ಅನ್ಯಜಾತಿ ಯುವತಿ ಜೊತೆ ಮಗ ಮದುವೆ ಆಗಿದ್ದಕ್ಕೆ ತಾಯಿಗೆ ಶಿಕ್ಷೆ?: ಪೊಲೀಸರ ಮೇಲೆಯೇ ಆರೋಪ
ಮಗ ಅನ್ಯಜಾತಿಯ ಯುವತಿಯೊಂದಿಗೆ ಮದುವೆಯಾದ ಕಾರಣಕ್ಕೆ ಆತನ ತಾಯಿಗೆ ಪೊಲೀಸರು ಹಲ್ಲೆ ಮಾಡಿದ್ದಾರೆಂಬ ಗಂಭೀರ ಆರೋಪ ಹುಬ್ಬಳ್ಳಿಯಲ್ಲಿ ಕೇಳಿಬಂದಿದೆ. ಮಗನ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಕ್ಕೆ ಮಹಿಳೆಯ ಮೇಲೆ ಪೊಲೀಸರು ಬೆಲ್ಟ್‌ನಿಂದ ಥಳಿಸಿದ್ದಾರೆ. ವಿಚಾರಣೆ ನೆಪದಲ್ಲಿ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಧಾರವಾಡ ಎಸ್ಪಿ ತಿಳಿಸಿದ್ದಾರೆ.

ಹುಬ್ಬಳ್ಳಿ, ಡಿಸೆಂಬರ್ 15: ಮನೆ ಮಗ ಅಥವಾ ಮಗಳು ಇನ್ಯಾವುದೋ ಜಾತಿಯವರನ್ನ ಮದುವೆ ಆದ ಕಾರಣಕ್ಕೆ ಅವರನ್ನೇ ಕೊಂದ, ಮನೆಯಿಂದ ಹೊರ ಹಾಕಿದ ಅದೆಷ್ಟೋ ಪ್ರಕರಣಗಳ ಬಗ್ಗೆ ನಾವು ಕೇಳಿದ್ದೇವೆ. ಆದ್ರೆ ಹುಬ್ಬಳ್ಳಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮಗ ಅನ್ಯ ಜಾತಿಯ ಯುವತಿ ಜೊತೆ ಓಡಿ ಹೋಗಿ ಮದುವೆ ಆಗಿದ್ದಕ್ಕೆ ಆತನ ತಾಯಿ ಮೇಲೆ ಪೊಲೀಸರು ಮನಸೋ ಇಚ್ಛೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮುಳ್ಳಳಿ ಗ್ರಾಮದ ಯುವಕ ದೇವರಾಜ್ ಎದುರು ಮನೆ ಯುವತಿ ಜೊತೆ ಓಡಿಹೋಗಿ ಮದುವೆ ಆಗಿದ್ದಾನೆ. ತಿಂಗಳ ಹಿಂದೆ ಇವರಿಬ್ಬರ ಅಂತರ್ಜಾತಿ ವಿವಾಹ ನಡೆದಿತ್ತು. ಮದುವೆಗೆ ಒಪ್ಪಿಗೆ ಇಲ್ಲದ ಕಾರಣ ಯುವತಿ ಪೋಷಕರು ಈ ಬಗ್ಗೆ ಕುಂದಗೋಳ ಠಾಣೆಗೆ ದೂರು ನೀಡಿದ್ದರು. ಈ ಹಿನ್ನಲೆ ದೇವರಾಜ್ ತಾಯಿ ಲಕ್ಷ್ಮವ್ವ ಬೆಂತೋಳಿ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ನಿನ್ನ ಮಗ ಎಲ್ಲಿದ್ದಾನೆಂದು ಈ ವೇಳೆ ಪೊಲೀಸರು ಪ್ರಶ್ನಿಸಿದ್ದು, ಆ ಬಗ್ಗೆ ತನೆಗೆ ಮಾಹಿತಿ ಇಲ್ಲ ಎಂದು ಲಕ್ಷ್ಮವ್ವ ಹೇಳಿದ ಹಿನ್ನೆಲೆ ಥಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮದುವೆ ಮಂಟಪಕ್ಕೇ ನುಗ್ಗಿ ಮಾಜಿ ಪ್ರಿಯಕರನಿಗೆ ಶಾಕ್ಕೊಟ್ಟ ಯುವತಿ; ಫುಲ್ ಹೈಡ್ರಾಮಾ
ಬೆಲ್ಟ್‌ನಿಂದ ಲಕ್ಷ್ಮವ್ವ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಲಾಗಿದೆ. ಮಹಿಳಾ ಪೊಲೀಸರ ಜೊತೆ ಪುರುಷ ಸಿಬ್ಬಂದಿಯೂ ಹಲ್ಲೆ ನಡೆಸಿದ್ದಾರೆ. ಮಗ ದೇವರಾಜ್ ಎಲ್ಲಿದ್ದಾನೆಂದು ಗೊತ್ತಿಲ್ಲ ಎಂದರೂ ಬೆಂಬಿಡದೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ಹಲ್ಲೆಯಿಂದ ಹಲ್ಲೆಗೊಳಗಾದ ಲಕ್ಷ್ಮವ್ವ ಸ್ಥಿತಿ ಗಂಭೀರವಾಗಿದ್ದು, ಅಸ್ವಸ್ಥಗೊಂಡಿರುವ ಅವರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪೊಲೀಸರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದ ಹಿನ್ನೆಲೆ ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:50 pm, Mon, 15 December 25



