ಕೈಗಾರಿಕಾ ವಲಯದ 9,823 ಕೋಟಿ ರೂ. ಮೊತ್ತದ ಪ್ರಸ್ತಾವನೆಗಳಿಗೆ ಸಿಎಂ ನೇತೃತ್ವದ ಸಭೆ ಅನುಮೋದನೆ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಚಿವರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಕೈಗಾರಿಕಾ ವಲಯದ ವಿವಿಧ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಯಿತು. ಸಭೆಯಲ್ಲಿ ಯಾರೆಲ್ಲ ಇದ್ದರು? ಯಾವೆಲ್ಲ ಪ್ರಸ್ತಾವನೆಗಳಿಗೆ ಅನುಮೋದನೆ ದೊರೆಯಿತು? ಏನೇನು ಚರ್ಚೆಗಳು ನಡೆದವು ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಡಿಸೆಂಬರ್ 23: ಕರ್ನಾಟಕದ ವಿವಿಧ ಕೈಗಾರಿಕಾ ವಲಯಗಳ 10 ಪ್ರಸ್ತಾವನೆಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಇದರಲ್ಲಿ ಒಟ್ಟು 9,823 ಕೋಟಿ ರೂ. ಮೊತ್ತದ ಯೋಜನೆಗಳು ಸೇರಿವೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಸೇರಿದಂತೆ ಉತ್ಪಾದನಾ ವಲಯದ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು.
ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ನಲ್ಲಿ ಸೆಮಿಕಂಡಕ್ಟರ್ ವಲಯದಲ್ಲಿ 3,425 ಕೋಟಿ ವೆಚ್ಚದ ಪ್ರಥಮ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನ ಉತ್ಪಾದನೆ ಸಂದರ್ಭದಲ್ಲಿ ರೈತರಿಗೂ ಪಾಲು ನೀಡುವ ಕುರಿತು ಪರಿಶೀಲಿಸಲು ಸಭೆಯಲ್ಲಿ ಸೂಚನೆ ನೀಡಲಾಯಿತು. ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಅನುಸರಿಸುತ್ತಿರುವ ನಿಯಮ ಪರಿಶೀಲನೆ ನಡೆಸಲು ಸೂಚಿಸಲಾಯಿತು.
ಜಮೀನು ಪಡೆದು ಕೈಗಾರಿಕೆ ಆರಂಭಿಸದಿದ್ದರೆ ದಂಡ?
ಕೈಗಾರಿಕೆ ಆರಂಭಿಸಲು ಕೆಐಎಡಿಬಿಯಿಂದ ಜಮೀನು ಪಡೆದು ತಟಸ್ಥರಾದರೆ ದಂಡ ವಿಧಿಸುವ ಬಗ್ಗೆಯೂ ಪರಿಶೀಲನೆಗೆ ಸಭೆಯಲ್ಲಿ ಸೂಚಿಸಲಾಯಿತು. ನಿಗದಿತ ಅವಧಿಯಲ್ಲಿ ಕೈಗಾರಿಕೆ ಆರಂಭಿಸದೆ ತಟಸ್ಥವಾಗಿದ್ದರೆ ದಂಡ ವಿಧಿಸುವುದೂ ಸೇರಿದಂತೆ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಲು ನಿರ್ದೇಶನ ನೀಡಲಾಯಿತು.
ಇದನ್ನೂ ಓದಿ: ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಹೆಚ್ಡಿ ಕುಮಾರಸ್ವಾಮಿ ಗುಡ್ ನ್ಯೂಸ್
ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಕೈಗಾರಿಕೆ ಕಾರ್ಯನಿರ್ವಹಣೆ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ವರದಿ: ಈರಣ್ಣ ಬಸವ, ‘ಟಿವಿ9’
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ