ಹುಬ್ಬಳ್ಳಿ, ಜೂನ್.30: ಕಾಂಗ್ರೆಸ್ (Congress) ತನ್ನ ಎಡೆಯಲ್ಲಿ ಕತ್ತೆ ಸತ್ತು ಬಿದ್ದರೆ ಬಿಜೆಪಿ (BJP) ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ (Hubballi) ಮಾದ್ಯಮದವರೊಂದಿಗೆ ಮಾತನಾಡಿದ ಜೋಶಿಯವರು, ರಾಜ್ಯದಲ್ಲಿ ನಡೆಯುತ್ತಿರುವ ಸಿಎಂ, ಡಿಸಿಎಂ ಹುದ್ದೆ ವಿವಾದದಲ್ಲಿ ಬಿಜೆಪಿಯವರ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ್ದಾರೆ.
ರಾಜ್ಯ ಸರ್ಕಾರದ ಸಚಿವರೊಬ್ಬರು ಸಿಎಂ, ಡಿಸಿಎಂ ಚರ್ಚೆ, ವಿವಾದ ಹುಟ್ಟು ಹಾಕುವಲ್ಲಿ ಬಿಜೆಪಿ ಕೈವಾಡವಿದೆ ಎಂದಿದ್ದಾರೆ. ಯಾವ ಆಧಾರವಿದೆ? ಇದು ಸತ್ಯಕ್ಕೆ ದೂರವಾದ ಸಂಗತಿ. ಮೂವರು ಡಿಸಿಎಂ ಸೃಷ್ಟಿ, ಸಿಎಂ ಬದಲಾವಣೆ ಕಾಂಗ್ರೆಸ್ ನ ಅಂತರಿಕ ವಿಚಾರ. ಆದರೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಹ್ಲಾದ ಜೋಶಿ ಅವರ ಆರೋಪಿಸಿದರು.
ರಾಜ್ಯದಲ್ಲಿ ಮೂವರು ಡಿಸಿಎಂಗಳ ಸ್ಥಾನ ಸೃಷ್ಟಿಸುವ ಕೂಗಿನ ಹಿಂದೆ ನೇರ ಸಿಎಂ ಸಿದ್ದರಾಮಯ್ಯ ಅವರದ್ದೇ ಪಾತ್ರವಿದೆ ಎಂದು ಪ್ರಹ್ಲಾದ ಜೋಶಿ ಅವರು ಆರೋಪಿಸಿದರು. ಸಿಎಂ, ಡಿಸಿಎಂ ಹುದ್ದೆ ವಿಚಾರದಲ್ಲಿ ಬಿಜೆಪಿ ಯಾರ ಪರವೂ ಇಲ್ಲ ಅಥವಾ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧವೂ ಇಲ್ಲ. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಈ ವಿವಾದದ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಪಕ್ಷದ ಸಚಿವ, ಶಾಸಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಈ ವಿಚಾರದ ಬಗ್ಗೆ ಮೌನ ತಾಳಿದ್ದಾರೆ. ಡಿಸಿಎಂ ಬಗ್ಗೆ ಚರ್ಚಿಸಬೇಡಿ ಎಂದು ಸಿಎಂ ಯಾರಿಗೂ ಹೇಳಿಲ್ಲ ಏಕೆ? ಇದರ ಹಿಂದಿನ ಮರ್ಮವೇನು? ಎಂದು ಜೋಶಿಯವರು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ಗೆ ಶಾಕ್: ಕೆಪಿಸಿಸಿ ಅಧ್ಯಕ್ಷ ಬದಲಾವಣೆಗೆ ಹೈಕಮಾಂಡ್ ಬಿಗ್ ಪ್ಲ್ಯಾನ್!
ಇನ್ನು ಇದೇ ವೇಳೆ ಕಾಂಗ್ರೆಸ್ಗೆ ಹೈಕಮಾಂಡ್ ಅಲ್ಲಾ… ಕಮಾಂಡೇ ಇಲ್ಲ. ಪಕ್ಷದಲ್ಲಿ ಅಶಿಸ್ತು ತುಂಬಿದೆ. ಸಚಿವ, ಶಾಸಕರನ್ನು ನಿಯಂತ್ರಿಸಲು ವರಿಷ್ಠರಿಗೆ ಹಿಡಿತವೇ ಇಲ್ಲ ಎಂದು ಜೋಶಿ ವ್ಯಂಗ್ಯವಾಡಿದರು. ಸಿಎಂ, ಡಿಸಿಎಂ ಹುದ್ದೆ, ಅಧಿಕಾರ ಹಂಚಿಕೆ ಬಗ್ಗೆ ಬಹಿರಂಗ ಚರ್ಚೆ ಮಾಡಿ ಇಡೀ ಆಡಳಿತ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಜನ ಕೊಟ್ಟ ಅಧಿಕಾರ, ಅವಕಾಶವನ್ನು ಭ್ರಷ್ಟಾಚಾರ, ತುಷ್ಟೀಕರಣದ ರಾಜಕಾರಣ ಮೂಲಕ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರಹ್ಲಾದ ಜೋಶಿ ಆರೋಪಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:38 pm, Sun, 30 June 24