ಲೋಕಾಯುಕ್ತ ಸಿಬ್ಬಂದಿ​​ ಕಂಡು ಕಕ್ಕಾಬಿಕ್ಕಿ: ಧಾರವಾಡದಲ್ಲಿ ಕಮೋಡ್‌ಗೆ ಹಣ ಸುರಿದ ಅಧಿಕಾರಿ

ಲೋಕಾಯುಕ್ತ ಪೊಲೀಸರು ರಾಜ್ಯದಾದ್ಯಂತ ಹಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಧಾರವಾಡದ ಅಧಿಕಾರಿಯೊಬ್ಬರು ಲೋಕಾಯುಕ್ತ ಸಿಬ್ಬಂದಿ ಕಂಡು ಕಕ್ಕಾಬಿಕ್ಕಿಯಾಗಿದ್ದು ಹಣವನ್ನು ಕಮೋಡ್‌ಗೆ ಸುರಿದು ಫ್ಲಶ್ ಮಾಡಿದ್ದಾರೆ. ಧಾರವಾಡ, ಶಿವಮೊಗ್ಗ, ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು ಸೇರಿ ವಿವಿಧೆಡೆ ದಾಳಿ ನಡೆದಿದೆ.

ಲೋಕಾಯುಕ್ತ ಸಿಬ್ಬಂದಿ​​ ಕಂಡು ಕಕ್ಕಾಬಿಕ್ಕಿ: ಧಾರವಾಡದಲ್ಲಿ ಕಮೋಡ್‌ಗೆ ಹಣ ಸುರಿದ ಅಧಿಕಾರಿ
ಲೋಕಾಯುಕ್ತ ದಾಳಿ

Updated on: Dec 16, 2025 | 12:22 PM

ಬೆಂಗಳೂರು, ಡಿಸೆಂಬರ್​​ 16: ರಾಜ್ಯದ ವಿವಿಧೆಡೆ ಅಧಿಕಾರಿಗಳಿಗೆ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಶಾಕ್​​ ಕೊಟ್ಟಿದೆ. ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿ ಸೇರಿ ವಿವಿಧೆಡೆ ಶೋಧ ನಡೆಸಿರುವ ಲೋಕಾಯುಕ್ತ ಸಿಬ್ಬಂದಿ ಕೆಲವೆಡೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಧಾರವಾಡ, ಶಿವಮೊಗ್ಗ, ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು ಸೇರಿ ವಿವಿಧೆಡೆ ದಾಳಿ ನಡೆದಿದೆ.

ಅರ್ಧಗಂಟೆ ಬಳಿಕ ಮನೆ ಬಾಗಿಲು ತೆಗೆದ ಅಧಿಕಾರಿ

ಬೆಳಗಾವಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿರುವ ರಾಜಶೇಖರ್​ ಅವರ ಧಾರವಾಡದ ಸಿಲ್ವರ್ ಆರ್ಚೆಡ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ರಾಜಶೇಖರ್​​ಗೆ ಸೇರಿದ ಒಟ್ಟು ಮೂರು ಕಡೆ ರೇಡ್​​ ನಡೆದಿದೆ. ರಾಣಿ ಚೆನ್ನಮ್ಮ ನಗರದಲ್ಲಿರುವ ರಾಜಶೇಖರ್​ಗೆ ಸೇರಿದ ಖಾಸಗಿ ಕಚೇರಿ, ಯರಿಕೊಪ್ಪ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೂ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಸಿಬ್ಬಂದಿ ಕಂಡು ಬೆದರಿದ ರಾಜಶೇಖರ್​​ ಸುಮಾರು 50 ಸಾವಿರ ರೂ. ಹಣವನ್ನು ಕಮೋಡ್‌ಗೆ ಸುರಿದು ಫ್ಲಶ್​​ ಮಾಡಿದ್ದಾರೆ. ಸುಮಾರು ಅರ್ಧಗಂಟೆ ಕಾಲ ಲೊಕಾಯುಕ್ತ ಪೊಲೀಸರನ್ನು ಮನೆ ಹೊರಗೆ ಕಾಯಿಸಿ ಬಳಿಕ ಬಾಗಿಲು ತೆಗೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರು, ಮೈಸೂರು ಸೇರಿ ರಾಜ್ಯದ 10 ಕಡೆ ಲೋಕಾಯುಕ್ತ ರೇಡ್​​​; ದಾಳಿ ವೇಳೆ ಸಿಕ್ಕಿದ್ದೇನು?

ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ದಾಖಲೆ ಪತ್ತೆ

ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಗಳಿಕೆ ಆರೋಪ ಹಿನ್ನೆಲೆ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ರೂಪ್ಲಾ ನಾಯ್ಕ ಅವರ ಮನೆ, ಕಚೇರಿ ಸೇರಿ ವಿವಿಧೆಡೆ ಲೋಕಾಯುಕ್ತ ರೇಡ್​​ ಮಾಡಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಏಕ ಕಾಲಕ್ಕೆ ದಾಳಿ ನಡೆಸಲಾಗಿದ್ದು ಬಸವನಗುಡಿ ಮತ್ತು ಕೆಂಗೇರಿಯ ಮನೆ, ಶಿವಮೊಗ್ಗದ ಕಚೇರಿ, ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದ ನಿವಾಸದಲ್ಲೂ ಪರಿಶೀಲನೆ ನಡೆದಿದೆ. ದಾಳಿಯ ವೇಳೆ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿರುವ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ.

ಮಂಡ್ಯ ಪಿಆರ್​ಇಡಿ ಸೂಪರ್ಡೆಂಟೆಂಟ್ ಬೈರೇಶ್​​ಗೂ ಲೋಕಾಯುಕ್ತ ಶಾಕ್​​ ಕೊಟ್ಟಿದ್ದು, ಏಕಕಾಲದಲ್ಲಿ ಮಂಡ್ಯದ ನಿವಾಸ, ಮದ್ದೂರಿನ ಅತ್ತೆ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಬೈರೇಶ್ ಮೇಲೆ ಸಾರ್ವಜನಿಕರಿಂದ ಹಲವು ದೂರು‌ಗಳು ಬಂದಿದ್ದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:36 am, Tue, 16 December 25