ಹುಬ್ಬಳ್ಳಿ ಮರ್ಯಾದಾ ಹತ್ಯೆ ಬೆನ್ನಲ್ಲೇ ಹೊಸ ಕಾನೂನು ತರಲು ಮುಂದಾದ ಸರ್ಕಾರ

ಹುಬ್ಬಳ್ಳಿಯಲ್ಲಿ ನಡೆದ ಆರು ತಿಂಗಳ ಗರ್ಭಿಣಿಯ ಮರ್ಯಾದಾ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಮರ್ಯಾದಾ ಹತ್ಯೆ ತಡೆಗೆ ಹೊಸ ಕಾನೂನು ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಘಟನೆ ನಡೆದ ಗ್ರಾಮದಲ್ಲಿ ಜಿಲ್ಲಾಡಳಿತ ಶಾಂತಿ ಸಭೆ ನಡೆಸಿ, ಸೌಹಾರ್ದತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ.

ಹುಬ್ಬಳ್ಳಿ ಮರ್ಯಾದಾ ಹತ್ಯೆ ಬೆನ್ನಲ್ಲೇ ಹೊಸ ಕಾನೂನು ತರಲು ಮುಂದಾದ ಸರ್ಕಾರ
ಮರ್ಯಾದೆ ಹತ್ಯೆ ಪ್ರಕರಣ
Edited By:

Updated on: Dec 29, 2025 | 4:14 PM

ಹುಬ್ಬಳ್ಳಿ, ಡಿಸೆಂಬರ್​ 29: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ (Hubballi) ಸ್ವತ ತಂದೆಯೇ ಆರು ತಿಂಗಳ ಗರ್ಭಿಣಿ ಮಗಳನ್ನು ಬರ್ಬರವಾಗಿ ಹತ್ಯೆಗೈದಿದ್ದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ರಾಜ್ಯದಲ್ಲಿ ಮರ್ಯಾದಾ ಹತ್ಯೆ (honor killing) ತಡೆ ಸಂಬಂಧ ಕಾನೂನು ಜಾರಿಗೊಳಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಕಳೆದ ರಾತ್ರಿ ಗ್ರಾಮದಲ್ಲಿ ಜಿಲ್ಲಾಡಳಿತ ಶಾಂತಿ ಸಭೆ ಕೂಡ ಮಾಡಿದೆ.

ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೊಳಿಸಲು ಚಿಂತನೆ: ಸಿಎಂ ಸುಳಿವು

ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣ ರಾಜ್ಯ ಮತ್ತು ದೇಶದಲ್ಲಿ ದೊಡ್ಡ ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೆ ತರಬೇಕು ಅಂತ ವಿವಿಧ ದಲಿತಪರ ಸಂಘಟನೆಗಳು ಆಗ್ರಹಿಸಿದ್ದವು. ಆದರೆ ಇದೀಗ ರಾಜ್ಯ ಸರ್ಕಾರ ಕೂಡ ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಕಳೆದ ರಾತ್ರಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಮರ್ಯಾದೆ ಹತ್ಯೆ ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಕೇವಲ ಕಾನೂನು ಜಾರಿಗೊಳಿಸಿದರೆ ಸಾಲದು, ಅದನ್ನು ಅನುಷ್ಠಾನಕ್ಕೆ ತರುವ ಕೆಲಸವಾಗಬೇಕು ಅಂತ ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಮರ್ಯಾದೆ ಹತ್ಯೆ: ಮೇಲ್ಜಾತಿ ಯುವತಿಯನ್ನ ಮದ್ವೆಯಾಗಿದ್ದಕ್ಕೆ ಲಿಂಗದೀಕ್ಷೆ ಪಡೆದಿದ್ದ ದಲಿತ ಕುಟುಂಬ

ಡಿಸೆಂಬರ್ 21ರಂದು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಬರ್ಬರ ಕೊಲೆಯಾಗಿತ್ತು. ಮಗಳು ಪ್ರೀತಿಸಿ ದಲಿತ ಸಮುದಾಯದ ಯುವಕನನ್ನು ಮದುವೆಯಾಗಿದ್ದಕ್ಕೆ ಸ್ವತ ತಂದೆಯೇ ಆರು ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿದ್ದ. ಈ ಘಟನೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿತ್ತು. ಒದಂಡೆ ಪ್ರೀತಿಸಿ ಮದುವೆಯಾಗಿದ್ದ ಮಾನ್ಯಾಳ ಬರ್ಬರ ಹತ್ಯೆಯಾಗಿದ್ದರೆ, ಮದುವೆಯಾಗಿದ್ದ ವಿವೇಕನಾಂದ ಕುಟುಂಬದ ಮೇಲೆ ಕೂಡ ದುಷ್ಕರ್ಮಿಗಳು ಅಟ್ಟಹಾಸ ಮೆರದಿದ್ದರು. ಘಟನೆ ನಡೆದು ಎಂಟು ದಿನವಾದರು ಕೂಡ ಗ್ರಾಮದಲ್ಲಿ ಭಯದ ವಾತಾವರಣ ಕಡಿಮೆಯಾಗಿರಲಿಲ್ಲ.

ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ: ಗ್ರಾಮದಲ್ಲಿ ಶಾಂತಿ ಸಭೆ

ಇನ್ನು ಆಸ್ಪತ್ರೆಯಲ್ಲಿ ಅನೇಕ ದಿನಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡರು ಕೂಡ ವಿವೇಕಾನಂದ ಕುಟುಂಬ, ಮರಳಿ ಇನಾಂವೀರಾಪುರ ಗ್ರಾಮಕ್ಕೆ ಹೋಗಲು ಹಿಂದೇಟು ಹಾಕಿತ್ತು. ತಮಗೆ ಗ್ರಾಮದಲ್ಲಿ ಪ್ರಾಣಭಯವಿದೆ ಅಂತ ಆತಂಕ ವ್ಯಕ್ತಪಡಿಸಿತ್ತು. ಇನ್ನು ಘಟನೆ ನಡೆದು ಎಂಟು ದಿನವಾದರು ಕೂಡ ಜಿಲ್ಲಾಡಳಿತ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ಸರ್ವಧರ್ಮ ಮತ್ತು ಜಾತಿಗಳ ನಡುವೆ ಸಮನ್ವಯತೆ, ಶಾಂತಿ ಕಾಪಾಡುವ ಕೆಲಸಕ್ಕೆ ಮುಂದಾಗಿರಲಿಲ್ಲ. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ವರದಿ ನಂತರ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ ಕಳೆದ ರಾತ್ರಿ ಇನಾಂವೀರಾಪುರ ಗ್ರಾಮದಲ್ಲಿ ಶಾಂತಿ ಸಭೆ ಮಾಡಿದೆ.

ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ಮಾಡಿದೆ. ಎಲ್ಲಾ ಜಾತಿ ಮತ್ತು ಧರ್ಮದವರನ್ನು ಸೇರಿಸಿ, ಶಾಂತಿ ಮತ್ತು ಸೌಹಾರ್ದ ಸಭೆಯನ್ನು ನಡೆಸಿ, ಗ್ರಾಮದಲ್ಲಿ ಎಲ್ಲರು ಕೂಡಿ ಬಾಳುವಂತೆ ಸೂಚನೆ ನೀಡಲಾಗಿದೆ.

ಇನ್ನು ಗ್ರಾಮಸ್ಥರು ಕೂಡ ಆಗಿರುವ ಘಟನೆಯನ್ನು ಮರೆತು, ಶಾಂತಿ ಮತ್ತು ಸಹಬಾಳ್ವೆತೆಯಿಂದ ಬದುಕೋದಾಗಿ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ. ಗ್ರಾಮಕ್ಕೆ ಹೋಗಲು ಹಿಂದೇಟು ಹಾಕಿದ್ದ ವಿವೇಕಾನಂದ ಕುಟುಂಬವನ್ನು ಗ್ರಾಮಕ್ಕೆ ಕರೆಸಿ, ಅವರಿಗೆ ಧೈರ್ಯ ತುಂಬಿ, ಅವರ ಮನೆಗೆ ಕಳುಹಿಸಲಾಗಿದೆ. ಇನ್ನು ಮರ್ಯಾದೆ ಹತ್ಯೆಯನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಇಂದು ಕೂಡ ಅನೇಕ ದಲಿತ ಪರಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ.

ಇದನ್ನೂ ಓದಿ: ಮರ್ಯಾದೆ ಹತ್ಯೆ: ಮಾನ್ಯಾ ಜತೆ ಮಗುನೂ ಹೋಯ್ತು, ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುವ ಅಮ್ಮನೂ ಸೀರಿಯಸ್

ರಾಜ್ಯದಲ್ಲಿ ಮರ್ಯಾದೆ ಹತ್ಯೆಗಳನ್ನು ತಡೆಯಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಆದರೆ ಕಾನೂನು ಒಂದಡೆ ಕೆಲಸ ಮಾಡಿದರೆ, ಜನರ ಮನಸಲ್ಲಿ ಉಳಿದಿರುವ ಜಾತಿ ವ್ಯವಸ್ಥೆಯನ್ನು ತೊಲಗಿಸುವ ಕೆಲಸ ಮೊದಲು ಆಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.