
ಹುಬ್ಬಳ್ಳಿ, ಜೂನ್ 18: ರಾಷ್ಟ್ರಧ್ವಜದ ಜೊತೆಗೆ ಕರ್ನಾಟಕ ಪೊಲೀಸ್ (Karnataka Police) ಧ್ವಜ ಇಂಗ್ಲೆಂಡ್ನಲ್ಲಿ (England) ರಾರಾಜಿಸಿದೆ. ಇದಕ್ಕೆ ಕಾರಣ ಸರ್ಕಲ್ ಇನ್‌ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ (Murugesh Channannavar) ಐತಿಹಾಸಿಕ ಸಾಧನೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ ಕಠಿಣ ಇಂಗ್ಲಿಷ್ ಕಾಲುವೆ ಈಜುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೀನಿನಂತೆ ಈಜುವ ಚನ್ನಣ್ಣವರ, ಈಗಾಗಲೇ ಮಾಡಿರುವ ಹಲವು ಸಾಧನೆಗಳೊಂದಿಗೆ ಮತ್ತೊಂದು ಸಾಧನೆಯ ಗರಿ ತಮ್ಮದಾಗಿಸಿಕೊಂಡಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಆಗಿರುವ ಚನ್ನಣ್ಣವರ, ಈ ಹಿಂದೆ ಈಜಿನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಆದರೆ ಈ ಬಾರಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶಕ್ಕೆ, ರಾಜ್ಯಕ್ಕೆ ಹೆಮ್ಮೆ ಮೂಡಿಸಿದ್ದಾರೆ.
43 ಕಿ.ಮೀ. ಉದ್ದದ ಇಂಗ್ಲಿಷ್ ಕಾಲುವೆಯನ್ನು 13 ಗಂಟೆ 37 ನಿಮಿಷಗಳಲ್ಲಿ ಈಜುವ ಮೂಲಕ ಮುರುಗೇಶ್ ಚನ್ನಣ್ಣವರ ಅವರನ್ನು ಒಳಗೊಂಡ 6 ಜನರ ‘ಪ್ರೈಡ್ ಆಫ್ ಇಂಡಿಯಾ’ ತಂಡ ಮತ್ತೊಂದು ದಾಖಲೆ ನಿರ್ಮಿಸಿದೆ. ಇಂಗ್ಲೆಂಡ್‌ನ ಸ್ಯಾಮ್‌ಥೈರ್ ಹೊಯ್ ದಡದಿಂದ ಆರಂಭವಾದ ಈ ಈಜು, ಫ್ರಾನ್ಸ್‌ನ ವಿಸ್ಸೆಂಟ್ ಬೀಚ್‌ನಲ್ಲಿ ಮುಕ್ತಾಯವಾಯಿತು. ತಂಡದಲ್ಲಿ ಮುರುಗೇಶ ಚನ್ನಣ್ಣವರ, ಹುಬ್ಬಳ್ಳಿ ಕಿಮ್ಸ್‌ನ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಶಾನಭಾಗ, ಹರಿಯಾಣದ ಐಎಎಸ್ ಅಧಿಕಾರಿ ದೀಪಕ್ ಬಾಬುಲಾಲ ಕಾರವಾ, ವಿಕಲಾಂಗ ಈಜುಗಾರರಾದ ಗಣೇಶ್ ಬಾಲಾಜ, ರಾಜಬೀರ, ಮಹಾರಾಷ್ಟ್ರದ ಬಿಬಿಎ ವಿದ್ಯಾರ್ಥಿ ಮಾನವ ಮೊರೆ ಇದ್ದರು.
ಮುರುಗೇಶ್ ಚನ್ನಣ್ಣವರ ಈಜು
ಇಂಗ್ಲಿಷ್ ಚಾನೆಲ್ ಅಸೋಸಿಯೇಶನ್ ನಿಯಮದಂತೆ ಈ 6 ಈಜುಗಾರರು ಒಬ್ಬರ ನಂತರ ಒಬ್ಬರಂತೆ ಮೇಲ್ವಿಚಾರಕ ರಾಬ್ ಸ್ಮಿಥ್, ಪೈಲೆಟ್ ಸ್ಟುವರ್ಟ್ ಹಾಗೂ ಪ್ರಶಾಂತ್ ಕರ್ಮಾಕರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಈಜಿದರು. 13 ರಿಂದ 16 ಡಿಗ್ರಿ ಸೆಲ್ಸಿಯಸ್‌ನಂತರ ಚಳಿ, ಉಕ್ಕೇರುವ ಅಲೆಗಳ ನಡುವೆಯೂ 43 ಕಿ.ಮೀ.ದೂರವನ್ನು ಕೇವಲ 13.37 ಗಂಟೆಗಳಲ್ಲಿ ಈಜುವ ಮೂಲಕ ಗುರಿ ತಲುಪಿದ್ದಾರೆ. ಪ್ರೈಡ್ ಆಫ್ ಇಂಡಿಯಾ ತಂಡವು ಜೂನ್ 16 ರಂದು ಬೆಳಗಿನ 2.15 ಕ್ಕೆ ಈಜು ಆರಂಭಿಸಿದ್ದು, ಮಧ್ಯಾಹ್ನ 3.52 ಕ್ಕೆ ಮುಕ್ತಾಯಗೊಳಿಸಿದೆ.
ಈಜುವ ಸಂದರ್ಭದಲ್ಲಿ ಕೆಲವು ಜನರಿಗೆ ವಾಂತಿಭೇದಿ, ತಲೆ ಸುತ್ತುವುದು, ಇತರೆ ಸಮಸ್ಯೆ ಕಾಡಿದ್ದರೂ ಛಲ ಬಿಡದ ತಂಡ, ಕೆಚ್ಚೆದೆಯಿಂದ ಈ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಿದೆ. ಪೊಲೀಸ್ ಅಧಿಕಾರಿ ಮುರುಗೇಶ್ ಚನ್ನಣ್ಣವರ, ಕರ್ನಾಟಕ ಪೊಲೀಸ್ ಧ್ವಜವನ್ನು ಇಂಗ್ಲೆಂಡಿನಲ್ಲಿ ಹಾರಿಸಿ ಇಲಾಖೆಯ ಕೀರ್ತಿಯನ್ನು ವಿದೇಶದಲ್ಲಿ ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ ಟು ಮಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ಅವಧಿ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ
ಮುರುಗೇಶ್ ಚನ್ನಣ್ಣವರ ಈ ಎಲ್ಲಾ ಸಾಧನೆಗಳಿಗೆ ಸ್ಫೂರ್ತಿಯಾಗಿ ಅವರ ಪತ್ನಿ ಶ್ವೇತಾ ಚನ್ನಣ್ಣವರ ಕೂಡ ಅವರನ್ನು ಅನುಸರಿಸುತ್ತಾ ಬೋಟ್‌ನಲ್ಲಿ ಹೋಗಿದ್ದರು. ಐರನ್‌ಮ್ಯಾನ್ ಖ್ಯಾತಿಯ ಮುರುಗೇಶ್ ಚನ್ನಣ್ಣವರ ಈ ಹಿಂದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್, ದೇಶದ ವಿವಿಧಡೆ ಸಮುದ್ರದಲ್ಲಿ ಈಜಿ ಸಾಧನೆ ಮಾಡಿದ್ದರು. ಅನೇಕ ಸಾಧನೆಗಳ ಮೂಲಕ ಪೊಲೀಸ್ ಇಲಾಖೆಯಲ್ಲಿ ಅಷ್ಟೇ ಅಲ್ಲ, ಸಾರ್ವಜನಿಕ ವಲಯದಲ್ಲಿ ಮುರುಗೇಶ್ ಚನ್ನಣ್ಣವರ ಹೆಸರು ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:27 am, Wed, 18 June 25