AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಕಿತ್ತೂರು ಸಂಸ್ಥಾನದ ರಾಜಗುರುಗಳಿಂದ ಅದ್ದೂರಿ ದಸರಾ ಉತ್ಸವದ ವಿಡಿಯೋ ನೋಡಿ

ಉತ್ತರ ಕರ್ನಾಟಕ ಭಾಗದಲ್ಲಿ ಕಿತ್ತೂರು ಸಂಸ್ಥಾನ ದೊಡ್ಡದು. ಈಗ ಈ ಸಂಸ್ಥಾನ ಇಲ್ಲ. ಹೀಗಾಗಿ ಮೈಸೂರಿನಂತೆ ಇಲ್ಲಿ ನವರಾತ್ರಿ ಉತ್ಸವ ನಡೆಯುವುದಿಲ್ಲ. ಆದರೆ, ಕಿತ್ತೂರು ಸಂಸ್ಥಾನಕ್ಕೆ ಆ ಕಾಲದಲ್ಲಿ ರಾಜಗುರುಗಳಾಗಿದ್ದವರ ವಂಶಸ್ಥರು ಮಾತ್ರ, ಆ ರಾಜಮನೆತನದ ದಸರಾ ಉತ್ಸವವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಈ ರಾಜಗುರುಗಳ ನವರಾತ್ರಿ ಉತ್ಸವ ಕುರಿತಾದ ಮಾಹಿತಿ ಇಲ್ಲಿದೆ.

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Oct 06, 2024 | 10:23 PM

Share

ಧಾರವಾಡ, ಅಕ್ಟೋಬರ್​ 6: ಧಾರವಾಡ (Dharwad) ನಗರದ ಮಂಗಳವಾರ ಪೇಟೆಯಲ್ಲಿ ಕಟ್ಟಿಮಠ ಎಂಬ ಕುಟುಂಬ ವಾಸವಾಗಿದೆ. ಈ ಕುಟುಂಬದ ಪೂರ್ವಜರು ಕಿತ್ತೂರು (Kittur) ಸಂಸ್ಥಾನದ ರಾಜಗುರುಗಳಾಗಿದ್ದರು. ತಮ್ಮ ಪೂರ್ವಜರು ಅಂದು ಆರಂಭಿಸಿದ ದಸರಾ ಉತ್ಸವನ್ನು ಕುಟುಂಬದ ಸದಸ್ಯರು ಇನ್ನೂವರೆಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಈ ವಂಶದ ಈಗಿನ ಕುಡಿ ಕಾರ್ತಿಕ, ಸಾಫ್ಟವೇರ್ ಎಂಜಿನೀಯರ್ ಆಗಿದ್ದು, ತಲೆ ತಲಾಂತರದಿಂದ ನಡೆದುಕೊಂಡ ಬಂದ ನವರಾತ್ರಿ ಉತ್ಸವವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಕಳೆದ ಒಂದೂವರೆ ದಶಕದಿಂದ ನವರಾತ್ರಿ ಆಚರಣೆಗೆ ವಿಜೃಂಭಣೆಯ ಸ್ಪರ್ಶ ನೀಡಿದ್ದಾರೆ.

ಪ್ರತಿ ವರ್ಷ ಸುಮಾರು 10 ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿ, ದೇಶದ ಐತಿಹಾಸಿಕ ದೇವಸ್ಥಾನಗಳನ್ನೇ ತಮ್ಮ ಮನೆಯಲ್ಲಿ ಕಲಾತ್ಮಕವಾಗಿ ಸೃಷ್ಟಿಸಿ, ದೇವಿಯನ್ನೂ ಪ್ರತಿಷ್ಠಾಪಿಸುತ್ತಾರೆ. ಕಳೆದ ವರ್ಷ ವಾರಾಣಸಿ ಸೆಟ್ ನಿರ್ಮಿಸಿದ್ದ ಕಾರ್ತಿಕ ಈ ಸಲ ಶ್ರೀಮಂಡಲ ಎಂಬ ಧಾರ್ಮಿಕ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದ್ದು, ಅದರಡಿಯಲ್ಲಿ ಶ್ರೀಚಕ್ರ, ಅಂಬೆಯ ನವ ಸ್ವರೂಪಗಳ ಆರಾಧನೆ, ಅಲಂಕಾರ ಮಾಡಿದ್ದಾರೆ.

ಕಾರ್ತಿಕ ಮುಂಬೈನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ನವರಾತ್ರಿ ಸಮಯದಲ್ಲಿ ಕಂಪನಿಗೆ ರಜೆ ಹಾಕಿ ಧಾರವಾಡಕ್ಕೆ ಬಂದು ಹಬ್ಬ ಆಚರಿಸುತ್ತಾರೆ. ನವರಾತ್ರಿಯಲ್ಲಿ ಸಂಪೂರ್ಣವಾಗಿ ಮನೆಯಲ್ಲಿಯೇ ಇದ್ದು, ಅಲಂಕಾರಗಳನ್ನು ಮಾಡುತ್ತಾರೆ. ಈ ಸಲದ ಶ್ರೀಚಕ್ರವನ್ನು ಸಾಮಾನ್ಯ ಜನರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ದು, ಇದಕ್ಕಾಗಿ ಕಾಶ್ಮೀರಿ ಪಂಡಿತರ ಹಾಗೂ ಶೃಂಗೇರಿ ಪೀಠದ ವಿದ್ವಾಂಸರ ಸಹಾಯ ಪಡೆದಿದ್ದಾರೆ.

ಇದನ್ನೂ ಓದಿ: ಧಾರವಾಡ: ಒಂದೇ ಮನೆಯಲ್ಲಿ 3000 ಗೊಂಬೆಗಳ ಪ್ರತಿಷ್ಠಾಪನೆ

ವಿವಿಧ ಕಲಾತ್ಮಕ ಮೂರ್ತಿಗಳು, ಚಿತ್ರಕಲೆಗಳ ಮೂಲಕ ದೇವಿ ಕಥೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಇವರ ಮನೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ನಡೆಯುವ ಅಲಂಕಾರ ನೋಡುವುದಕ್ಕೆ ಸಾಕಷ್ಟು ಜನ ಬರುತ್ತಾರೆ. ಇವರ ಮನೆ ರಾಜಗುರು ಮನೆತನ ಆಗಿರುವುದರಿಂದ ನವರಾತ್ರಿ ಸಮಯದಲ್ಲಿ ನಿತ್ಯವೂ ವಿವಿಧ ಮಠಾಧೀಶರುಗಳ ಸಹ ಬಂದು ದರ್ಶನ ಮಾಡಿಕೊಂಡು ಹೋಗುತ್ತಾರೆ. ನಿತ್ಯ ದರ್ಶನಕ್ಕೆ ಬರುವ ಜನರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡುತ್ತಾರೆ.

ರಾಜಮನೆತನಗಳವರು ಪ್ರಜೆಗಳ ಸುಖ ನೆಮ್ಮದಿಗಾಗಿ ಹಿಂದಿನ ಕಾಲದಲ್ಲಿ ದೇವಿ ಆರಾಧನೆ ಮಾಡುತ್ತ ಬಂದಿದ್ದರು. ಅದನ್ನೇ ಈಗ ಕಿತ್ತೂರು ಸಂಸ್ಥಾನದ ರಾಜರು, ರಾಜಗುರುಗಳು ಇಲ್ಲದೇ ಇದ್ದರೂ ಅವರು ಕಾರ್ಯ ನಿಲ್ಲಬಾರದೆಂದು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ