ನೇಹಾ, ಅಂಜಲಿ ಕೊಲೆಯಿಂದ ಹುಬ್ಬಳ್ಳಿಯ ವಿದ್ಯಾರ್ಥಿನಿಯರ ಮೇಲೆ ಬೀರಿದ ಪ್ರಭಾವ ಹೀಗಿದೆ ಟಿವಿ9 ವಿಶೇಷ ಸಂದರ್ಶನ
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಕೊಲೆಯಾಯಿತು. ಈ ಕೊಲೆಗಳ ನಂತರ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿಯರಲ್ಲಾದ ಬದಲಾವಣೆ ಮತ್ತು ಅವರ ಮೇಲಾದ ಪರಿಣಾಮದ ಕುರಿತು ಟಿವಿ9 ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.
ಪೂಜಾ (ಹೆಸರು ಬದಲಾಯಿಸಲಾಗಿದೆ) ತುಂಬಾ ಕನಸನ್ನು ಹೊತ್ತಿರುವ 20 ರ ವಯಸ್ಸಿನ ಹುಡುಗಿ. ದಿನಾ ಕಾಲೇಜಿಗೆ ಸಿಟಿ ಬಸ್ಸಲ್ಲಿ ಹೋಗುತ್ತಾಳೆ. ಕಾಲೇಜು ಮುಗಿಸಿಕೊಂಡು ಮನೆಗೆ ಬರುತ್ತಾಳೆ. ಕಳೆದ ಕೆಲವು ದಿನಗಳಿಂದ ಅವಳ ದಿನಚರಿಯಲ್ಲಿ ಯಾರೂ ನೋಡಲಾಗದ ಬದಲಾವಣೆ ಆಗಿದೆ. ಮಧ್ಯಾಹ್ನ ನಾಲ್ಕು ಗಂಟೆ ಆದರೆ ಸಾಕು. ಮನೆಯಿಂದ ಫೋನೇ ಫೋನು. “ಎಲ್ಲಿದ್ದಿಯಾ? ಎಷ್ಟು ಹೊತ್ತಿಗೆ ಮನೆಗೆ ಬರುತ್ತೀಯಾ?” ಪ್ರತಿದಿನವೂ ಇವೇ ಪ್ರಶ್ನೆಗಳು. “ನನಗೂ, ಉತ್ತರ ಹೇಳಿ ಹೇಳಿ ಸಾಕಾಗೈತಿ ನೋಡ್ರಿ.” ತೀವ್ರ ವಿಷಾದ ಪೂರಿತ ದನಿಯಲ್ಲಿ ಆಕೆ ತನ್ನ ಸಿಟ್ಟನ್ನು ಹೊರಗೆ ಹಾಕುತ್ತಾಳೆ.
ಕಾಲೇಜಿಗೆ ಬಂದರೋ, ಅದು ಮತ್ತೊಂದು ಕತೆ. ಐಡಿ ಕಾರ್ಡ್ನ್ನು ಕುತ್ತಿಗೆಯಲ್ಲಿ ಹಾಕಿರಲೇಬೇಕು. ಮೊಬೈಲ್ ಡಿಪಾಸಿಟ್ ಮಾಡಬೇಕು. ಹುಡುಗ ಹುಡುಗಿ ಮಾತಾಡೋ ಹಾಗಿಲ್ಲ. “ನಮಗೆ ಉಸಿರುಗಟ್ಟೋ ಹಾಗಿದೆ ಕಾಲೇಜಲ್ಲೂ,” ಇಷ್ಟಲ್ಲಕ್ಕೂ ಕಾರಣ, ನೇಹಾ ಹಿರೇಮಠ್ ಬರ್ಬರ ಕೊಲೆ. ಇಡೀ ಹುಬ್ಬಳ್ಳಿಯ ವಾತಾವರಣ ಬದಲಾಗಿದೆ. ಇದು ಯಾವ ಟಿವಿ ಚಾನೆಲ್ಲಲ್ಲೂ ಬರಲ್ಲ. ನೂರಾರು ತಂದೆ ತಾಯಂದಿರಿಗೆ ಮಧ್ಯಾಹ್ನ ಐದಾದರೆ ಸಾಕು. ತಮ್ಮ ಹೆಣ್ಣು ಮಕ್ಕಳದ್ದೇ ಚಿಂತೆ.
ಹುಬ್ಬಳ್ಳಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ಹುಬ್ಬಳ್ಳಿಯ ವಾಣಿಜ್ಯ ವಹಿವಾಟು ಜೊತೆಗೆ ಶಿಕ್ಷಣದಲ್ಲೂ ಸಾಕಷ್ಟು ಹೆಸರು ಮಾಡಿದೆ. ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್ನಲ್ಲಿ ನಿಂತರೆ ನಿಮಗೆ ಒಂದು ಕಡೆ ವಾಣಿಜ್ಯ ವಹಿವಾಟದ ಸಾಗರ ಮತ್ತೊಂದು ಕಡೆ ಕೈಬೀಸಿ ಕರೆಯುವ ಶಿಕ್ಷಣ ಸಂಸ್ಥೆಗಳು ಕಾಣುತ್ತವೆ.
ಇಂತಹ ಊರಲ್ಲಿ ಒಂದೇ ತಿಂಗಳ ಒಳಗಾಗಿ ಇಬ್ಬರು ಯುವತಿಯರ ಕೊಲೆಗಳಾದವು. ಈ ಪ್ರಕರಣಗಳು ಹುಬ್ಬಳ್ಳಿ ಮಹಾನಗರಕ್ಕೆ ಅಂಟಿದ ಕಪ್ಪು ಚುಕ್ಕೆಯಾಗಿವೆ. ಒಂದು ಕೊಲೆ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿ ಆದರೆ ಮತ್ತೊಂದು ಕೊಲೆ ವೀರಾಪುರ ಓಣಿಯಲ್ಲಿ ನಡೆಯಿತು. ಅಷ್ಟಕ್ಕೂ ಈ ಕೊಲೆಗಳು ಯಾಕೆ ಆದವು ಎಂಬ ಪ್ರಶ್ನೆಗೆ ಉತ್ತರ ಸಿಐಡಿ ತನಿಖೆ ಬಳಿಕ ಗೊತ್ತಾಗಲಿದೆ. ಆದರೆ ಈ ಕೊಲೆಗಳಾದ ಮೇಲೆ ಹುಬ್ಬಳ್ಳಿಯಲ್ಲಿನ ವಾತಾವರಣ ಹೇಗಿದೆ? ಈ ಕೊಲೆಗಳು ಸಾಮಾಜದ ಮೇಲೆ ಹೇಗೆ ಪ್ರಭಾವ ಬೀರಿದೆ? ಅಲ್ಲಿನ ವಿದ್ಯಾರ್ಥಿಗಳು ಏನಂತಾರೆ? ಈ ಸ್ಟೋರಿ ಓದಿ
ಹುಬ್ಬಳ್ಳಿಯ ವಿದ್ಯಾನಗರ ಶಾಲಾ-ಕಾಲೇಜುಗಳ ನೆಲೆಬೀಡು. ವಿದ್ಯಾನಗರದಲ್ಲಿರುವ ಬಿವಿ ಬೋಮರೆಡ್ಡಿ ಇಂಜಿನಿಯರಿಂಗ್ ಕಾಲೇಜು (BVB) ರಾಜ್ಯದಲ್ಲಿ ಸಾಕಷ್ಟು ಹೆಸರು ಮಾಡಿದೆ. ಬಿವಿಬಿ ಕ್ಯಾಂಪಸ್ನಲ್ಲಿKG ಯಿಂದ PG ವರೆಗಿನ ಶಾಲೆ-ಕಾಲೇಜು ಕಟ್ಟಡಗಳನ್ನು ನೋಡಬಹುದು. ಇಂತಹ ಆವರಣದಲ್ಲಿ ಏಪ್ರಿಲ್ 18 ರಂದು ಓರ್ವ ವಿದ್ಯಾರ್ಥಿನಿಯ ಕೊಲೆಯಾಗುತ್ತದೆ. ಅದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ. ಎಂಸಿಎ ಓದುತ್ತಿದ್ದ ನೇಹಾ ಹಿರೇಮಠ (23) ಪರೀಕ್ಷೆ ಬರೆದು ಹೊರಗೆ ಬರುತ್ತಿದ್ದಂತೆ ಫಯಾಜ್ ಎಂಬ ಕ್ರೂರಿ ಕಾಲೇಜು ಕ್ಯಾಂಪಸ್ ಆವರಣದಲ್ಲಿ ಬರ್ಬರವಾಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡುತ್ತಾನೆ.
ಈ ಪ್ರಕರಣ ಜನತೆಯ ಮನಸ್ಸಿನಿಂದ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಕೊಲೆ ಆಗುತ್ತದೆ. ಅದು ಕೂಡ ನಸುಕಿನ ಜಾವ ವೀರಾಪುರ ಓಣಿಯಲ್ಲಿ ಅಜ್ಜಿಯೊಂದಿಗೆ ವಾಸವಾಗಿದ್ದ ಅಂಜಲಿ ಅಂಬಿಗೇರ (21) ಎಂಬ ಯುವತಿಯನ್ನು ವಿಶ್ವ ಅಲಿಯಾಸ್ ಗಿರೀಶ್ ಎಂಬ ವ್ಯಕ್ತಿ ಆಕೆಯ ಮನೆಯೊಳಗೆ ಹೊಕ್ಕು ಬರ್ಬರವಾಗಿ ನೇಹಾ ಹಿರೇಮಠ ಮಾದರಿಯಲ್ಲಿ ಹತ್ಯೆ ಮಾಡುತ್ತಾನೆ.
ಈ ಎರಡೂ ಪ್ರಕರಣ ಒಂದೇ ತಿಂಗಳ ಅಂತರದಲ್ಲಿ ನಡೆದಿವೆ. ಹೀಗೆ ಹಾಡ ಹಗಲೆ ಇಬ್ಬರು ಯುವತಿರ ಕೊಲೆಯಿಂದ ಹುಬ್ಬಳ್ಳಿ ಜನತೆ ಅಕ್ಷರಶಃ ಭಯಗೊಂಡಿದ್ದಾರೆ. ಹಾಗೆ ಪೋಷಕರು ತಮ್ಮ ಮನೆಯ ಹೆಣ್ಣುಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಆರಂಭಿಸಿದ್ದಾರೆ. ಕಾಲೇಜಿಗೆ ತೆರಳುವ ಹೆಣ್ಣಮಕ್ಕಳಿಗೆ ಎಚ್ಚರಿಕೆಯ ಮಾತಗಳನ್ನು ಹೇಳಲು ಆರಂಭಿಸಿದ್ದಾರೆ. ಈ ಎರಡೂ ಕೊಲೆಗಳಿಂದ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿಯರಲ್ಲಿ ಭಯ ಹುಟ್ಟಿದೆ. ಹಾಗೆ ಹೊರಗಡೆ ತಿರುಗಾಡುವಾಗ ಸ್ವಲ್ಪ ಮಟ್ಟಿಗೆ ಭಯದಲ್ಲಿ ಓಡಾಡುತ್ತಿದ್ದಾರೆ.
ಟಿವಿ9 ಡಿಜಿಟಲ್ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿಯರನ್ನು ಮಾತನಾಡಿಸಿದ್ದು, ಈ ಎರಡೂ ಕೊಲೆಗಳಿಂದ ಅವರಲ್ಲಿ, ಮನೆಯಲ್ಲಿ ಮತ್ತು ಕಾಲೇಜು ಆವರಣದಲ್ಲಿ ಆದ ಬದಲಾವಣೆ ಬಗ್ಗೆ ತಿಳಿಸಿದ್ದಾರೆ. ಟಿವಿ9 ಡಿಜಿಟಲ್ ಸಂದರ್ಶಿಸಿದ್ದ ವಿದ್ಯಾರ್ಥಿನಿಯರಲ್ಲಿ ಒಬ್ಬ ವಿದ್ಯಾರ್ಥಿನಿಯ ಅಭಿಪ್ರಯಾವನ್ನು ಮಾತ್ರ ಇಲ್ಲಿ ಬರೆಯಲಾಗಿದೆ. ಈ ಸಂದರ್ಶನದಲ್ಲಿನ ವಿದ್ಯಾರ್ಥಿನಿಯ ಹೆಸರನ್ನು ಬದಲಾಯಿಸಲಾಗಿದೆ.
ಟಿವಿ9: ನಿಮ್ಮ ಹೆಸರು, ಏನು ವ್ಯಾಸಂಗ ಮಾಡುತ್ತಿದ್ದೀರಿ?
ವಿದ್ಯಾರ್ಥಿನಿ: ನನ್ನ ಹೆಸರು ಪೂಜಾ, ನಾನು ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ.
ಟಿವಿ9: ಹುಬ್ಬಳ್ಳಿಯಲ್ಲಿ ಒಂದೇ ತಿಂಗಳಲ್ಲಿ ಎರಡು ಕೊಲೆಗಳಾದವು ನಿಮಗೆ ತಿಳಿದಿದಿಯೇ?
ಪೂಜಾ: ಹಾ, ಗೊತ್ತು. ನೇಹಾ ಕೊಲೆಯಾದಾಗ ನಾನು ಕಾಲೇಜಿನಲ್ಲಿ ಇದ್ದೆ. ಅಂಜಲಿ ಕೊಲೆ ವಿಚಾರವನ್ನು ಟಿವಿಯಲ್ಲಿ ನೋಡಿ ತಿಳಿದುಕೊಂಡೆ.
ಟಿವಿ9: ನೇಹಾ ಕೊಲೆಯಾದ ವಿಚಾರ ನಿಮಗೆ ಹೇಗೆ ಗೊತ್ತಾಯ್ತು?
ಪೂಜಾ: ನೇಹಾ ಕೊಲೆಯಾದ ಸಂದರ್ಭದಲ್ಲಿ ನಾನು ಕ್ಲಾಸ್ನಲ್ಲಿದ್ದೆ. ಕ್ಲಾಸ್ ಮುಗಿಸಿಕೊಂಡು ಹೊರಗಡೆ ಬರುತ್ತಿದ್ದಂತೆ ರೋಡ್ ಅಲ್ಲಿ ಸಾಕಷ್ಟು ಜನ ನಿಂತಿದ್ದರು. ಹಾಗೆ ಪೊಲೀಸರು ನಿಂತಿದ್ದರು. ನೇಹಾ ಕೊಲೆಯಾದ ಕಾಲೇಜಿನ ಪಕ್ಕದಲ್ಲೆ ನಮ್ಮ ಕಾಲೇಜು ಇರೋದು. ಮೊದಲು ನಾನು ಯಾರೊ ರಾಜಕಾರಣಿ ಬಂದಿರಬಹುದು ಅಂದುಕೊಂಡೆ. ಆದರೆ, ಆಮೆಲೆ ನನಗೆ ಗೊತ್ತಾಯ್ತು ಬಿವಿಬಿ ಕಾಲೇಜ್ನಲ್ಲಿ ಓರ್ವ ವಿದ್ಯಾರ್ಥಿನಿಯನ್ನ ಕೊಲೆ ಮಾಡಿದ್ದಾರೆ ಅಂತ.
ಟಿವಿ9: ಕೊಲೆಯಾಗಿದ್ದು ನೇಹಾ ಅಂತ ನೇಹಾ ಅಂತ ನಿಮಗೆ ಹೇಗೆ ಗೊತ್ತಾಯ್ತು? ಆ ಸಮಯದಲ್ಲಿ ಅಲ್ಲಿಯ ವಾತಾವರಣ ಹೇಗಿತ್ತು?
ಪೂಜಾ: ಕೊಲೆಯಾಗಿದ್ದು ನೇಹಾ ಅಂತ ನಾನು ಸೋಶಿಯಲ್ ಮೀಡಿಯಾ ನೋಡಿದಾಗ ಗೊತ್ತಾಯ್ತು. ಆ ಸಮಯದಲ್ಲಿ ವಿದ್ಯಾನಗರ ರಸ್ತೆಯಲ್ಲಿ ತುಂಬಾ ಜನ ಇದ್ರು. ಪೊಲೀಸರು ಇದ್ದರು. ಟ್ರಾಫಿಕ್ ಜಾಮ್ ಆಗಿತ್ತು. ಏನಾಯ್ತು ಅಂತ ಹೋಗಿ ನೋಡಬೇಕು ಅಂತ ಅಂದುಕೊಂಡೆ, ಆದ್ರೆ ಅಷ್ಟೊತ್ತಿಗಾಗಲೆ ಕಾಲೇಜಿನಲ್ಲಿ ಎಲ್ಲರೂ ಮನೆಗೆ ಹೋಗಿ ಅಂದ್ರು. ಹಾಗೆ ಮನೆಯಿಂದಲೂ ಕರೆಗಳು ಬರಲು ಆರಂಭಿಸಿದವು. ಅಪ್ಪ ಪೋನ್ ಮಾಡಿ ಎಲ್ಲಿದ್ದಿಯಾ? ಏನ ಮಾಡತ್ತಿದ್ದೀಯಾ? ಕಾಲೇಜು ಮುಗಿತಾ? ನಾನು ಬಂದು ಕರೆದುಕೊಂಡು ಹೋಗುತ್ತೇನೆ? ನೀನು ಬರಬೇಡ ಅಂದ್ರು. ನಾನು ಅಪ್ಪ ಬರುವವರೆಗೂ ಕಾಲೇಜಿನಲ್ಲೇ ಇದ್ದೆ, ಅವರು ಬಂದು ಕರೆದುಕೊಂಡು ಹೋದರು.
ಟಿವಿ9: ನಿಮ್ಮ ಮನೆಯಲ್ಲಿದೆ, ಪ್ರತಿದಿನ ಕಾಲೇಜಿಗೆ ಹೇಗೆ ಬರುತ್ತೀರಾ?
ಪೂಜಾ: ನಂದು ಮನೆ ಇರುವುದು ಹಳೇ-ಹುಬ್ಬಳ್ಳಿಯಲ್ಲಿ. ನಾನು ಪ್ರತಿದಿನ ಬಸ್ನಲ್ಲಿ ಬರುತ್ತೇನೆ.
ಟಿವಿ9: ನೇಹಾ ಮತ್ತು ಅಂಜಲಿ ಕೊಲೆಯಾದ ಬಳಿಕ ಹುಬ್ಬಳ್ಳಿಯಲ್ಲಿ ಏನು ಬದಲಾವಣೆಯಾಗಿದೆ?
ಪೂಜಾ: ನಾನು ಅಷ್ಟೊಂದು ಗಮನಿಸಿಲ್ಲ, ಆದ್ರೆ ಸಾಯಂಕಾಲದ ಹೊತ್ತು ಪೊಲೀಸರ ಓಡಾಟ ಜಾಸ್ತಿ ಆಗಿದೆ. ಮತ್ತು ಚೆನ್ನಮ್ಮ ಪಡೆ ಅಂತ ಪೊಲೀಸರ ಹೊಸ ತಂಡ ರಚನೆ ಆಗಿದೆ. ಅವರು ನಮಗೆ ಸುರಕ್ಷತೆ ಬಗ್ಗೆ, ರಕ್ಷಣೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹಾ, ಅವರು 112 ಬಗ್ಗೆನೂ ಹೇಳುತ್ತಿದ್ದಾರೆ. ಅವರು ಕಾಲೇಜುಗಳಿಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಟಿವಿ9: ನೇಹಾ ಮತ್ತು ಅಂಜಲಿ ಕೊಲೆ ಬಳಿಕ ವೈಯಕ್ತಿಕವಾಗಿ ನಿಮಗೆ ಏನು ಅನ್ನಿಸಿದೆ?
ಪೂಜಾ: ಅಂಜಲಿ ಕೊಲೆಯಿಂದ ಅಷ್ಟೇನು ಅನ್ನಿಸಿಲ್ಲ. ಆದರೆ ನೇಹಾ ಕೊಲೆಯಾದ ನಂತರ ಬಹಳ ಭಯ ಆಗಿದೆ. ಸಾಯಂಕಾಲದ ಹೊತ್ತು ಹೊರಗಡೆ ತಿರಗಾಡುವಾಗ ಭಯ ಅನ್ನಿಸುತ್ತದೆ. ಮತ್ತು ಕಾಲೇಜಿಗೆ ಬಸ್ನಲ್ಲಿ ಬರುವಾಗ ಬಹಳ ಗದ್ದಲ ಇರತ್ತ. ಕೂಡಲು ಸೀಟ್ ಇರಲ್ಲ. ನಿಂತುಕೊಂಡೇ ಬರುತ್ತೇನೆ. ಈ ಸಂದರ್ಭದಲ್ಲಿ ಹುಡುಗರು ಸ್ವಲ್ಪ ಹತ್ತಿರ ಬಂದರೆ ಬಹಳ ಭಯ ಆಗುತ್ತದೆ. ನೇಹಾ ಕೊಲೆಯಾದ ಮೇಲೆ ಹುಡುಗುರ ಜೊತೆ ಮಾತಾಡಬೇಕೋ, ಬೇಡ್ವೊ ಅನ್ನಿಸಿದೆ. ಎಲ್ಲರೂ ಹಾಗಿರಲ್ಲ. ಆದರೂ ಕೂಡ ಭಯ ಆಗುತ್ತದೆ.
ಟಿವಿ9: ಬಿವಿಬಿ ಕಾಲೇಜು ಬಳಿ ಅಥವಾ ಒಳಗಡೆ ಹೋದಾಗ ಏನು ಅನ್ನಿಸುತ್ತೆ?
ಪೂಜಾ: ನೇಹಾ ಕೊಲೆ ಘಟನೆ ನೆನಪಿಗೆ ಬರುತ್ತೆ. ನೇಹಾ ನೆನಸಿಕೊಂಡು ಪಾಪ ಅನ್ನಿಸುತ್ತೆ. ಎಷ್ಟೆ ಆದರೂ ನಮ್ಮ ವಯಸ್ಸಿನ ಹುಡಗಿ ಅಲ್ವಾ ಸರ್..
ಟಿವಿ9: ಬಿವಿಬಿ ಕಾಲೇಜು, ಕ್ಯಾಂಪಸ್ ಬಗ್ಗೆ ಏನು ಅನ್ನಿಸುತ್ತೆ?
ಪೂಜಾ: ಒಳ್ಳೆ ಕಾಲೇಜು ಸರ್. ಬಹಳ ವಿದ್ಯಾರ್ಥಿಗಳು ಅಲ್ಲಿ ಓದುತ್ತಾರೆ. ಆ ಕಾಲೇಜಿನಲ್ಲಿ ನನ್ನ ಕೆಲ ಸ್ನೇಹಿತರು ಓದುತ್ತಾರೆ. ಬಹಳ ದೊಡ್ಡ ಕ್ಯಾಂಪಸ್.
ಟಿವಿ9: ಹಿಂದೆ ಯಾವಾಗಲಾದರೂ ಈ ರೀತಿ ಆಗಿತ್ತಾ?
ಪೂಜಾ: ನನಗೆ ನೆನಪು ಇದ್ದ ಹಾಗೆ ಇಲ್ಲ
ಟಿವಿ9: ಈ ಎರಡೂ ಕೊಲೆಯಾದ ಬಳಿಕ ಮನೆಯಲ್ಲಿ ಏನಂತಾರೆ? ನಿಮಗೆ ಸ್ಟ್ರಿಕ್ಟ್ ಮಾಡಿದ್ದಾರಾ?
ಪೂಜಾ: ಹುಷಾರಾಗಿ ಇರು ಅಂತಾರೆ. ಕಾಲೇಜು ಮುಟ್ಟಿದ ಮೇಲೆ ಪೋನ್ ಮಾಡು. ಕಾಲೇಜು ಮುಗಿದ ಮೇಲೆ ನೇರವಾಗಿ ಮನೆಗೆ ಬಾ. ಅಲ್ಲಿ-ಇಲ್ಲಿ ಎಲ್ಲೂ ಹೋಗಬೇಡಾ ಅಂತಾರೆ. ಮತ್ತು ಸಾಯಂಕಾಲ ಆಗುವುದೆ ತಡ, ಪದೇ ಪದೇ ಕಾಲ್ ಮಾಡುತ್ತಾರೆ. ಎಲ್ಲಿದ್ದಿಯಾ ಎಷ್ಟೊತ್ತಿಗೆ ಬರತಿಯಾ ಅಂತ ಕೇಳತಾರೆ. ಅದರಲ್ಲಂತು ನೇಹಾ ಕೊಲೆಯಾದ ವಾರ 15 ದಿವಸ ವರೆಗು ಕಾಲೇಜಿಗೆ ಕಳಸಲು ಹಿಂದೇಟು ಹಾಕಿದ್ದರು. ನಾನು ಕಾಲೇಜಿಗೆ ಹೋಗಲೇ ಬೇಕು ಅಂತ ಹಟ ಹಿಡಿದು ಬಂದಿದ್ದೇನೆ. ಆಗೆಲ್ಲ ಅಪ್ಪ ಗಾಡಿ ಮೇಲೆ ಕಾಲೇಜಿಗೆ ತಂದು ಬಿಡುತ್ತಿದ್ದರು, ಸಾಯಂಕಾಲ ಕರೆದುಕೊಂಡು ಹೋಗುತ್ತಿದ್ದರು. ಒಂದರೀತಿ ಚಿಕ್ಕಮಗಳು ಆಗಿದ್ದೆ ಸರ್ ನಾನು.
ಟಿವಿ9: ಈಗ ಹೇಗೆ ಇದೆ ಮನೆಯಲ್ಲಿ?
ಪೂಜಾ: ಈಗ ಸ್ವಲ್ಪ ಪರವಾಗಿಲ್ಲ ಸರ್, ಆದ್ರೂ ಸಾಯಂಕಾಲ ಕಾಲ್ ಮಾಡುವುದನ್ನು ಅಪ್ಪ ಮರೆಯಲ್ಲ. ಮತ್ತು ಮೊದಲ ಮನಿವಳ ಬಹಳ ಹೊತ್ತು ಪೋನ್ ಉಪಯೋಗಿಸಿದರೆ ಏನು ಅಂತಿರಲಿಲ್ಲ. ಈಗ ಸ್ವಲ್ಪ ಪೋನ್ ಉಪಯೋಗಿಸಿದರೆ ಜಾಸ್ತಿ ಪೋನ್ ಉಪಯೋಗ ಮಾಡಬೇಡ ಅಂತಾರೆ.
ಟಿವಿ9: ಕಾಲೇಜು ಒಳಗಡೆ ಹೇಗಿದೆ ವಾತಾವರಣ?
ಪೂಜಾ: ಈಗ ಕಾಲೇಜು ಒಳಗ ಬಹಳ ಸ್ಟ್ರಿಕ್ಟ್ ಮಾಡಿದ್ದಾರೆ. ಕಡ್ಡಾಯವಾಗಿ ಕಾಲೇಜು ಡ್ರೆಸ್ ಹಾಕೊಂಡು ಬರಬೇಕು. ಐಡಿ ಕಾರ್ಡ್ ಹಾಕೋಬೇಕು. ಕ್ಯಾಂಪಸ್ದಾಗ ಮೊಬೈಲ್ ಉಪಯೋಗಿಸಬಾರದು. ಹುಡುಗ ಮತ್ತು ಹುಡುಗಿ ಒಟ್ಟಿಗೆ ತಿರುಗಾಡುವ ಹಾಗಿಲ್ಲ. ಕ್ಲಾಸ್ಗೆ ಹೋಗಬೇಕು ಇಲ್ಲ ಗ್ರಂಥಾಲಯಕ್ಕೆ ಹೋಗಬೇಕು. ನಮ್ಮ ಕಡೆಯಿಂದ ಪೋಷಕರ ನಂಬರ್ ತೆಗೆದುಕೊಂಡಿದ್ದಾರೆ.
ಟಿವಿ9: ಒಟ್ಟಾರೆಯಾಗಿ ಕೊನೆಯದಾಗಿ ಏನು ಹೇಳುತ್ತೀಯಾ?
ಪೂಜಾ: ಈ ಎರಡೂ ಕೊಲೆ ನಂತರ ಹುಡುಗಿರ ಸ್ವಲ್ಪ ಬದಲಾಗಿದ್ದಾರೆ. ಸಾಯಂಕಾಲ ಹೊರಗಡೆ ತಿರುಗಾಡುವುದು ಸ್ವಲ್ಪ ಕಡಿಮೆ ಮಾಡಿದ್ದಾರೆ. ಎಲ್ಲಾ ಕಾಲೇಜುನಲ್ಲಿ ಕಠಿಣ ನಿಯಮ ಜಾರಿಗೆ ತಂದಿದ್ದಾರೆ. ನಾನು ಜಾಗರೂಕವಾಗಿ ಇರುತ್ತಿದ್ದೇನೆ.
ಇದಿಷ್ಟು ವಿದ್ಯಾರ್ಥಿನಿಯ ಪೂಜಾಳ ಅಭಿಪ್ರಾಯ. ಇದು ಪೂಜಾ ಒಬ್ಬಳದ್ದೇ ಅಭಿಪ್ರಾಯವಲ್ಲ. ಹುಬ್ಬಳ್ಳಿ ಬಹುತೇಕ ಕಾಲೇಜು ವಿದ್ಯಾರ್ಥಿನಿಯರ ಮನದಾಳದ ಮಾತಾಗಿದೆ. ಟಿವಿ9 ಹುಬ್ಬಳ್ಳಿಯ ಅನೇಕ ಕಾಲೇಜು ವಿದ್ಯಾರ್ಥಿನಿಯರನ್ನು ಮಾತನಾಡಿಸಿದ್ದು, ಅವರೆಲ್ಲರ ಇದೇ ಅಭಿಪ್ರಾಯ ಆಗಿದೆ. ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಕೊಲೆ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಪ್ರಭಾವ ಭೀರಿದ್ದಂತು ಸುಳ್ಳಲ್ಲ.
ಈ ಎರಡು ಕೊಲೆಯಿಂದ ಕಾಲೇಜುಗಳಲ್ಲಾದ ಬದಲಾವಣೆ ಮತ್ತು ಪೋಷಕರು ಯಾವ ರೀತಿ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎಂಬುವುದರ ಕುರಿತು ಮಂಗಳವಾರ (ಜೂ.11) ಪ್ರಕಟವಾಗಲಿದೆ.
Published On - 8:00 am, Mon, 10 June 24