ಮುಚ್ಚಿ ಹೋಗೋ ಹಂತಕ್ಕೆ ಬಂದಿದ್ದ ಏಕೈಕ ಪೊಲೀಸ್ ಮಕ್ಕಳ ವಸತಿ ಶಾಲೆ -ಆರ್ಥಿಕವಾಗಿ ಕೈಹಿಡಿದ ಕೇಂದ್ರ ಸಚಿವ: ಏನದು ಶಾಲೆಯ ವಿಶೇಷ?
ರಾಜ್ಯದ ಏಕೈಕ ಪೊಲೀಸ್ ಮಕ್ಕಳ ವಸತಿ ಶಾಲೆ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ಪುನರ್ ನಿರ್ಮಾಣ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ತಮ್ಮ ಗಣಿ ಮತ್ತು ಕಲ್ಲಿದ್ದಲು ಖಾತೆ ಅಧೀನದಲ್ಲಿ ಬರುವ ಕೋಲ್ ಇಂಡಿಯಾ ಕಂಪನಿಯ ಸಿಎಸ್ ಆರ್ ಅಡಿ 2 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ. ಇದರಿಂದಾಗಿ ಮುಚ್ಚಿ ಹೋಗೋ ಆತಂಕದಲ್ಲಿದ್ದ ಶಾಲೆಗೆ ಮರುಜೀವ ಬಂದಂತಾಗಿದೆ.
ರಾಜ್ಯದ ಏಕೈಕ ಪೊಲೀಸ್ ಮಕ್ಕಳ ವಸತಿ ಶಾಲೆ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ಪುನರ್ ನಿರ್ಮಾಣಕ್ಕೆ ಸಹಾಯಹಸ್ತ ಸಿಕ್ಕಿದೆ. ಇದುವರೆಗೂ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಶಾಲೆಗೆ ಇದೀಗ ಎರಡು ಕೋಟಿ ರೂಪಾಯಿ ಆರ್ಥಿಕ ಸಹಾಯ ಸಿಕ್ಕಿದೆ. ಈ ಶಾಲೆಯನ್ನು ಮುಚ್ಚಿಬಿಡಬೇಕು ಅನ್ನೋ ಲೆಕ್ಕಾಚಾರದಲ್ಲಿದ್ದ ರಾಜ್ಯ ಸರಕಾರದ ವಿರುದ್ಧ ನಡೆದಿದ್ದ ಹೋರಾಟಕ್ಕೆ ಇದೀಗ ಈ ಆರ್ಥಿಕ ಸಹಾಯದಿಂದ ಶಕ್ತಿ ಬಂದಂತಾಗಿದೆ. ಅಷ್ಟಕ್ಕೂ ಈ ಆರ್ಥಿಕ ಸಹಾಯ ಬಂದಿದ್ದಾದರೂ ಎಲ್ಲಿಂದ? ಇಲ್ಲಿದೆ ನೋಡಿ…
ರಾಜ್ಯದ ಏಕೈಕ ಪೊಲೀಸ್ ಮಕ್ಕಳ ವಸತಿ ಶಾಲೆ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ಪುನರ್ ನಿರ್ಮಾಣ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ತಮ್ಮ ಗಣಿ ಮತ್ತು ಕಲ್ಲಿದ್ದಲು ಖಾತೆ ಅಧೀನದಲ್ಲಿ ಬರುವ ಕೋಲ್ ಇಂಡಿಯಾ ಕಂಪನಿಯ ಸಿಎಸ್ ಆರ್ ಅಡಿ 2 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ. ಇದರಿಂದಾಗಿ ಮುಚ್ಚಿ ಹೋಗೋ ಆತಂಕದಲ್ಲಿದ್ದ ಶಾಲೆಗೆ ಮರುಜೀವ ಬಂದಂತಾಗಿದೆ.
1997ರಲ್ಲಿ ಧಾರವಾಡದಲ್ಲಿ ಆರಂಭಗೊಂಡ ಈ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಸರಕಾರ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ ಗುಣಾತ್ಮಕ ಶಿಕ್ಷಣ ನೀಡುತ್ತ ಬಂದಿದೆ. ಸದ್ಯ ಈ ವಸತಿ ನಿಲಯಗಳ ಕಟ್ಟಡ ಶಿಥಿಲಗೊಂಡಿದ್ದು, ನೂತನ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಸಚಿವ ಜೋಶಿಯವರು ತಮ್ಮ ಅಧೀನದಲ್ಲಿ ಬರುವ ಕೋಲ್ ಇಂಡಿಯಾ ಕಂಪನಿಯ ಅಧಿಕಾರಿಗಳೊಂದಿಗೆ ಮಾತನಾಡಿ ಹಣ ಬಿಡುಗಡೆ ಮಾಡುವಂತೆ ಕೋರಿದ್ದರ ಮೇರೆಗೆ ಸಿಎಸ್ ಆರ್ ಅನುದಾನದಡಿ 2 ಕೋಟಿ ರೂಗಳನ್ನು ಮಂಜೂರು ಮಾಡಿಸಿದ್ದಾರೆ. ಇದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ ಎಂದು ಬಸವರಾಜ ಕೊರವರ್, ಜನಜಾಗೃತಿ ಸಂಘದ ಅಧ್ಯಕ್ಷ, ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಶಾಲೆ ಮುಚ್ಚುವ ಹುನ್ನಾರ ನಡೆದಾಗ ಪೊಲೀಸ್ ಹಕ್ಕುಗಳ ಹೋರಾಟಗಾರ ಬಸವರಾಜ ಕೊರವರ ನೇತೃತ್ವದ ಜನಜಾಗೃತಿ ಸಂಘದ ಸದಸ್ಯರು ಈ ಶಾಲೆಯ ಹಳೆಯ ವಿದ್ಯಾರ್ಥಿಗಳೊಂದಿಗೆ ಬೀದಿಗೆ ಇಳಿದು ಹೋರಾಟ ನಡೆಸಿ, ಜಿಲ್ಲೆಯ ಜನಪ್ರತಿನಿಧಿಗಳಿಗೆ ವಸ್ತುಸ್ಥಿತಿಯ ಮನವರಿಕೆ ಮಾಡಿಕೊಟ್ಟು ಶಾಲೆಯ ಶಿಕ್ಷಕರ ಪರವಾಗಿ ನಿಂತು ಪ್ರತಿಭಟಿಸಿದ್ದರು.
ಇದೀಗ ಎರಡು ಹಂತದಲ್ಲಿ ಹಣ ಬಿಡುಗಡೆ ಮಾಡಲು ಒಡಂಬಡಿಕೆಯಾಗಿದ್ದು, ಮೊದಲ ಹಂತದಲ್ಲಿ 1 ಕೋಟಿ ರೂಗಳನ್ನು ಬಿಡುಗಡೆ ಮಾಡಿಸಿದ್ದಾರೆ. ಎರಡನೇ ಹಂತದಲ್ಲಿ ಇನ್ನುಳಿದ 1 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲು ಒಡಂಬಡಿಕೆಯಲ್ಲಿ ತಿಳಿಸಲಾಗಿದೆ. ಈ ಸಹಾಯದಿಂದ ಮತ್ತೆ ಶಾಲೆಗೆ ಒಂದಷ್ಟು ಶಕ್ತಿ ಬಂದಂತಾಗಿದೆ ಎಂದು ನಾಗರಾಜ ಕಿರಣಗಿ, ಜನಜಾಗೃತಿ ಸಂಘದ ಕಾರ್ಯದರ್ಶಿ, ಮಾಹಿತಿ ನೀಡಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ, ಅಗ್ನಿಶಾಮಕದಳ ಹಾಗೂ ಖಾಯಂ ಗೃಹರಕ್ಷಕ ದಳದ ಸಿಬ್ಬಂದಿ ವರ್ಗದವರ ಮಕ್ಕಳಿಗಾಗಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ತಲಾ 25 ವಿದ್ಯಾರ್ಥಿಗಳಿಗೆ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಪ್ರವೇಶ ನೀಡಲಾಗುತ್ತದೆ.
ಕಳೆದ 24 ವರ್ಷಗಳಿಂದ ಮಕ್ಕಳ ವಸತಿ ಶಾಲೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಎಸ್.ಎಸ್. ಎಲ್.ಸಿ ಯಲ್ಲಿ ಉತ್ತಮ ಫಲಿತಾಂಶ ಹೊಂದಿದೆ. ಈ ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ವಿಷಯ ಹಾಗೂ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಒಟ್ಟಿನಲ್ಲಿ ಇದೀಗ ಈ ಶಾಲೆಗೆ ಕಾಯಕಲ್ಪ ದೊರಕಿದ್ದು ಮಾತ್ರ ಸಂತಸದ ಸಂಗತಿಯೇ ಸರಿ.