ಆರಕ್ಷಕರ ಕುಟುಂಬಕ್ಕಿಲ್ಲ ರಕ್ಷಣೆ; ನಿರ್ವಾಹಣೆ ಮಾಯ, ಮನೆ ಕುಸಿಯುವ ಆತಂಕದಲ್ಲೇ ದಿನ ಕಳೆಯುತ್ತಿರುವ ಕುಟುಂಬಗಳು

ಧಾರವಾಡ ನಗರದ ಸಾಧನಕೇರಿ ಬಡಾವಣೆಯ ರಕ್ಷಾ ಕಾಲೊನಿಯಲ್ಲಿ ಪೊಲೀಸ್ ಸಿಬ್ಬಂದಿಗಾಗಿಯೇ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗಿದೆ. ಹೊರಗಿನಿಂದ ನೋಡಿದರೆ ಅದ್ಭುತವಾಗಿ ಕಾಣುವ ಈ ಕಟ್ಟಡದ ಒಳಗಡೆ ವಾಸಿಸೋ ಜನರ ಪಾಡನ್ನು ಹೇಳತೀರದು.

ಆರಕ್ಷಕರ ಕುಟುಂಬಕ್ಕಿಲ್ಲ ರಕ್ಷಣೆ; ನಿರ್ವಾಹಣೆ ಮಾಯ, ಮನೆ ಕುಸಿಯುವ ಆತಂಕದಲ್ಲೇ ದಿನ ಕಳೆಯುತ್ತಿರುವ ಕುಟುಂಬಗಳು
ಧಾರವಾಡ ನಗರದ ಸಾಧನಕೇರಿ ಬಡಾವಣೆಯ ರಕ್ಷಾ ಕಾಲೊನಿಯಲ್ಲಿ ಪೊಲೀಸ್ ಸಿಬ್ಬಂದಿಯ ವಸತಿ ಸಮುಚ್ಚಯ

ಧಾರವಾಡ: ಪೊಲೀಸರು ಸಮಾಜಕ್ಕೆ ರಕ್ಷಣೆ ನೀಡುವವರು. ಅವರೆಲ್ಲ ತಮ್ಮ ಕುಟುಂಬವನ್ನು ಮರೆತು ಇತರರ ಕುಟುಂಬಕ್ಕೆ ರಕ್ಷಣೆಗೆ ನಿಲ್ಲುವವರು. ಆದರೆ ಒಂದು ಕಡೆ ಅವರು ಜನರ ಭದ್ರತೆಗಾಗಿ ಕಾರ್ಯನಿರತರಾಗಿದ್ದರೆ, ಮತ್ತೊಂದು ಕಡೆ ಅವರ ಕುಟುಂಬಗಳು ಮಾತ್ರ ಸುರಕ್ಷತೆ ಭೀತಿಯಲ್ಲೇ ದಿನದೂಡಬೇಕಾದ ಸ್ಥಿತಿ ಧಾರವಾಡದಲ್ಲಿ ಎದುರಾಗಿದೆ. ಅತ್ತ ಕುಟುಂಬದ ಯಜಮಾನ ಕರ್ತವ್ಯದಲ್ಲಿದ್ದರೆ, ಇತ್ತ ತಮಗೆ ಸರ್ಕಾರವೇ ನೀಡಿರೋ ಮನೆ ಯಾವಾಗ ಕುಸಿದು ಬೀಳುತ್ತೋ ಅನ್ನೋ ಭೀತಿ ಇದೆ.

ಕೇವಲ ಆರು ವರ್ಷದ ಹಿಂದೆ ಕಟ್ಟಿದ ಕಟ್ಟಡ
ಧಾರವಾಡ ನಗರದ ಸಾಧನಕೇರಿ ಬಡಾವಣೆಯ ರಕ್ಷಾ ಕಾಲೊನಿಯಲ್ಲಿ ಪೊಲೀಸ್ ಸಿಬ್ಬಂದಿಗಾಗಿಯೇ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗಿದೆ. ಹೊರಗಿನಿಂದ ನೋಡಿದರೆ ಅದ್ಭುತವಾಗಿ ಕಾಣುವ ಈ ಕಟ್ಟಡದ ಒಳಗಡೆ ವಾಸಿಸೋ ಜನರ ಪಾಡನ್ನು ಹೇಳತೀರದು. ಆರು ವರ್ಷಗಳ ಹಿಂದೆಯಷ್ಟೇ ಈ ಕಟ್ಟಡ ನಿರ್ಮಾಣವಾಗಿದೆ. ಆದರೂ ಇಂತಹ ಹೊಸ ಕಟ್ಟಡದಲ್ಲಿರೋಕೆ ಪೊಲೀಸರ ಕುಂಬಸ್ಥರು ಭಯಪಡಬೇಕಾದ ಸ್ಥಿತಿ ಎದುರಾಗಿದೆ. ಕಟ್ಟಡದ ಹಿಂಭಾಗದ ಕಾಂಪೌಂಡ್ ಈಗಾಗಲೇ ಅರ್ಧ ಕುಸಿದಿದ್ದು, ಇಷ್ಟರಲ್ಲಿಯೇ ಸಂಪೂರ್ಣವಾಗಿ ಕುಸಿಯುವ ಮುನ್ಸೂಚನೆ ನೀಡಿದೆ.

police quarters

ಕಟ್ಟಡದ ಹಿಂಭಾಗದ ಕಾಂಪೌಂಡ್ ಈಗಾಗಲೇ ಅರ್ಧ ಕುಸಿದಿದ್ದು, ಇಷ್ಟರಲ್ಲಿಯೇ ಸಂಪೂರ್ಣವಾಗಿ ಕುಸಿಯುವ ಮುನ್ಸೂಚನೆ ನೀಡಿದೆ.

ಎರಡು ವಿಭಾಗ, 24 ಮನೆಗಳು
ಒಟ್ಟು ಎರಡು ವಿಭಾಗಗಳಲ್ಲಿ ತಲಾ ಎರಡು ಮಹಡಿಗಳಿದ್ದು, ಒಟ್ಟು 24 ಕುಟುಂಬಗಳು ಇಲ್ಲಿವೆ. ದುರಂತ ಅಂದರೆ ಇಡೀ ಕಟ್ಟಡವೇ ಈಗ ಹಿಂಭಾಗಕ್ಕೆ ಕುಸಿದು ಬೀಳುತ್ತೇನೋ ಅನ್ನೋ ಭೀತಿ ಸ್ಥಳೀಯರಿಗೆ ಎದುರಾಗಿದೆ. ಇದಕ್ಕೆ ಕಾರಣವಾಗಿದ್ದು, ಈ ಕಟ್ಟಡದ ಹಿಂಭಾಗದಲ್ಲಿ ಸಣ್ಣದಾಗಿ ಶುರುವಾಗಿದ್ದ ಕುಸಿತ ಈಗ ದೊಡ್ಡ ಪ್ರಮಾಣಕ್ಕೇರಿದೆ. ಆರಂಭದಲ್ಲಿ ಕಟ್ಟಡಕ್ಕೆ ಹಾಕಲಾಗಿದ್ದ ಆವರಣ ಗೋಡೆ ಕುಸಿದು ಬೀಳುತ್ತಿದೆ ಅಂತಾನೇ ಇಲ್ಲಿದ್ದವರು ಭಾವಿಸಿದ್ದರು. ಆದರೆ ಈಗ ಆವರಣ ಗೋಡೆ ಸಮೇತ ಕಟ್ಟಡಕ್ಕೆ ಮಾಡಲಾಗಿದ್ದ ಹೊರಕವಚವೂ ಸಹ ಕುಸಿಯೋದಕ್ಕೆ ಶುರುವಾದಾಗಿದೆ. ಇದರಿಂದಾಗಿ ಇಲ್ಲಿ ವಾಸಿಸುತ್ತಿರೋ ಪೊಲೀಸ್ ಕುಟುಂಬಗಳು ಇದೀಗ ಜೀವ ಭಯದಲ್ಲಿ ದಿನ ಕಳೆಯುತ್ತಿವೆ.

ಮಳೆ ಬಂದರೆ ನೀರೆಲ್ಲ ಒಳಗಡೆಯೇ
ಇದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷ್ನರೇಟ್ ವ್ಯಾಪ್ತಿಗೆ ಬರೋ ವಸತಿ ಸಮುಚ್ಚಯ. ಇಲ್ಲಿರೋ ಎಲ್ಲರೂ ಈ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುವ ಪೊಲೀಸರು. ಒಂದೆಡೆ ಹಿಂಭಾಗದಲ್ಲಿ ಕಾಂಪೌಂಡ್ ಕುಸಿತ ಶುರುವಾಗಿದ್ದರೆ, ಮತ್ತೊಂದೆಡೆ ಇಡೀ ಕಟ್ಟಡವೇ ದಿನದಿಂದ ದಿನಕ್ಕೆ ಶಿಥಿಲಗೊಳ್ಳುತ್ತಾ ಹೋಗುತ್ತಿದೆ. ಇನ್ನು ಕಟ್ಟಡದ ಅನೇಕ ಕಡೆಗಳಲ್ಲಿ ಬಿರುಕು ಕಾಣಿಸುತ್ತಿದೆ. ಇದರಿಂದಾಗಿ ನಿವಾಸಿಗಳಲ್ಲಿ ಆತಂಕ ಶುರುವಾಗಿದೆ. ಇನ್ನು ಮೇಲಿನ ಮಹಡಿಯಲ್ಲಿರುವ ಮನೆಗಳಲ್ಲಿ ಟೆರೆಸ್ನಿಂದ ನೀರು ಸೋರಿಕೆಯಾಗುತ್ತಿದೆ. ಸಣ್ಣದೊಂದು ಮಳೆ ಬಂದರೂ ಸಾಕು ನೀರೆಲ್ಲಾ ಟೆರೆಸ್ನಿಂದ ಒಳಗಡೆ ಬಂದು ಬಿಡುತ್ತದೆ. ಅಷ್ಟೇ ಅಲ್ಲ, ಮೇಲಿನ ನೀರಿನ ಟ್ಯಾಂಕ್ ತುಂಬಿ ನೀರು ಹರಿದರೂ, ಆ ನೀರೆಲ್ಲ ಒಳಗಡೆ ಸೋರುತ್ತದೆ. ಇಂತಹ ಹೊಸ ಕಟ್ಟಡದಲ್ಲಿದ್ದರೂ ಪ್ಲಾಸ್ಟಿಕ್ ಕಟ್ಟಿಕೊಂಡೇ ಮನೆಯೊಳಗೆ ಗುಡಿಸಲಿನಂತೆ ಇರಬೇಕಾದ ಸ್ಥಿತಿ ಈ ಕುಟುಂಬಗಳಿಗೆ ಒದಗಿದೆ. ಇನ್ನು ಈ ಕಟ್ಟಡದೊಳಗೆ ಒಮ್ಮೆ ಪ್ರವೇಶಿಸಿದರೆ ಸಾಕು ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳೇ ಎದುರಾಗುತ್ತವೆ. ಏಕೆಂದರೆ ನಿರ್ವಹಣೆಯ ಜವಾಬ್ದಾರಿಯನ್ನು ಸಂಬಂಧಿಸಿದವರು ಮರೆತು ಹೋಗಿದ್ದು, ಇಲ್ಲಿರೋರು ತಾವೇ ಹಣ ಹಾಕಿ ನಿರ್ವಹಣೆ ಮಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ.

ಯಾವುದೇ ಸಮಸ್ಯೆ ಬಂದರೂ ಸ್ಪಂದನೆ ಇಲ್ಲ
ನಿತ್ಯವೂ ಇಲ್ಲಿನ ಕುಟುಂಬಗಳು ಒಂದಿಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಲೇ‌ ಇರುತ್ತವೆ. ವಿದ್ಯುತ್, ಕುಡಿಯುವ ನೀರು, ಡ್ರೈನೇಜ್ ಸಮಸ್ಯೆ – ಹೀಗೆ ನಿತ್ಯವೂ ಒಂದಿಲ್ಲಾ ಒಂದು ಸಮಸ್ಯೆಯಿಂದ ಕುಟುಂಬಸ್ಥರು ಬಳಲುತ್ತಲೇ ಇದ್ದಾರೆ. ಸಮಸ್ಯೆ ಬಂದ ಕೂಡಲೇ ಎಲ್ಲರೂ ಸೇರಿ ಹಣ ಹಾಕಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಸಮಸ್ಯೆ ಬಗೆಹರಿಸಬೇಕಾದ ಇಲಾಖೆಯವರು ಮಾತ್ರ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

police quarters

ಬಿರುಕು ಬಿಟ್ಟ ಗೋಡೆಗಳು

ಪೊಲೀಸರು ಬಾಯಿ ಬಿಡುವಂತಿಲ್ಲ, ಸಮಸ್ಯೆ ಹೇಳಿಕೊಳ್ಳುವಂತಿಲ್ಲ
ಇನ್ನು ಇಲ್ಲಿರುವ ಎಲ್ಲರೂ ಸಹ ಪೊಲೀಸರೇ. ಹೀಗಾಗಿ ಇವರಿಗೆ ತಮ್ಮ ವಸತಿ ಸಮುಚ್ಛಯದಲ್ಲಿನ ಸಮಸ್ಯೆಗಳನ್ನು ಮೇಲಾಧಿಕಾರಿಗಳಿಗೆ ಹೇಳುವಂತೆಯೂ ಇಲ್ಲ, ಹಾಗಂತ ಬಿಡುವಂತೆಯೂ ಇಲ್ಲ. ಇಲಾಖೆಯಲ್ಲಿನ ಶಿಸ್ತು, ಗತ್ತು ಎಲ್ಲ ಪೊಲೀಸರನ್ನು ಕಟ್ಟಿ ಹಾಕಿದೆ. ಹಾಗಂತ ಇವರ ಕುಟುಂಬದವರು ಅದೆಷ್ಟು ದಿನ ಹೀಗೆ ಸಹಿಸಿಕೊಂಡು ಇರಬೇಕು ಅನ್ನೋದು ಮಂಜುಳಾ ಅನ್ನುವ ಗೃಹಿಣಿಯ ಪ್ರಶ್ನೆ.

ನಾನು ಈಗಲೇ ಭೇಟಿ ನೀಡಿತ್ತೇನೆ ಎಂದ ಆಯುಕ್ತ ಲಾಭೂರಾಮ್
ಇನ್ನು ಈ ಬಗ್ಗೆ ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್, ಈ ಬಗ್ಗೆ ನನಗೆ ತಿಳಿದಿರಲಿಲ್ಲ. ಇಂಥ ಸಮಸ್ಯೆಗಳು ಇರುವ ಕಟ್ಟಡಗಳ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇದೀಗ ಕಟ್ಟಡದ ಬಗ್ಗೆಯೂ ಗಮನ ಹರಿಸುತ್ತೇನೆ. ಈ ಕೂಡಲೇ ನಾನೇ ಅಲ್ಲಿಗೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಮಾತನಾಡುತ್ತೇನೆ. ಅವರ ಸಮಸ್ಯೆಗೆ ಪರಿಹಾರದ ವ್ಯವಸ್ಥೆ ಮಾಡುತ್ತೇನೆ ಅಂತಾ ಹೇಳಿದ್ದಾರೆ.

police quarters

ಮನೆ ಕುಸಿಯುವ ಆತಂಕದಲ್ಲೇ ದಿನ ಕಳೆಯುತ್ತಿರುವ ಕುಟುಂಬಗಳು

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ: ದಾವಣಗೆರೆ: ಮದುವೆಯಾಗಲ್ಲ ಅಂತ ಹಠ ಹಿಡಿದ ಯುವತಿ ಗ್ರಾಮಕ್ಕೆ ಬಂತು ಬಸ್; ಗ್ರಾಮಸ್ಥರು ಫುಲ್ ಖುಷ್

Read Full Article

Click on your DTH Provider to Add TV9 Kannada