ಕರ್ನಾಟಕದಲ್ಲಿ ವ್ಯವಹರಿಸಲು ಕನ್ನಡದಲ್ಲಿ ನಾಮಫಲಕ ಹಾಕಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಖಡಕ್ ನುಡಿ

ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕಬೇಕು ಎಂದು ಕನ್ನಡ ಸಂಘಟನೆಗಳು ಹೋರಾಟಕ್ಕಿಳಿದಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವರು, " ನನಗೆ ಬಂದಿರುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಕೆಲವು ಅಂಗಡಿಯವರು ಉದ್ದೇಶಪೂರ್ವಕವಾಗಿ ಕನ್ನಡ ಬೋರ್ಡ್ ಹಾಕಲು ಬಯಸುವುದಿಲ್ಲ. ಇದನ್ನು ನಾನು ಒಪ್ಪುವುದಿಲ್ಲ ಎಂದರು.

ಕರ್ನಾಟಕದಲ್ಲಿ ವ್ಯವಹರಿಸಲು ಕನ್ನಡದಲ್ಲಿ ನಾಮಫಲಕ ಹಾಕಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಖಡಕ್ ನುಡಿ
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ
Follow us
TV9 Web
| Updated By: ಆಯೇಷಾ ಬಾನು

Updated on:Dec 28, 2023 | 3:50 PM

ಹುಬ್ಬಳ್ಳಿ, ಡಿ.28: ಕರ್ನಾಟಕದಲ್ಲಿ ವ್ಯವಹಾರ ನಡೆಸುವ ಅಂಗಡಿ, ಉದ್ದಿಮೆಗಳ ಮಾಲೀಕರು ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕಬೇಕು ಎಂದು ಕನ್ನಡ ಸಂಘಟನೆಗಳು ಹೋರಾಟಕ್ಕಿಳಿದಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವರು, ” ನನಗೆ ಬಂದಿರುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಕೆಲವು ಅಂಗಡಿಯವರು ಉದ್ದೇಶಪೂರ್ವಕವಾಗಿ ಕನ್ನಡ ಬೋರ್ಡ್ ಹಾಕಲು ಬಯಸುವುದಿಲ್ಲ. ಇದನ್ನು ನಾನು ಒಪ್ಪುವುದಿಲ್ಲ ಎಂದರು.

ಕರ್ನಾಟಕದಲ್ಲಿ ಬಹುಪಾಲು ಜನತೆ ಕನ್ನಡ ಮಾತನಾಡುವವರಿದ್ದಾರೆ. ಹೀಗಿರುವಾಗ, ಆಂಗ್ಲ ಮತ್ತು ಹಿಂದಿಯೊಂದಿಗೆ ಕನ್ನಡವನ್ನು ಸೇರಿಸುವಲ್ಲಿ ಅಂಗಡಿ ಮಾಲೀಕರಿಗೆ ಸಮಸ್ಯೆ ಏನು? ಈ ಬಗ್ಗೆ ಜನರು ಪ್ರಶ್ನಿಸಿದಾಗ ಕೆಲ ಉದ್ದಿಮೆಗಳ ಮಾಲೀಕರು ದುರಹಂಕಾರದಿಂದ ವರ್ತಿಸಿದ್ದಾರೆ. ನಾನು ಹಿಂಸಾಚಾರವನ್ನು ಒಪ್ಪುವುದಿಲ್ಲ, ಆದರೆ ಅವರು ಕನ್ನಡ ನಾಮಫಲಕಗಳನ್ನು ಪ್ರದರ್ಶಿಸಲು ಹಿಂದೇಟು ಹಾಕೋದ್ಯಾಕೆ? 20-30% ಅಂಗಡಿಯವರು ಸಹ ಕನ್ನಡದಲ್ಲಿ ಬೋರ್ಡ್ ಹಾಕುವುದಿಲ್ಲ. ಇದು ತಪ್ಪು. ಇಂಗ್ಲೀಷ್ ನ ಜೊತೆಗೆ ಕನ್ನಡದಲ್ಲಿ ನಾಮಫಲಕ ಹಾಕಿದರೆ ತೊಂದರೆಯೇನು? ಇದು ಬ್ರಿಟನ್ ಅಥವಾ ಇಂಗ್ಲೆಂಡ್ ಅಲ್ಲ. ಎಲ್ಲರಿಗೂ ಇಂಗ್ಲಿಷ್ ಭಾಷೆ ತಿಳಿಯುವುದಿಲ್ಲ, ಸಂಪೂರ್ಣವಾಗಿ ಇಂಗ್ಲಿಷ್ ನಲ್ಲಿ ಮಾತ್ರವೇ ನಾಮಫಲಕ ಹಾಕೋದ್ಯಾಕೆ? ಇದನ್ನ ಅಂಗಡಿಯವರು ಅರ್ಥಮಾಡಿಕೊಳ್ಳಬೇಕು. ಎಲ್ಲಾ ಅಂಗಡಿಗಳ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಇರಲೇಬೇಕು. ಇದನ್ನ ಅಂಗಡಿಗಳ ಮಾಲೀಕರು ಪಾಲಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ವಿಚಾರವಾಗಿ ನಡೆಯುತ್ತಿರುವ ಹಿಂಸೆಯನ್ನು ನಾನು ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಇದನ್ನೂ ಓದಿ: ಧರಣಿ ಮಾಡಿದ್ದಕ್ಕಲ್ಲ, ಕಾನೂನು ಕೈಗೆತ್ತಿಕೊಂಡಿದ್ದಕ್ಕೆ ಕರವೇ ವಿರುದ್ಧ ಕ್ರಮ: ಸಿಎಂ ಸಿದ್ದರಾಮಯ್ಯ

ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದ್ದು ಈ ವೇಳೆ ಕಲ್ಲು ತೂರಾಟ ನಡೆದ ಹಿನ್ನೆಲೆ 29 ಕಾರ್ಯಕರ್ತರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ. ಫಲಕದಲ್ಲಿ ಕಡ್ಡಾಯ ಕನ್ನಡ ಬಳಕೆಗೆ ಆಗ್ರಹಿಸಿ ಕರವೇ ನಡೆಸಿದ ಪ್ರತಿಭಟನೆ ವೇಳೆ ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಒಪ್ಪಿಸಿದ್ದು ಬೆಂಗಳೂರು ಗ್ರಾ. ಜಿಲ್ಲೆಯ ದೇವನಹಳ್ಳಿ JMFC ಕೋರ್ಟ್ ಜಡ್ಜ್ ಕರವೇ ಕಾರ್ಯಕರ್ತರಿಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನ ಹಿನ್ನೆಲೆ ಬಂಧಿತ ಕರವೇ ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್​ ಮಾಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:54 pm, Thu, 28 December 23