ಜಾಮೀನಿನಲ್ಲಿ ಹೊರಗಿರುವವರನ್ನು ಸಿಎಂ ಮಾಡಿದ್ದರಲ್ಲವೇ ಸಿದ್ದರಾಮಯ್ಯ: ಪ್ರಲ್ಹಾದ್ ಜೋಶಿ ಪ್ರಶ್ನೆ

| Updated By: ಗಣಪತಿ ಶರ್ಮ

Updated on: Sep 28, 2024 | 5:02 PM

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಎಫ್​ಐಆರ್ ದಾಖಸಿದ ಬೆನ್ನಲ್ಲೇ ಅವರ ರಾಜೀನಾಮೆಗೂ ಒತ್ತಡ ಹೆಚ್ಚಾಗಿದೆ. ತಮ್ಮನ್ನು ಸಮರ್ಥಿಸಿಕೊಳ್ಳಲು ಅವರು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕೂಡ ಜಾಮೀನಿನ ಮೇಲೆ ಇದ್ದಾರಲ್ಲವೇ ಎನ್ನುತ್ತಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಜಾಮೀನಿನಲ್ಲಿ ಹೊರಗಿರುವವರನ್ನು ಸಿಎಂ ಮಾಡಿದ್ದರಲ್ಲವೇ ಸಿದ್ದರಾಮಯ್ಯ: ಪ್ರಲ್ಹಾದ್ ಜೋಶಿ ಪ್ರಶ್ನೆ
ಪ್ರಲ್ಹಾದ್ ಜೋಶಿ
Follow us on

ಧಾರವಾಡ, ಸೆಪ್ಟೆಂಬರ್ 28: ರಾಜ್ಯ ಸರ್ಕಾರಕ್ಕೆ ನಾವು ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದರು. ಆಪರೇಷನ್ ಕಮಲ ಕುರಿತ ಆರೋಪಗಳಿಗೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಅವರು, ನಾವು ಯಾವ ಶಾಸಕರಿಗೂ 100 ಕೋಟಿ ರೂಪಾಯಿ ಆಫರ್ ಮಾಡಿಲ್ಲ. 65 ಶಾಸಕರನ್ನು ತೆಗೆದುಕೊಂಡರೆ ಮಾತ್ರ ಸರ್ಕಾರ ರಚನೆ ಸಾಧ್ಯ. ಹಾಗಾದರೆ 65 ಶಾಸಕರಿಗೆ 6,500 ಕೋಟಿ ರೂ. ಆಗಲಿದೆ. ಹುಚ್ಚುಚ್ಚಾಗಿ ಮಾತನಾಡಿದರೆ ಹೇಗೆ ಎಂದರು.

ನಾನು ಬಿಜೆಪಿಯ ಕೇಂದ್ರದ ಸಚಿವನಾಗಿ ಬರೆದು ಕೊಡುತ್ತೇನೆ, ಯಾವ ಕಾಲಕ್ಕೂ ನಾವು ಸರ್ಕಾರಕ್ಕೆ ತೊಂದರೆ ಕೊಡಲ್ಲ. ಆದರೆ ಸಿಎಂ ರಾಜೀನಾಮೆ ಕೊಡಲಿ ಎಂದರು.

ಹೆಚ್​ಡಿ ಕುಮಾರಸ್ವಾಮಿ ಬೇಲ್ ಮೇಲೆ ಇರುವ ಬಗ್ಗೆ ಹಲವು ಬಾರಿ‌ ಹೇಳಿದ್ದೇನೆ. ಕುಮಾರಸ್ವಾಮಿ ವಿರುದ್ಧ ಕೇಸ್ ದಾಖಲಾಗಿರುವುದು 2008ರಲ್ಲಿ. 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿರಲಿಲ್ವಾ? ಆಗ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.

2018ರಲ್ಲಿ ಹೆಚ್​ಡಿ ಕುಮಾರಸ್ವಾಮಿ ಅವರ ಕಾಲುಹಿಡಿದು ಅವರನ್ನು ಸಿಎಂ ಮಾಡಿದವರು ಯಾರು? ಆಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ ಎಂದಿದ್ದರು. ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಅದನ್ನು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದರು. 2008ರ ಕೇಸ್​​ನಲ್ಲಿ ರಾಜೀನಾಮೆ ಕೊಡಬೇಕು ಅಂತಾರಲ್ಲವೇ? ಈಗ ಸಿಎಂ ರಾಜೀನಾಮೆ ಕೊಡಲ್ಲ ಅನ್ನೋದು ಯಾವ ಲೆಕ್ಕ? ಹೆಚ್​ಡಿಕೆ, ನಮಗೆ ಅಷ್ಟೇ ಸಿಎಂ ಆಗಲು ಒಲವು ಇದೆಯಾ? ಕಾಂಗ್ರೆಸ್​​ನವರೆಲ್ಲಾ ಸನ್ಯಾಸಿಗಳಾ ಎಂದು ಜೋಶಿ ಪ್ರಶ್ನಿಸಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಿಡಿಯೋ ಬಾಂಬ್!

ನಾವು ಕಾಂಗ್ರೆಸ್ ಸರ್ಕಾರ ಪತನವಾಗಲಿ ಎಂದು ಹೇಳುತ್ತಿಲ್ಲ. ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ ಎಂದು ಜೋಶಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ