
ಹುಬ್ಬಳ್ಳಿ, ಜುಲೈ 29: ಭಾರತೀಯ ರೈಲ್ವೆ (Indain Railway) ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ (HRICE) ಸಹಯೋಗದೊಂದಿಗೆ, ಭಾರತ್ ಗೌರವ್ ಪ್ರವಾಸಿ ರೈಲು ಯೋಜನೆಯಡಿ ಕರ್ನಾಟಕದ ನಿವಾಸಿಗಳಿಗಾಗಿಯೇ ಎರಡು ವಿಶೇಷ ಯಾತ್ರಾ ಪ್ರವಾಸಗಳನ್ನು ಘೋಷಿಸಿದೆ.
ಮೊದಲನೆಯದು ‘ಕಾಶಿ ದರ್ಶನ’ ಯಾತ್ರೆ. ಇದು 9 ದಿನಗಳ ಪ್ರಯಾಣವಾಗಿದ್ದು, ಆಗಸ್ಟ್ 31 ರಿಂದ ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ. ಈ ಯಾತ್ರೆಯು ವಾರಣಾಸಿ (ಕಾಶಿ ವಿಶ್ವನಾಥ ದೇವಸ್ಥಾನ, ತುಳಸಿ ಮಾನಸ ದೇವಸ್ಥಾನ ಮತ್ತು ಸಂಕಟ ಮೋಚನ ಹನುಮಾನ್ ದೇವಸ್ಥಾನ), ಅಯೋಧ್ಯೆ (ರಾಮ ಜನ್ಮ ಭೂಮಿ ದೇವಸ್ಥಾನ ಮತ್ತು ಹನುಮಾನ್ ಗಡ್), ಗಯಾ ಮತ್ತು ಬೋಧಗಯಾ (ವಿಷ್ಣುಪಾದ ದೇವಾಲಯ ಮತ್ತು ಮಹಾಬೋಧಿ ದೇವಾಲಯ) ಮತ್ತು ಪ್ರಯಾಗರಾಜ್ (ತ್ರಿವೇಣಿ ಸಂಗಮ ಮತ್ತು ಹನುಮಾನ್ ದೇವಸ್ಥಾನ) ಸೇರಿದಂತೆ ಪ್ರಮುಖ ಪುಣ್ಯಕ್ಷೇತ್ರಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್’ನ ಒಟ್ಟು ವೆಚ್ಚ ಪ್ರತಿ ವ್ಯಕ್ತಿಗೆ ₹22,500/-. ಆದರೆ, ಕರ್ನಾಟಕದಲ್ಲಿ ವಾಸಿಸುವ ಯಾತ್ರಿಕರಿಗೆ ಕರ್ನಾಟಕ ಸರ್ಕಾರದಿಂದ 7,500 ರೂ. ವಿಶೇಷ ಸಬ್ಸಿಡಿ ದೊರೆಯಲಿದ್ದು, ಪರಿಣಾಮಕಾರಿ ವೆಚ್ಚ 15,000 ರೂ. ಕ್ಕೆ ಇಳಿಯಲಿದೆ. ಈ ಪ್ರವಾಸಕ್ಕಾಗಿ ಎಸ್.ಎಂ.ವಿ.ಟಿ ಬೆಂಗಳೂರು/ಯಶವಂತಪುರ, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿಗಳಲ್ಲಿ ಹತ್ತುವ ಅವಕಾಶ ಕಲ್ಪಿಸಲಾಗಿದೆ.
ಎರಡನೇ ಪ್ರವಾಸ ‘ದಕ್ಷಿಣ ಯಾತ್ರೆ’. ಇದು 6 ದಿನಗಳ ಪ್ರಯಾಣವಾಗಿದ್ದು, ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 16 ರವರೆಗೆ ನಡೆಯಲಿದೆ. ಈ ಯಾತ್ರೆಯು ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಾದ ಕನ್ಯಾಕುಮಾರಿ (ಭಗವತಿ ದೇವಾಲಯ ಮತ್ತು ವಿವೇಕಾನಂದ ರಾಕ್ ಮೆಮೋರಿಯಲ್), ತಿರುವನಂತಪುರಂ (ಪದ್ಮನಾಭಸ್ವಾಮಿ ದೇವಾಲಯ), ರಾಮೇಶ್ವರಂ (ರಾಮನಾಥಸ್ವಾಮಿ ದೇವಾಲಯ) ಮತ್ತು ಮಧುರೈ (ಮೀನಾಕ್ಷಿ ದೇವಾಲಯ) ಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್’ನ ವೆಚ್ಚ ಪ್ರತಿ ವ್ಯಕ್ತಿಗೆ 15,000 ರೂ. ಕರ್ನಾಟಕ ರಾಜ್ಯದ ನಿವಾಸಿಗಳಿಗೆ ಕರ್ನಾಟಕ ಸರ್ಕಾರದಿಂದ 5,000 ರೂ. ವಿಶೇಷ ಸಬ್ಸಿಡಿ ಸಿಗಲಿದ್ದು, ಅಂತಿಮ ಬೆಲೆ 10,000 ರೂ. ಆಗಲಿದೆ. ಈ ಪ್ರವಾಸಕ್ಕೆ ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ಮತ್ತು ಎಸ್.ಎಂ.ವಿ.ಟಿ ಬೆಂಗಳೂರುಗಳಿಂದ ಹತ್ತುವ ಅವಕಾಶವಿದೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಯಶವಂತಪುರ-ತಾಳಗುಪ್ಪ ಮಧ್ಯೆ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ
ಎರಡೂ ಯಾತ್ರೆಗಳನ್ನು ಭಾರತ್ ಗೌರವ್ ಪ್ರವಾಸಿ ರೈಲಿನ ಎಸಿ ತ್ರಿ ಟೈರ್ ವರ್ಗದಲ್ಲಿ ನಿರ್ವಹಿಸಲಾಗುತ್ತದೆ. ಇದು ಆರಾಮದಾಯಕ ಪ್ರಯಾಣವಾಗಿದೆ. ಪ್ಯಾಕೇಜ್’ನಲ್ಲಿ ವಿವಿಧ ಸ್ಥಳಗಳಲ್ಲಿ ಎರಡು/ಮೂರು ಹಂಚಿಕೆಯ ಆಧಾರದ ಮೇಲೆ ಹವಾನಿಯಂತ್ರಿತವಲ್ಲದ ಕೊಠಡಿಗಳಲ್ಲಿ ವಸತಿ, ನಿಗದಿತ ಮಾರ್ಗದ ಪ್ರಕಾರ ಹವಾನಿಯಂತ್ರಿತವಲ್ಲದ ಕೊಠಡಿಗಳಲ್ಲಿ ತಂಗಲು ಮತ್ತು ಸ್ನಾನಕ್ಕೆ ವ್ಯವಸ್ಥೆ, ಎಲ್ಲ ಸಸ್ಯಾಹಾರಿ ಊಟಗಳು, ಹವಾನಿಯಂತ್ರಿತವಲ್ಲದ ಬಸ್ಸುಗಳ ಮೂಲಕ ಎಲ್ಲ ಸ್ಥಳ ವೀಕ್ಷಣೆ ಮತ್ತು ಪ್ರವಾಸ, ಪ್ರತಿ ಕೋಚ್ಗೆ ಪ್ರವಾಸ ಮಾರ್ಗದರ್ಶಿಗಳು, ಪ್ರಯಾಣಿಕರಿಗಾಗಿ ಪ್ರಯಾಣ ವಿಮೆ, ಐಆರ್ಸಿಟಿಸಿ ಪ್ರವಾಸ ವ್ಯವಸ್ಥಾಪಕರು, ರೈಲಿನಲ್ಲಿನ ಭದ್ರತೆ ಮತ್ತು ಎಲ್ಲಾ ಅನ್ವಯವಾಗುವ ತೆರಿಗೆಗಳು ಸೇರಿವೆ.
ಹೆಚ್ಚಿನ ಮಾಹಿತಿ ಮತ್ತು ಕಾಯ್ದಿರಿಸುವಿಕೆಗಾಗಿ, ಯಾತ್ರಿಕರು ಐಆರ್ಸಿಟಿಸಿ ಕಚೇರಿಗಳನ್ನು ಸಂಪರ್ಕಿಸಬಹುದು: ಬೆಂಗಳೂರು: 9003140710 / 8595931290 / 8595931291 / 8595931292, ಮೈಸೂರು: 8595931294 & ಹುಬ್ಬಳ್ಳಿ: 8595931293 ಅಥವಾ ವೆಬ್ ಸೈಟ್’ಗೆ: www.irctctourism.comಗೆ ಭೇಟಿ ನೀಡಬಹುದು.
Published On - 7:37 pm, Tue, 29 July 25