
ಧಾರವಾಡ, ಏಪ್ರಿಲ್ 20: ಕರ್ನಾಟಕದಲ್ಲಿ ಜನಿವಾರ (Janivara) ಜಟಾಪಟಿ ಜೋರಾಗಿದೆ. ವ್ಯಾಪಕ ಟೀಕೆಗೆ ಗುರಿಯಾಗುವುದರೊಂದಿಗೆ ರಾಜಕೀಯ ನಾಯಕರ ಹಗ್ಗಜಗ್ಗಾಟಕ್ಕೂ ವೇದಿಕೆಯಾಗಿದೆ. ಬೀದರ್, ಶಿವಮೊಗ್ಗ ಬಳಿಕ ಇದೀಗ ಧಾರವಾಡಲ್ಲೂ (Dharwad) ಇಂತಹದೇ ಘಟನೆ ನಡೆದಿದೆ. ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಯ ಜನಿವಾರವನ್ನು ಸಿಬ್ಬಂದಿ ಕತ್ತರಿಸಿರುವಂತಹ ಘಟನೆ ಧಾರವಾಡ ನಗರದ ಹುರಕಡ್ಲಿ ಕಾಲೇಜ್‌ನ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡದ ರಾಘವೇಂದ್ರ ನಗರದ ನಂದನ್ ಏರಿ, ವಿದ್ಯಾಗಿರಿ ಬಡಾವಣೆಯಲ್ಲಿರೋ ಜೆಎಸ್ಎಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದಾರೆ. ಇನ್ನು ಈತ ಏಪ್ರಿಲ್ 16 ರಂದು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಗರದ ಹುರಕಡ್ಲಿ ಕಾಲೇಜಿನಲ್ಲಿ ಬರೆಯಲು ಹೋಗಿದ್ದ. ಕೇಂದ್ರದ ಹೊರಗಡೆ ಭದ್ರತಾ ಸಿಬ್ಬಂದಿ ಈತನನ್ನು ಪರೀಕ್ಷಿಸುವಾಗ ನಂದನ್ ಧರಿಸಿದ್ದ ಜನಿವಾರ ಕಣ್ಣಿಗೆ ಬಿದ್ದಿದೆ. ಕೂಡಲೇ ಅದನ್ನು ತೆಗೆಯುವಂತೆ ಹೇಳಿದ್ಧಾರೆ. ಆದರೆ ಅದಕ್ಕೆ ನಂದನ್ ವಿರೋಧಿಸಿದ್ದಾನೆ. ಆದರೆ ಅದನ್ನು ಧರಿಸಿದರೆ ಪರೀಕ್ಷಾ ಕೊಠಡಿಗೆ ಬಿಡಲು ಆಗೋದಿಲ್ಲ ಅಂತಾ ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕೂಡಲೇ ಕತ್ತರಿ ತಂದು ಜನಿವಾರ ಕತ್ತರಿಸಿ ವಿದ್ಯಾರ್ಥಿ ಕೈಗೆ ಕೊಟ್ಟಿದ್ದಾರೆ. ಇದರಿಂದ ಶಾಕ್ಗೆ ಒಳಗಾದ ನಂದನ್ ಏನೊಂದೂ ಮಾತನಾಡಲಾಗದೇ ಪರೀಕ್ಷಾ ಕೇಂದ್ರದೊಳಗೆ ಹೋಗಿದ್ದಾನೆ. ಅಚ್ಚರಿಯ ಸಂಗತಿ ಎಂದರೆ, ಜನಿವಾರವನ್ನು ಕತ್ತರಿಸಿದ ಸಿಬ್ಬಂದಿ ಅದನ್ನು ಆತನ ಕೈಗೆ ಕೊಟ್ಟು ಒಳಗಡೆ ಕಳಿಸಿದ್ದಾರೆ.
ಇದನ್ನೂ ಓದಿ: ಜನಿವಾರ ವಿವಾದ; ಬೀದರ್ನ ಸಾಯಿ ಸ್ಪೂರ್ತಿ ಕಾಲೇಜಿನ ಪ್ರಿನ್ಸಿಪಾಲ್, ಸಿಬ್ಬಂದಿ ಅಮಾನತು
ಈ ಘಟನೆಯಿಂದ ಭಯಗೊಂಡ ನಂದನ್ ಈ ವಿಚಾರವನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ. ಎರಡನೇ ದಿನವೂ ಜನಿವಾರವಿಲ್ಲದೇ ಹೋಗಿ ಪರೀಕ್ಷೆ ಬರೆದು ಬಂದಿದ್ದಾನೆ. ಆದರೆ ಯಾವಾಗ ರಾಜ್ಯದ ವಿವಿಧ ಕಡೆಗಳಲ್ಲಿ ಇಂಥ ಪ್ರಕರಣಗಳು ಮಾಧ್ಯಮದ ಮೂಲಕ ಹೊರಗಡೆ ಬಂದವೋ ಆಗ ಧೈರ್ಯ ಬಂದು, ವಿಚಾರವನ್ನು ಅಣ್ಣನಿಗೆ ತಿಳಿದ್ದಾನೆ. ಆತ ಮರುದಿನ ತಂದೆಯ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ತಂದೆ, ಅದೇ ದಿನ ವಿಚಾರವನ್ನು ಹೇಳಿದ್ದರೆ ನಾನೇ ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದೆ ಅಂತಾ ಮಗನಿಗೆ ಬೈಯ್ದಿದ್ದಾರೆ. ಅಷ್ಟೊತ್ತಿಗೆ ಎಲ್ಲ ಪರೀಕ್ಷೆಗಳು ಮುಗಿದಿದ್ದು, ಈ ಘಟನೆಯಿಂದ ತಾನು ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಅಂತಾ ನಂದನ್ ತಂದೆ ಮುಂದೆ ನೋವು ತೋಡಿಕೊಂಡಿದ್ದಾನೆ. ಘಟನೆಯಿಂದ ಆಕ್ರೋಶಗೊಂಡಿರೋ ಕುಟುಂಬಸ್ಥರು, ಈ ಬಗ್ಗೆ ಸರಿಯಾದ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಇದೀಗ ಬ್ರಾಹ್ಮಣ ಸಮುದಾಯದವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೋಮವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇತ್ತ ಜಿಲ್ಲಾಡಳಿತವು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಒಟ್ಟಿನಲ್ಲಿ ಜನಿವಾರದ ಪ್ರಕರಣಗಳು ಒಂದೊಂದೇ ಹೊರಗಡೆ ಬರುತ್ತಿದ್ದು, ಪರೀಕ್ಷಾ ಕೇಂದ್ರಗಳ ಸಿಬ್ಬಂದಿಯ ಅತಿರೇಕದ ವರ್ತನೆಯನ್ನು ಬಯಲಿಗೆ ತರುತ್ತಿರೋದಂತೂ ಸತ್ಯ.
ವಿದ್ಯಾರ್ಥಿಗಳು ಹಾಕಿದ್ದ ಜನಿವಾರ ತೆಗೆಸಿದ ವಿವಾದ ವಿಚಾರವಾಗಿ ಮಂಗಳೂರಿನಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಸ್ವಾಮಿಜಿ ವಿಷಾದ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಘಟನೆ ಖಂಡನೀಯ. ವಿವಿಧತೆಯಲ್ಲಿ ಏಕತೆ ಪರಿಕಲ್ಪನೆ ಹೊಂದಿರುವ ರಾಷ್ಟ್ರ ಭಾರತ. ಬೇರೆ ಬೇರೆ ಸಂಸ್ಕೃತಿ, ಆಚರಣೆ ಮೈಗೂಡಿಸಿಕೊಂಡಿರುವ ಸಮುದಾಯ ಇಲ್ಲಿವೆ ಎಂದಿದ್ದಾರೆ.
ಇದನ್ನೂ ಓದಿ: CET ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳು: ಆಕ್ರೋಶ
ಸಂವಿಧಾನ ಎಲ್ಲರಿಗೂ ತಮ್ಮ ಧಾರ್ಮಿಕ ನಂಬಿಕೆ, ಆಚರಣೆಯ ಹಕ್ಕನ್ನು ಕೊಟ್ಟಿದೆ. ಯಾವುದೇ ಸಮಾಜಕ್ಕೂ ಇಂತಹ ಪ್ರಚಾರ ನಡೆಯಬಾರದು. ಜನಿವಾರ ತೆಗೆಸಿರುವುದು ವಿಷಾದನೀಯ. ಸರ್ಕಾರ, ಸರ್ಕಾರದ ಪ್ರತಿನಿಧಿಗಳು ಮುಂದೆ ಈ ರೀತಿ ನಡೆಯದಂತೆ ಕ್ರಮಕೈಗೊಳ್ಳುವ ಭರವಸೆ ಇದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.