್ದಾರೆ.
ಅವಘಡದಲ್ಲಿ ತಂದೆ-ಮಗ
ತಡರಾತ್ರಿ ಒಂದು ಗಂಟೆ ಸುಮಾರಿಗೆ ಜೋರಾದ ಶಬ್ದ ಕೇಳಿದ್ದು, ಅಲ್ಲದೆ ಕೋಣೆಯ ತುಂಬೆಲ್ಲಾ ಬೆಂಕಿ ಆವರಿಸಿಕೊಂಡಿದ್ದನ್ನು ನೋಡಿ ಓಡೋಡಿ ಬಂದ ಸ್ಥಳೀಯರು, ಮಾಲಾಧಾರಿಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. 9 ಜನರ ಪೈಕಿ ತಂದೆ, ಮಗ ಕೂಡ ಮಾಲಾಧಾರಣೆ ಮಾಡಿದ್ದರು. 42 ವರ್ಷದ ಪ್ರಕಾಶ್ ಬಾರಕೇರ್ ಹಾಗೂ 12 ವರ್ಷದ ವಿನಾಯಕ್ ಬಾರಕೇರ್ ಕಳೆದ ಮೂರು ದಿನಗಳ ಹಿಂದೆ ಮಾಲಾಧಾರಣೆ ಮಾಡಿದ್ದರು. ಅವಘಡದಲ್ಲಿ ಇಬ್ಬರಿಗೂ ಗಂಭೀರ ಗಾಯವಾಗಿದೆ. ಸದ್ಯ ಇಬ್ಬರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 12 ವರ್ಷದ ವಿನಾಯಕ್ ಬಾರಕೇರ್ಗೆ ಶೇಕಡಾ 25 ರಷ್ಟು ಸುಟ್ಟ ಗಾಯವಾಗಿದ್ದು, ತಂದೆ ಪ್ರಕಾಶ್ ಬಾರಕೇರ್ಗೆ ಶೇ 91 ರಷ್ಟು ಸುಟ್ಟಗಾಯವಾಗಿದೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಧಾರವಾಡ, ಶಿವಮೊಗ್ಗದಲ್ಲಿ ಅಪಘಾತ; ಐವರ ಸಾವು
ಇನ್ನು ನಿನ್ನೆ ತಡರಾತ್ರಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಬಂದಾಗ ಕಿಮ್ಸ್ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಸರಿಯಾದ ಸಮಯಕ್ಕೆ ಔಷಧಿ ನೀಡಿಲ್ಲವಂತೆ, ಅಲ್ಲದೆ ಗಾಯಕ್ಕೆ ಬೇಕಾದ ಔಷಧಿಯನ್ನು ಹೊರಗೆ ಬರೆದುಕೊಟ್ಟಿದ್ದಾರಂತೆ. ಔಷಧಿ ಕೊಡದೆ ಇದ್ದಾಗ ಅಯ್ಯಪ್ಪ ಮಾಲಾಧಾರಿಗಳೆ ಔಷಧ ಗೋದಾಮಿನ ಕೀ ಮುರಿದು ಔಷಧ ತಂದಿದ್ದಾರಂತೆ. ಯಾವಾಗ ಅಯ್ಯಪ್ಪ ಮಾಲಾಧಾರಿಗಳ ಆಕ್ರೋಶ ಹೆಚ್ಚಾಯ್ತೋ, ಕಿಮ್ಸ್ ಸಿಬ್ಬಂದಿ, ಮಾಲಾಧಾರಿಗಳ ಚಿಕಿತ್ಸೆಗೆ ಪ್ರತ್ಯೇಕ ಕೊಠಡಿ ಮೀಸಲಿಟ್ಟಿದ್ದಾರೆ. ಕಿಮ್ಸ್ ಆಡಳಿತ ಮಂಡಳಿ ವಿರುದ್ಧ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.
ಶಾಸಕ ಪ್ರಸಾದ್ ಅಬ್ಬಯ್ಯ, ಪ್ರಲ್ಹಾದ್ ಜೋಶಿ ಭೇಟಿ
ಇನ್ನು ಆಸ್ಪತ್ರೆಗೆ ಭೇಟಿ ನೀಡಿದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಕೂಡ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ ಆಗಿರೋದನ್ನ ಒಪ್ಪಿಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಕ್ಕಿಲ್ಲ ಅನ್ನೋದನ್ನ ಶಾಸಕರೇ ಒಪ್ಪಿಕೊಂಡಿದ್ದಾರೆ. ಹೀಗಾಗಬಾರದಿತ್ತು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಿಮ್ಸ್ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದಿದ್ದಾರೆ.
ಇನ್ನು ಸಿಲಿಂಡರ್ ಸ್ಪೋಟ ಪ್ರಕರಣದ ಸುದ್ದಿ ತಿಳಿಯುತ್ತಲೇ ಕಿಮ್ಸ್ ಮುಂದೆ ನೂರಾರು ಅಯ್ಯಪ್ಪ ಮಾಲಾಧಾರಿಗಳು ಆಗಮಿಸಿದ್ದರು. ಗಾಯಾಳುಗಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಲು ರಾಜಕೀಯ ನಾಯಕರು ಕೂಡ ಧಾವಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಮಹೇಶ್ ಟೆಂಗಿನಕಾಯಿ, ಪ್ರಸಾದ್ ಅಬ್ಬಯ್ಯ, ಡಿಸಿ ದಿವ್ಯ ಪ್ರಭು, ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಅಯ್ಯಪ್ಪನ ಸನ್ನಿಧಿಯಲ್ಲಿ ಒಟ್ಟು 14 ಜನ ವಾಸ ಮಾಡುತ್ತಿದ್ದರು. ಎರಡು ಕೋಣೆ ಇರುವ ಕಾರಣಕ್ಕೆ ಐದು ಜನ ಮಾಲಾಧಾರಿಗಳು ಕೆಳಗೆ ಮಲಗಿದ್ದರು. ಒಂಬತ್ತು ಜನ ಮೇಲ್ಗಡೆ ಮಲಗಿದ್ದರು. ಮೇಲ್ಗಡೆ ಕೋಣೆಯಲ್ಲಿ ಸಿಲಿಂಡರ್ ಸೋರಿಕೆಯಾದ ಪರಿಣಾಮ ಅಷ್ಟು ಜನ ಗಾಯಗೊಂಡಿದ್ದಾರೆ. ಇನ್ನು ಗಾಯಗೊಂಡವರ ವಿವರ ನೋಡೋದಾದ್ರೆ ಬಹುತೇಕ ಎಲ್ಲರೂ ಹುಬ್ಬಳ್ಳಿ ನಿವಾಸಿಗಳು. ಕೆಲವರು ಮೊದಲ ಸಲ ಅಯ್ಯಪ್ಪ ಮಾಲಾಧಾರಣೆ ಮಾಡಿದ್ದಾರೆ.
ಗಾಯಗೊಂಡ ಅಯ್ಯಪ್ಪ ಮಾಲಾಧಾರಿಗಳ ವಿವರ
ವಿನಾಯಕ್ ಭಾರಕೇರ್ (12 ವರ್ಷ), ಪ್ರಕಾಶ್ ಬಾರಕೇರ್ (42 ವರ್ಷ), ತೇಜಸ್ವರ್ ಸಾತರೆ (26 ವರ್ಷ), ಶಂಕರ್ ಚವ್ಹಾಣ್ (29 ವರ್ಷ), ಪ್ರವೀಣ್ ಬೀರನೂರ (24 ವರ್ಷ), ಮಂಜುನಾಥ್ ವಾಗ್ಮೋಡೆ (22 ವರ್ಷ), ನಿಜಲಿಂಗಪ್ಪ ಬೇಪುರಿ (58 ವರ್ಷ), ರಾಜು ಮೂಗೇರಿ (21 ವರ್ಷ) ಮತ್ತು ಸಂಜಯ್ ಸವದತ್ತಿ (20 ವರ್ಷ).
ಒಂಬತ್ತು ಜನರ ಪೈಕಿ 12 ವರ್ಷದ ಮಣಿಕಂಠ ಸ್ವಾಮಿಗೆ ಮಾತ್ರ ಕಡಿಮೆ ಸುಟ್ಡ ಗಾಯವಾಗಿದೆ. ಇನ್ನು ಶೇ 65 ರಷ್ಟು ಸುಟ್ಟ ಗಾಯವಾಗಿದ್ದರೆ ಚಿಕಿತ್ಸೆಗೆ ಸ್ಪಂದಿಸಬಹದು. ಆದರೆ ಬಹುತೇಕ ಮಾಲಾಧಾರಿಗಳಿಗೆ ಶೇ 75 ಕ್ಕೂ ಹೆಚ್ಚು ಸುಟ್ಟ ಗಾಯವಾಗಿವೆ. ನಾವು ಚಿಕಿತ್ಸೆ ನೀಡುತ್ತಿದ್ದೇವೆ. ಹೊರ ಜಿಲ್ಲೆಯಿಂದಲೂ ತಜ್ಞರು ಕರೆಸುವ ಪ್ರಯತ್ನ ಮಾಡುತ್ತಿದ್ದೇವೆ. ಕಿಮ್ಸ್ ನಿರ್ದೇಶಕ, ಸಿಬ್ಬಂದಿಗಳ ನಿರ್ಲಕ್ಷ್ಯ ವಿಚಾರವಾಗಿ ಕಮೀಟಿ ರಚನೆ ಮಾಡಿದ್ದು, ವರದಿ ಬಂದ ಕೂಡಲೇ ಕ್ರಮಕೈಗೊಳ್ಳುತ್ತೇವೆ. ಇನ್ನು ಗಾಯಾಳುಗಳ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವ ಜೋಶಿ, ಪ್ರಮೋದ್ ಮುತಾಲಿಕ್ ಮಾಲಾಧಾರಿಗಳು ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸಿದರು.
ಇದನ್ನೂ ಓದಿ: ರಾತ್ರಿಯಾದರೆ ಸಾಕು ವಿಡಿಯೋ ಕಾಲ್: ಇನ್ಸ್ಪೆಕ್ಟರ್ ವಿರುದ್ಧ ಮಹಿಳಾ ಸಿಬ್ಬಂದಿ ದೂರು
ಒಂಬತ್ತು ಜನ ಮಾಲಾಧಾರಿಗಳ ಪೈಕಿ ಎಂಟು ಜನ ಜೀವನ್ಮರಣ ನಡುವೆ ಹೋರಾಟ ಮಾಡುತ್ತಿದ್ದಾರೆ. ಬಹುತೇಕ ಬಡವರೇ ಆಗಿರುವ ಮಾಲಾಧಾರಿಗಳಿಗೆ ಸರ್ಕಾರ ಪರಿಹಾರ ಕೊಡಬೇಕು ಎಬ ಕೂಗು ಕೇಳಿ ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.