ಪ್ರತ್ಯೇಕ ರಸ್ತೆ ಅಪಘಾತ: ತಮ್ಮದಲ್ಲದ ತಪ್ಪಿಗೆ ಮಗು ಸೇರಿ ನಾಲ್ವರು ದಾರುಣವಾಗಿ ಸಾವು
ಕರ್ನಾಟಕದಾದ್ಯಂತ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಮಗು ಸೇರಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೆಳಗಾವಿಯಲ್ಲಿ ಸಿಮೆಂಟ್ ಲಾರಿ ಪಲ್ಟಿಯಾಗಿ ಓರ್ವ ವಿದ್ಯಾರ್ಥಿ ಮೃತಪಟ್ಟರೆ, ಶಿವಮೊಗ್ಗದಲ್ಲಿ ಖಾಸಗಿ ಬಸ್ ಅಪಘಾತದಲ್ಲಿ ಮಗು ಸಾವನ್ನಪ್ಪಿದೆ. ಹುಬ್ಬಳ್ಳಿಯಲ್ಲಿ ಬಸ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ಈ ಎಲ್ಲ ಅಪಘಾತಗಳಲ್ಲಿಯೂ ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿರೋದು ಗಮನಾರ್ಹ.

ಬೆಳಗಾವಿ/ ಶಿವಮೊಗ್ಗ, ಡಿಸೆಂಬರ್ 30: ಸಿಮೆಂಟ್ ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾಲಶಿರಗೂರು ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಗಾಯವಾಗಿದ್ದು, ಹಾರೂಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕುಡಚಿ ಕಡೆಯಿಂದ ಹಾರೂಗೇರಿ ಕಡೆಗೆ ಹೊರಟಿದ್ದ ಸಿಮೆಂಟ್ ಲಾರಿ, ತಿರುವಿನಲ್ಲಿ ಶಾಲೆಗೆ ಹೋಗ್ತಿದ್ದ ವಿದ್ಯಾರ್ಥಿಗಳ ಮೇಲೆ ಪಲ್ಟಿಯಾಗಿದೆ. ಈ ವೇಳೆ 5ನೇ ತರಗತಿ ವಿದ್ಯಾರ್ಥಿ ಅಮಿತ್ ಕಾಂಬಳೆ(11) ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಅಂಜಲಿ ಕಾಂಬಳೆ(15), ಅವಿನಾಶ ಕಾಂಬಳೆ(14) ಸ್ಥಿತಿ ಗಂಭೀರವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ಲಾರಿ ಮೇಲೆತ್ತಿ ಕೆಳಗೆ ಸಿಲುಕಿದ್ದವರ ರಕ್ಷಣೆ ಮಾಡಿದ್ದಾರೆ.
ಖಾಸಗಿ ಬಸ್ ಅಪಘಾತ: ಮಗು ಸಾವು

ಖಾಸಗಿ ಬಸ್ ಅಪಘಾತ
ನಿಯಂತ್ರಣ ತಪ್ಪಿ ಖಾಸಗಿ ಬಸ್ ಧರೆಗೆ ಗುದ್ದಿದ ಪರಿಣಾಮ ಮಗು ಅಸುನೀಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ನಲ್ಲಿ ನಡೆದಿದೆ. ಒಂದೂವರೆ ವರ್ಷದ ಮಗು ಮೃತಪಟ್ಟಿದ್ದರೆ, ಘಟನೆಯಲ್ಲಿ 10 ಜನರಿಗೆ ಗಂಭೀರ ಗಾಯವಾಗಿದೆ. ಬಸ್ ದಾವಣಗೆರೆಯಿಂದ ಮಂಗಳೂರು ಕಡೆ ಹೋಗುತ್ತಿತ್ತು ಎನ್ನಲಾಗಿದ್ದು, ಘಟನೆ ಸಂಬಂಧ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ವಿದ್ಯಾರ್ಥಿ; ಪಾದಚಾರಿ ಸಾವು
ಬೈಕ್ಗೆ ಬಸ್ ಡಿಕ್ಕಿ: ಇಬ್ಬರು ಸಾವು
ಬಸ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ಬಳಿ ನಡೆದಿದೆ. ಮಗು ಸ್ಥಿತಿ ಗಂಭೀರವಾಗಿದ್ದು, ಓವರ್ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಬಸ್ ಬೈಕ್ಗೆ ಗುದ್ದಿದೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದಲ್ಲಿ ಮೃತಪಟ್ಟವರ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಲಾಗ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




