ರಂಜಾನ್ ಮಾಸದಲ್ಲಿ ಇಂತಹ ಘಟನೆ ಬೇಸರ ತಂದಿದೆ; ಆರೋಪಿಗಳ ವಿರುದ್ಧ ಕಠಿಣಕ್ರಮಕ್ಕೆ ಆಗ್ರಹಿಸುತ್ತೇನೆ: ಮೌಲ್ವಿ ಸುಬಾನಿ
ಪೊಲೀಸರು ಬಹಳ ತಾಳ್ಮೆ ಇಂದ ಕೆಲಸ ಮಾಡಿದ್ದಾರೆ. ಅವರಿಗೆ ಅಂಜುಮನ್ ಸಮೀತಿ ಇಂದ ಧನ್ಯವಾದ ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಂಜುಮನ್ ಸಮೀತಿಯ ಮಹಮ್ಮದ್ ಯೂಸುಫ್ ಸವಣೂರ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿ: ಹಿಂಸಾಚಾರಕ್ಕೆ ಇಸ್ಲಾಂ ಯಾವತ್ತೂ ಕುಮ್ಮಕ್ಕು ನೀಡಲ್ಲ. ಕಲ್ಲು ತೂರಾಟ ನಡೆಸಿದ್ದನ್ನ ನಾನು ಬಲವಾಗಿ ಖಂಡಿಸುತ್ತೇನೆ. ಆರೋಪಿಗಳ ವಿರುದ್ಧ ಕಠಿಣಕ್ರಮಕ್ಕೆ ನಾನು ಆಗ್ರಹಿಸುತ್ತೇನೆ. ರಂಜಾನ್ ಮಾಸದಲ್ಲಿ ಇಂತಹ ಘಟನೆ ಬೇಸರ ತಂದಿದೆ. ಗಲಾಟೆ ಮಾಡಿದ ಎಲ್ಲರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿಯಲ್ಲಿ ಟಿವಿ9ಗೆ ಮೌಲ್ವಿ ಸುಬಾನಿ ಹೇಳಿಕೆ ನೀಡಿದ್ದಾರೆ. ಪೊಲೀಸರ ಮೇಲೆ ಕಲ್ಲೆಸೆದಿರೋದು ತನಿಖೆ ಆಗಬೇಕು. ಇದರ ಹಿಂದೆ ಯಾರ ಇದ್ದಾರೆ ಅನ್ನೋದರ ತನಿಖೆ ಆಗಬೇಕು. ನಿನ್ನೆ ಏಕಾಏಕಿ ಲೈಟ್ ಹೋಯ್ತು. ಲೈಟ್ ತಗೆದವರು ಯಾರು? ಎಲ್ಲಾ ಧರ್ಮಗಳಿಗೆ ನಾನು ಮನವಿ ಮಾಡ್ತೀನಿ ಎಲ್ಲರೂ ಕೂಡಿ ಬಾಳೋಣ. ಕಲ್ಲು ಎಲ್ಲಿಂದ ಬಂದಿವೆ ಅನ್ನೋದು ಗೊತ್ತಿಲ್ಲ. ಯಾರಾದ್ರೂ ಕಲ್ಲು ಕೊಟ್ರಾ ಅನ್ನೋ ಸಂಶಯ ಬರುತ್ತೆ. ಯಾವುದೇ ಧರ್ಮದವದಿರಲಿ ಶಿಕ್ಷೆ ಆಗಬೇಕು. ಗಲಭೆಗೆ ಧರ್ಮ ಇಲ್ಲ. ರಂಜಾನ್ ತಿಂಗಳು ನಾವೆಲ್ಲ ಉಪವಾಸ ಇದ್ದೇವೆ. ಯಾರು ತಪ್ಪು ಮಾಡಿದಾರೋ ಪೊಲೀಸರು ಹುಡುಕಬೇಕು. ಪೊಲೀಸರು ಬಹಳ ತಾಳ್ಮೆ ಇಂದ ಕೆಲಸ ಮಾಡಿದ್ದಾರೆ. ಅವರಿಗೆ ಅಂಜುಮನ್ ಸಮೀತಿ ಇಂದ ಧನ್ಯವಾದ ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಂಜುಮನ್ ಸಮೀತಿಯ ಮಹಮ್ಮದ್ ಯೂಸುಫ್ ಸವಣೂರ ಹೇಳಿಕೆ ನೀಡಿದ್ದಾರೆ.
ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣ ಬಗ್ಗೆ ಹಾಸನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿನ ಗಲಾಟೆ ವಿಚಾರ ನನಗೆ ಈಗ ಗೊತ್ತಾಯ್ತು. ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ನಿರಪರಾಧಿಗಳನ್ನ ಯಾರೂ ಕೂಡ ಬಂಧಿಸಬಾರದು. ನನಗೆ ಈ ಗಲಾಟೆ ಕುರಿತು ಯಾವುದೇ ಮಾಹಿತಿ ಇಲ್ಲ. SP ಜೊತೆಗೆ ಮಾಹಿತಿ ಪಡೆದು ಮತ್ತೆ ಮಾತಾಡುತ್ತೇನೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಗಲಭೆಗಳಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ತಪ್ಪು ಮುಚ್ಚಿಕೊಳ್ಳಲು ಭಾವನಾತ್ಮಕ ವಿಚಾರ ಮುಂದಿಡುತ್ತಿದೆ. ಯಾರೇ ತಪ್ಪು ಮಾಡಿದ್ರೂ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬರೂ ಸಾಮರಸ್ಯ ಕಾಪಾಡಬೇಕು. ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಇದಕ್ಕೆ ಬಿಜೆಪಿಯವರೇ ಕಾರಣ. ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಇತ್ತ ಕಲಬುರಗಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಹೇಳಿದ್ದಾರೆ.
ಈ ರೀತಿ ಘಟನೆಗಳು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬೇಕು. ನಿಮ್ಮ ಕೈಯಲ್ಲಿ ಪೆಟ್ರೋಲ್ ಕೊಟ್ಟು ಬೆಂಕಿ ಹಾಕಿಸುವುದು. ಪೆಟ್ರೋಲ್ ಕೊಟ್ಟು ಬೆಂಕಿ ಹಾಕಿಸುವುದು ಕಾಂಗ್ರೆಸ್ ಕೆಲಸ. ಮುಸ್ಲಿಂ ಬಾಂಧವರು ಪ್ರಚೋದನೆಗೆ ಒಳಗಾಗುವುದು ಬೇಡ. ಕೆಲ ಕಿಡಿಗೇಡಿಗಳು ನಿಮ್ಮನ್ನ ಬಳಸಿಕೊಳ್ಳುವ ಕೆಲಸ ಮಾಡ್ತಾರೆ. ಮುಸ್ಲಿಂ ಬಾಂಧವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಶಾಂತಿಯುತ ಹೋರಾಟ ಮಾಡಬೇಕು ಎಂದು ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ತಾಕತ್ತಿದ್ದರೆ ಆರ್ಎಸ್ಎಸ್, ಬಜರಂಗದಳ, PFI, ಕೆಎಫ್‌ಡಿ ಎಲ್ಲವನ್ನೂ ಬ್ಯಾನ್ ಮಾಡಿ: ಎಂ. ಲಕ್ಷ್ಮಣ್
ತಾಕತ್ತಿದ್ದರೆ ಆರ್ಎಸ್ಎಸ್ ಬ್ಯಾನ್ ಮಾಡಿ. ಬಜರಂಗದಳ, PFI, ಕೆಎಫ್‌ಡಿ ಎಲ್ಲವನ್ನೂ ಬ್ಯಾನ್ ಮಾಡಿ ಎಂದು ಮೈಸೂರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಆಗ್ರಹ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುತ್ತೇವೆ. ನಿಮ್ಮ ಅಪ್ಪನ ಮನೆ ಆಸ್ತಿನಾ ಅದು ಎಂದು ಲಕ್ಷ್ಮಣ್ ಪ್ರಶ್ನೆ ಮಾಡಿದ್ದಾರೆ. BJP ರಾಜ್ಯಾಧ್ಯಕ್ಷ ಕಟೀಲು ಹೇಳಿಕೆಗೆ ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ.
ಇದು 40% ಕಮಿಷನ್ ವಿಚಾರ ಮರೆಸಲು ಮಾಡಿರುವ ಕೃತ್ಯ. ತಪ್ಪು ಯಾರೇ ಮಾಡಿದ್ರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಬಿಜೆಪಿಯವರೇ ಇಂತಹದ್ದೊಂದು ಕೃತ್ಯವನ್ನು ಮಾಡಿಸಿದ್ದಾರೆ. ಅವರಿಗೆ ವಿಷಯಗಳನ್ನ ಬೇರೆಡೆಗೆ ಡೈವರ್ಟ್ ಮಾಡಬೇಕು. ಸಿಸಿಕ್ಯಾಮರಾ ದೃಶ್ಯಗಳನ್ನು ಇವರೇ ಮಾಡಿಸಿರುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಗೃಹ ಇಲಾಖೆ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್, ಯುಪಿ ಮಾದರಿಯ ಕಾನೂನು ಜಾರಿಗೊಳಿಸ್ತೇವೆ: ನಳಿನ್ ಕುಮಾರ್ ಕಟೀಲ್
ಸೋಷಿಯಲ್ ಮೀಡಿಯಾ ಕಾರಣ ಇಟ್ಟುಕೊಂಡು ಗಲಭೆ ಮಾಡಲಾಗುತ್ತಿದೆ. ಮತಾಂತರ ಶಕ್ತಿಗಳು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಸಣ್ಣ ಸಣ್ಣ ವಿಷಯಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಗಲಭೆ ಹಿಂದಿರುವ ಶಕ್ತಿಗಳ ಕುರಿತು ತನಿಖೆ ಮಾಡುತ್ತೇವೆ. ಗುಜರಾತ್, UP ಮಾದರಿಯ ಕಾನೂನು ಜಾರಿಗೊಳಿಸ್ತೇವೆ. ಡೋಂಗಿ ಜಾತ್ಯತೀತವಾದಿಗಳು ಯಾಕೆ ಈಗ ಮೌನವಾಗಿದ್ದಾರೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಿಡಿಕಾರಿದ್ದಾರೆ. ಘಟನೆಯ ಬಗ್ಗೆ ಜಗದೀಶ್ ಶೆಟ್ಟರ್ ಹಾಗೂ ಅಶ್ವತ್ಥ್ ನಾರಾಯಣ ಕೂಡ ವಿರೋಧ ವ್ಯಕ್ತಪಡಿಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾನೂನು ಕೈಗೆ ತೆಗೆದುಕೊಳ್ಳುವ ಸಾಹಸ ಮಾಡಬೇಡಿ: ಗಲಭೆಕೋರರಿಗೆ ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ
ಇದನ್ನೂ ಓದಿ: ‘ನಾನು ಗೃಹ ಸಚಿವನಾದರೆ ಇವರನ್ನೆಲ್ಲಾ ಉಡಾಯಿಸಿಬಿಡುತ್ತೇನೆ; ಸಿಎಂ ಬೊಮ್ಮಾಯಿ ಗೃಹಸಚಿವರಿಗೆ ಕಠಿಣವಾಗಿ ನಿರ್ದೇಶಿಸಬೇಕು’
Published On - 1:08 pm, Sun, 17 April 22