ಧಾರವಾಡ: ಕ್ರಿಕೆಟ್ ಆಡುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಮತ್ತೋರ್ವನಿಗೆ ಗಂಭೀರ ಗಾಯ
ಧಾರವಾಡ ನಗರದ ಸಿದ್ದರಾಮ ಕಾಲೋನಿಯಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಸ್ನೇಹಿತನ ಜೊತೆ ಕ್ರಿಕೆಟ್ ಆಡುತ್ತಿದ್ದ 10 ವರ್ಷದ ಬಾಲಕ ಬಾಲ್ ಕ್ಯಾಚ್ ಹಿಡಿಯುವಾಗ ವಿದ್ಯುತ್ ಸ್ಪರ್ಶಿಸಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸ್ನೇಹಿತನನ್ನು ಉಳಿಸಲು ಯತ್ನಿಸಿದ ಮತ್ತೋರ್ವ ಬಾಲಕನಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.
ಧಾರವಾಡ, ನ.25: ಕ್ರಿಕೆಟ್ ಆಡುವಾಗ ವಿದ್ಯುತ್ ತಂತಿ (Electric shock) ತಗುಲಿ ಬಾಲಕ ಮೃತಪಟ್ಟ (Death) ಘಟನೆ ಧಾರವಾಡ ನಗರದ ಸಿದ್ದರಾಮ ಕಾಲೋನಿಯಲ್ಲಿ ನಡೆದಿದೆ. ವಿದ್ಯುತ್ ತಂತಿ ತಗುಲಿ 16 ವರ್ಷದ ಶ್ರೇಯಸ್ ಶಿನ್ನೂರ ಮೃತಪಟ್ಟಿದ್ದಾನೆ. ಮನೆ ಮಹಡಿ ಮೇಲೆ ಗೆಳೆಯರೊಂದಿಗೆ ಸಂಜೆ ಕ್ರಿಕೆಟ್ (Cricket) ಆಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕ್ಯಾಚ್ ಹಿಡಿಯಲು ಹೋಗಿದ್ದಾಗ ವಿದ್ಯುತ್ ತಂತಿ ತಗುಲಿ ಶ್ರೇಯಸ್ ಅಸ್ವಸ್ಥಗೊಂಡಿದ್ದ. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಶ್ರೇಯಸ್ ಜೊತೆಗಿದ್ದ ಗೆಳೆಯನಿಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಂಗಳೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ-ಮಗು ಮೃತಪಟ್ಟ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಭೀಕರ ಘಟನೆ ನಡೆದಿದೆ. ನಿನ್ನೆ ಸಂಜೆ ಶ್ರೇಯಸ್ ಹಾಗೂ ಆತನ ಸ್ನೇಹಿತರು ಮನೆ ಮಹಡಿ ಮೇಲೆ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬಾಲ್ ಕ್ಯಾಚ್ ಹಿಡಿಯಲು ಹೋಗಿ ಶ್ರೇಯಸ್ಗೆ ವಿದ್ಯುತ್ ತಂತಿ ತಗುಲಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ. ಜೊತೆಗೆ ಶ್ರೇಯಸ್ ಜೊತೆಗಿದ್ದ ಬಾಲಕನಿಗೂ ಗಾಯಗಳಾಗಿವೆ.
ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿವೆ ಡೆಂಜರಸ್ ವಿದ್ಯುತ್ ವೈಯರ್: ಹೆಸ್ಕಾಂ ಇಲಾಖೆ ವಿರುದ್ಧ ಜನರು ಆಕ್ರೋಶ
ಇನ್ನು ಘಟನೆ ಸಂಬಂಧ ಮಾತನಾಡಿದ ಮೃತ ಶ್ರೇಯಸ್ ತಂದೆ ಅಶೋಕ ಶಿನ್ನೂರ, ಸಂಜೆ 5ಕ್ಕೆ ಆತ ಶಾಲೆಯಿಂದ ಬಂದಿದ್ದ ಸ್ವಲ್ಪ ಹೊತ್ತು ಮನೆಯಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದ. ಆಗ ಆಟ ಆಡಲು ಗೆಳೆಯ ಕರೆದಾಗ ಬಾಲ್ ತೆಗೆದುಕೊಂಡು ಹೊರಗೆ ಹೋಗಿದ್ದ. ನಿತ್ಯವೂ ಸಂಜೆ ಅವರು ಆಟ ಆಡುತ್ತಿದ್ದರು. ಆತ ಆಡಲು ಹೋದ ಹತ್ತೇ ನಿಮಿಷದಲ್ಲಿ ಆತ ಬಿದ್ದಿದ್ದಾನೆಂದು ಜನ ಕರೆದರು. ಓಡಿ ಹೋಗಿ ನೋಡಿದಾಗ ವಿದ್ಯುತ್ ತಗುಲಿತ್ತು. ಮನೆ ಬಳಿ ಕಟ್ಟಡ ಕಾಮಗಾರಿ ನಡೆದಿದೆ. ಅಲ್ಲಿ ಆಟ ಆಡುತ್ತಿದ್ದರು. ಗೆಳೆಯ ಎಸೆದ ಬಾಲು ಹಿಡಿಯಲು ಹೋದಾಗ ವಿದ್ಯುತ್ ತಗುಲಿದೆ. ಕೈಯಿಂದ ಹೊಟ್ಟೆಯವರೆಗೆ ವಿದ್ಯುತ್ ಹೊಡೆದಿತ್ತು. ತಕ್ಷಣ ಆಸ್ಪತ್ರೆಗೆ ತಂದೆವು. ನಾನು ವೈದ್ಯರ ಕಾಲಿಗೂ ಬಿದ್ದೆ. ಆದರೆ ಮಗ ಉಳಿಯಲಿಲ್ಲ.
ಆತ ನಗರದ ರಾಜೀವ ಗಾಂಧಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ. ಆತನನ್ನು ಉಳಿಸಲು ಇನ್ನೋರ್ವ ಬಾಲಕ ಪ್ರಯತ್ನ ಪಟ್ಟಿದ್ದಾನೆ. ಆತನಿಗೂ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನನಗೆ ಇದ್ದ ಒಬ್ಬನೇ ಒಬ್ಬ ಮಗನನ್ನ ನಾನು ಕಳೆದುಕೊಂಡಿದ್ದೇನೆ ಎಂದು ಅಶೋಕ ಶಿನ್ನೂರ ಅವರು ಕಣ್ಣೀರು ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ