
ಧಾರವಾಡ, ಅಕ್ಟೋಬರ್ 10: ಅಕ್ಟೋಬರ್ 5 ರಂದು ಹುಬ್ಬಳ್ಳಿಯ ವಿಶಾಲ ನಗರದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಮೌಲ್ವಿಯೊಬ್ಬರು ಕುರಾನ್ ಪಠಣ ಮಾಡಿದ್ದರು. ಇದು ಸರಕಾರಿ ಕಾರ್ಯಕ್ರಮವಾಗಿರುವುದರಿಂದ ಇಲ್ಲಿ ಕುರಾನ್ ಪಠಣ ಮಾಡುವುದು ಸರಿಯಾ ಎಂಬ ಪ್ರಶ್ನೆಯನ್ನು ಬಿಜೆಪಿ ಎತ್ತಿತ್ತು. ಆದರೆ ಅದು ಸರಕಾರಿ ಕಾರ್ಯಕ್ರಮ ಅಲ್ಲ ಎಂದು ಕಾಂಗ್ರೆಸ್ ಮುಖಂಡರು ಪದೇ ಪದೇ ಸ್ಪಷ್ಟನೆ ನೀಡಿದ್ದರು. ಆದರೆ ಬಿಜೆಪಿ ಮಾತ್ರ ತನ್ನ ವಾದದಿಂದ ಹಿಂದೆ ಸರಿದಿರಲಿಲ್ಲ. ಅದರ ಮುಂದುವರೆದ ಭಾಗ ಇದೀಗ ಶುರುವಾಗಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣದ ವಿರುದ್ಧ ಸಿಡಿದೆದ್ದಿರೋ ಬಿಜೆಪಿ ನಾಯಕರು ಧಾರವಾಡದ (Dharawad) ಡಿಸಿ ಕಚೇರಿ ಎದುರು ವಿಭಿನ್ನವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಸರಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಿಸಿದ್ದರಿಂದ ನಾವು ಕೂಡ ಡಿಸಿ ಕಚೇರಿ ಎದುರಲ್ಲಿಯೇ ಹೋಮ ಮಾಡಿ, ಎಲ್ಲವನ್ನು ಶುದ್ಧಗೊಳಿಸುವುದಾಗಿ ಹೇಳಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಹೋಮ ಮಾಡಲು ಬಿಜೆಪಿ ನಿರ್ಧರಿಸಿದ್ದು, ಕಾರ್ಯಕ್ರಮದ ನೇತೃತ್ವವನ್ನು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ವಹಿಸಿದ್ದಾರೆ.
ಕುರಾನ್ ಪಠಣ ವಿಚಾರವಾಗಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ಹೇಳಿರುವ ಬೆಲ್ಲದ್, ಹೆಸ್ಕಾಂ ಕಾಮಗಾರಿ ನಿರ್ಮಾಣ ಗುದ್ದಲಿ ಪೂಜೆ ಕಾರ್ಯಕ್ರಮ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಕುರಾನ್ ಪಠಣ
ಮಾಡಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ವಾರ್ಡ್ ನಂಬರ್ 34 ರ ಪಾಲಿಕೆ ಸದಸ್ಯೆ ಮಂಗಳಾ ಗೌರಿ ಹಾಗೂ ಪುತ್ರ ನಾಗರಾಜ್ ಗೌರಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಇದಾಗಿದ್ದು, ಇದು ಸರ್ಕಾರಿ ಕಾರ್ಯಕ್ರಮ ಆಗಿರಲಿಲ್ಲ ಎಂದು ವಾದಿಸುತ್ತಿದ್ದಾರೆ. ಆರೋಪವನ್ನು ಅಲ್ಲಗಳೆಯುತ್ತಿರುವ ಕಾಂಗ್ರೆಸ್ ಮುಖಂಡರು, ಕುರಾನ್ ಪಠಣ ಮಾಡಿದ್ದು ಅಭಿನಂದನಾ ಸಮಾರಂಭದಲ್ಲಿ ಎಂದು ವಾದಿಸುತ್ತಿದ್ದಾರೆ. ಅದು ನಾವು ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮ. ಸರ್ಕಾರಿ ಕಾರ್ಯಕ್ರಮ ಕೇವಲ ಗುದ್ದಲಿ ಪೂಜೆಗೆ ಮಾತ್ರ ಸೀಮಿತವಾಗಿತ್ತು ಎಂಬುದು ಅವರ ವಾದವಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಗುತ್ತಿಗೆದಾರನ ಕಿಡ್ನ್ಯಾಪ್: ಸಿಸಿ ಕ್ಯಾಮರಾದಲ್ಲಿ ಘಟನೆ ಸೆರೆ
ಒಟ್ಟಿನಲ್ಲಿ ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಇಂದು ನಡೆಯಲಿರುವ ಹೋರಾಟದಲ್ಲಿ ಏನೆಲ್ಲಾ ಆಗುತ್ತದೆ ಎಂಬ ಪ್ರಶ್ನೆ ಮೂಡಿಸಿದೆ. ಈ ಪ್ರಕರಣ ಮುಂದೇನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.