Women’s Day Special: ಹುಬ್ಬಳ್ಳಿಯಿಂದ ಕಾರಟಗಿಗೆ ಹೊರಟ ಸ್ಪೆಷಲ್ ಟ್ರೈನ್, ಇಲ್ಲಿ ಪೈಲಟ್ ಟಿಟಿ ಎಲ್ಲರೂ ಮಹಿಳೆಯರೇ
ಹುಬ್ಬಳ್ಳಿಯಿಂದ ಕಾರಟಗಿಗೆ ಮಹಿಳಾ ಸಿಬ್ಬಂದಿ ಚಲಾಯಿಸಿಕೊಂಡು ಹೊರಟ ರೈಲಿಗೆ ಮಹಿಳಾ ಸಿಬ್ಬಂದಿಯೇ ಗ್ರೀನ್ ಸಿಗ್ನಲ್ ನೀಡಿದರು. ಸುಮಾರು 200 ಕಿಲೋಮೀಟರ್ ದೂರ ಕ್ರಮಿಸೋ ಈ ಟ್ರೈನ್ ಹುಬ್ಬಳ್ಳಿಯಿಂದ ಗದಗ ಮೂಲಕ ಪ್ರಯಾಣ ಬೆಳೆಸಿತು.
ಹುಬ್ಬಳ್ಳಿ: ಇಲ್ಲಿ ಮಹಿಳೆಯರೇ ಲೋಕೋ ಪೈಲಟ್. ಮಹಿಳೆಯರೇ ಟಿಟಿ, ಮಹಿಳೆಯರೇ ಪೊಲೀಸ್ ಸಿಬ್ಬಂದಿ. ಹುಬ್ಬಳ್ಳಿಯಿಂದ ಕಾರಟಗಿಗೆ ಹೊರಟ ಟ್ರೈನ್ ನ ಸ್ಪೆಷಾಲಿಟಿ ಇದು. ಈ ವಿಶೇಷ ರೈಲಿನಲ್ಲಿ ಎಲ್ಲರೂ ಮಹಿಳಾ ಸಿಬ್ಬಂದಿಯೇ. ಮಹಿಳಾ ದಿನಾಚರಣೆ(Women’s Day) ಅಂಗವಾಗಿ ಹೊರಟ ಸ್ಪೆಷಲ್ ಟ್ರೈನ್ನಲ್ಲಿ(Women’s Day Special Train) ಮಹಿಳೆಯರದ್ದೇ ಕಾರುಬಾರು ಜೋರಾಗಿತ್ತು. ಈ ಟ್ರೈನ್ ಗೆ ಹಸಿರು ನಿಶಾನೆ ತೋರಿದವರೂ ಮಹಿಳೆಯರೇ ಅನ್ನೋದು ಮತ್ತೊಂದು ವಿಶೇಷ. ಈ ಟ್ರೈನ್ ಹೋಗೋ ವೇಗ ನೋಡಿದ್ರೆ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಅನ್ನೋ ಮಾತು ಬಾಯಲ್ಲಿ ಬಾರದೇ ಇರೋಲ್ಲ.
ಹುಬ್ಬಳ್ಳಿಯಿಂದ ಕಾರಟಗಿಗೆ ಮಹಿಳಾ ಸಿಬ್ಬಂದಿ ಚಲಾಯಿಸಿಕೊಂಡು ಹೊರಟ ರೈಲಿಗೆ ಮಹಿಳಾ ಸಿಬ್ಬಂದಿಯೇ ಗ್ರೀನ್ ಸಿಗ್ನಲ್ ನೀಡಿದರು. ಸುಮಾರು 200 ಕಿಲೋಮೀಟರ್ ದೂರ ಕ್ರಮಿಸೋ ಈ ಟ್ರೈನ್ ಹುಬ್ಬಳ್ಳಿಯಿಂದ ಗದಗ ಮೂಲಕ ಪ್ರಯಾಣ ಬೆಳೆಸಿತು. ಅಂಬಿಕಾ ಅಂಕಲಗಿ ಲೋಕೋ ಪೈಲಟ್ ಆಗಿ ರೈಲು ಚಲಾಯಿಸಿದರು. ಮಹಿಳಾ ದಿನಾಚರಣೆ ಸ್ಪೆಷಲ್ ಟ್ರೈನ್ ನಲ್ಲಿ 14 ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡಿದರು. ನೈರುತ್ಯ ರೈಲ್ವೆ ವಲಯದ ಜಿಎಂ ಸಂಜೀವ್ ಕಿಶೋರ್ ಸ್ವತಹ ಎದುರಿಗಿದ್ದು ಶುಭ ಕೋರಿದರು. ವಿಶೇಷವಾಗಿ ಅಲಂಕರಿಸಿದ ರೈಲು ಕಾರಟಗಿಗೆ ಪ್ರಯಾಣ ಬೆಳಸಿತು.
ಈ ವೇಳೆ ಮಾತನಾಡಿದ ಲೋಕೋ ಪೈಲಟ್ ಅಂಬಿಕಾ ಅಂಕಲಗಿ, ಇದೊಂದು ವಿಶಿಷ್ಟ ಅನುಭವ. ರೈಲ್ವೆ ಇಲಾಖೆಯಲ್ಲಿ ಮಹಿಳೆಯರು ಕಾರ್ಯರ್ನಿರ್ವಹಿಸುತ್ತಾರೆ. ಆದರೆ ಬಹುತೇಕ ಕಡೆ ಅಂತಹ ಮಹತ್ವದ ಜಾಗಗಳಲ್ಲಿ ಕಾರ್ಯನಿರ್ವಹಣೆಗೆ ಅವಕಾಶವಿರೋಲ್ಲ. ಆದರೆ ಇಡೀ ಟ್ರೈನ್ಗೆ ಮಹಿಳೆಯರೇ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸ್ತಿರೋದು ಥ್ರಿಲ್ ಕೊಡುತ್ತೆ. ಮಹಿಳಾ ದಿನಾಚರಣೆ ಅಂಗವಾಗಿ ಇಂಥದ್ದೊಂದು ಅವಕಾಶ ನೀಡಿರೋದಕ್ಕೆ ಥ್ಯಾಂಕ್ಸ್ ಎಂದು ಅಂಬಿಕಾ ಖುಷಿಪಟ್ಟಿದ್ದಾರೆ.
ಇದೇ ವೇಳೆ ಸ್ಪೆಷಲ್ ಟ್ರೈನ್ ನಲ್ಲಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿರೋದಕ್ಕೆ ಇತರೆ ಮಹಿಳಾ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳೆಯರೆಂದರೆ ನಾಲ್ಕು ಗೋಡೆಗಳಿಗೆ ಸೀಮಿತ. ಅವರ ಕೆಲಸವೇನಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಅನ್ನೋ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರೂ ಎಲ್ಲ ರಂಗದಲ್ಲಿಯೂ ಕಾರ್ಯನಿರ್ವಹಿಸಬಲ್ಲರು ಅನ್ನೋದನ್ನು ನಾವು ತೋರಿಸಿ ಕೊಡ್ತಿದ್ದೇವೆ ಎಂದು ಮಹಿಳಾ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಟ್ರೈನ್ ನಲ್ಲಿ ಟಿಟಿ, ಪೊಲೀಸ್ ಸಿಬ್ಬಂದಿಯಿಂದ ಹಿಡಿದು ಎಲ್ಲರೂ ಮಹಿಳೆಯರಾಗಿದ್ದೇವೆ. ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ನಮಗೆ ಇಂಥದ್ದೊಂದು ಅವಕಾಶ ನೀಡಿದ್ದಾರೆ. ಇದನ್ನು ಯಶಸ್ವಿಯಾಗಿ ನಿಭಾಯಿಸ್ತೇವೆ ಅನ್ನೋ ವಿಶ್ವಾಸವಿದೆ ಎಂದು ಟಿಟಿಇ ಸುಮಲತಾ ಹಾಗೂ ಎ.ಎಸ್.ಐ. ಸಂತೋಶಿ ಅಯ್ಯಮ್ಮ ಅಭಿಪ್ರಾಯಪಟ್ಟಿದ್ದಾರೆ.
ಇಡೀ ಸಿಬ್ಬಂದಿಯನ್ನು ಹೋಲಿಸಿದಾಗ ಪುರುಷರಿಗಿಂತ ಮಹಿಳಾ ಸಿಬ್ಬಂದಿ ಹೆಚ್ಚಿರಬಹುದು. ಆದರೆ ಅವರಲ್ಲಿಯೂ ಪ್ರತಿಭಾವಂತರಿದ್ದಾರೆ. ಅವರಿಗೂ ಅವಕಾಶ ಕೊಡಬೇಕೆಂದು ಸಂಪೂರ್ಣವಾಗಿ ಟ್ರೈನ್ ಗೆ ಮಹಿಳಾ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಮಹಿಳಾ ದಿನಾಚರಣೆ ಅಂಗವಾಗಿ ಸ್ಪೆಷಲ್ ಟ್ರೈನ್ ಓಡಿಸ್ತಿದ್ದೇವೆ ಎಂದು ನೈರುತ್ಯ ರೈಲ್ವೆ ವಲಯದ ಜಿಎಂ ಸಂಜೀವ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ. ಖುಷಿಯಿಂದಲೇ ಮಹಿಳಾ ಸಿಬ್ಬಂದಿ ಕಾರಟಗಿ ಕಡೆ ರೈಲು ಚಲಾಯಿಸಿಕೊಂಡು ಹೊರಟಿದ್ದು, ಮಹಿಳೆಯರ ಜೊತೆ ಪುರುಷರೂ ಶುಭ ಕೋರಿದ್ದಾರೆ. ಬೆಳಿಗ್ಗೆ ಹೊರಟ ಈ ರೈಲು ಕಾರಟಗಿಗೆ ತಲುಪಿ ಮತ್ತೆ ಹುಬ್ಬಳ್ಳಿಗೆ ವಾಪಸ್ಸಾಗಲಿದೆ.
ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಹುಬ್ಬಳ್ಳಿ
ಇದನ್ನೂ ಓದಿ: Women’s Day Special: ನಗರದ ಪೊಲೀಸ್ ಠಾಣೆಗಳಲ್ಲಿ ಒಂದು ದಿನ ಸ್ಟೇಷನ್ ಹೌಸ್ ಅಫೀಸರ್ಗಳಾಗಿ ಮಹಿಳಾ ಸಿಬ್ಬಂದಿ ನೇಮಕ