Tipu Jayanti: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಟಿಪ್ಪು ಜಯಂತಿ ಆಚರಣೆ
ಇದೇ ಮೊದಲ ಬಾರಿಗೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ AIMIM ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಟಿಪ್ಪು ಜಯಂತಿ ಆಚರಿಸಲಾಗಿದೆ. ಕಾರ್ಯಕ್ರಮದಲ್ಲಿ ಅಂಜುಮನ್ ಕಮೀಟಿ ಸದಸ್ಯರು, ಮುಸ್ಲಿಂ ಭಾಂದವರು ಭಾಗಿಯಾಗಿದ್ದು ಟಿಪ್ಪು ಸುಲ್ತಾನ್ ಪರ ಜೈಘೋಷ ಕೂಗಿ ಸಂಭ್ರಮಿಸಿದರು.
ಹುಬ್ಬಳ್ಳಿ: ಟಿಪ್ಪು ಜಯಂತಿ ಆಚರಣೆಗೆ ಹು-ಧಾ ಮಹಾನಗರ ಪಾಲಿಕೆ ಅನುಮತಿ ಕೊಟ್ಟಿದ್ದು ಇದೇ ಮೊದಲ ಬಾರಿಗೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಯಶಸ್ವಿಯಾಗಿ ಟಿಪ್ಪು ಜಯಂತಿ ಮಾಡಲಾಗಿದೆ. AIMIM ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಟಿಪ್ಪು ಜಯಂತಿ ಆಚರಿಸಲಾಗಿದೆ. AIMIM ಕಾರ್ಯಕರ್ತರು ಟಿಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಟಿಪ್ಪು ಸುಲ್ತಾನ್ ಪರ ಘೋಷಣೆ ಕೂಗಿ ಟಿಪ್ಪು ಜಯಂತಿ ಆಚರಿಸಿದರು. ಪೊಲೀಸ್ ಸರ್ಪಗಾವಲಿನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಯಶಸ್ವಿಯಾಗಿ ನೆರವೇರಿದೆ.
ಹು-ಧಾ ಮಹಾನಗರ ಪಾಲಿಕೆ ಹಲವು ಷರತ್ತುಗಳ ವಿಧಿಸಿ ಆಚರಣೆಗೆ ಅನುಮತಿ ನೀಡಿತ್ತು. 10 ಸಾವಿರ ರೂ. ಪಾವತಿಸಬೇಕು, ಟಿಪ್ಪು ಸುಲ್ತಾನ್ ಫೋಟೋ ಬಿಟ್ಟು ಬೇರೆ ಫೋಟೋ ಹಾಕದಂತೆ ಷರತ್ತು ನೀಡಿತ್ತು. ಅದರಂತೆಯೇ AIMIM ಸಂಚಾಲಕ ವಿಜಯ್ ಗುಂಟ್ರಾಳ್ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ನೆರವೇರಿದೆ. ಕಾರ್ಯಕ್ರಮದಲ್ಲಿ ಅಂಜುಮನ್ ಕಮೀಟಿ ಸದಸ್ಯರು, ಮುಸ್ಲಿಂ ಭಾಂದವರು ಭಾಗಿಯಾಗಿದ್ದು ಟಿಪ್ಪು ಸುಲ್ತಾನ್ ಪರ ಜೈಘೋಷ ಕೂಗಿ ಸಂಭ್ರಮಿಸಿದರು. ವಿಜಯ್ ಗುಂಟ್ರಾಳ್ ಬೆಂಬಲಿಗರು ಸೇರಿ ಕೇವಲ ಬೆರಳಣಿಕೆಯಷ್ಟು ಕಾರ್ಯಕರ್ತರು ಮಾತ್ರ ಭಾಗಿಯಾಗಿದ್ದರು. ಫಾತಿಯಾ ಖಾನಿ ಪಠಣೆ ಮಾಡಿ, ಹೂ ಹಾಕಿ ಟಿಪ್ಪು ಜಯಂತಿ ಆಚರಿಸಲಾಯಿತು. ಈದ್ಗಾ ಮೈದಾನದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮೈದಾನದ ಹೊರಗೆ ಮತ್ತು ಒಳಗೆ ಪೊಲೀಸ್ ಭದ್ರತೆ ನೀಡಲಾಗಿತ್ತು.
ಪ್ರಮೋದ್ ಮುತಾಲಿಕ್ ಪೊಲೀಸರ ವಶಕ್ಕೆ
ಮತ್ತೊಂದೆಡೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ನೀಡಿರುವುದನ್ನು ವಿರೋಧಿಸಿ ಶ್ರೀರಾಮಸೇನೆ ಪ್ರತಿಭಟನೆ ನಡೆಸಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನಮ್ಮ ವೃತ್ತದ ಬಳಿ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಪೊಲೀಸರು ಕೆಲ ಕಾರ್ಯಕರ್ತರನ್ನೂ ವಶಕ್ಕೆ ಪಡೆದರು.
ಈ ವೇಳೆ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ವಾಗ್ದಾಳಿ ನಡೆಸಿದರು. ಪಾಲಿಕೆ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಕೊಟ್ಟಿದ್ದು ತಪ್ಪು. ರಾಜ್ಯದಲ್ಲಿ ಬಿಜೆಪಿಯವರೇ ಟಿಪ್ಪು ಜಯಂತಿ ರದ್ದು ಮಾಡಿದ್ದರು. ಈಗ ಅವರೇ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿಯವರು ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಬೇರೆ ಮಹಾಪುರುಷರ ಜೊತೆ ಟಿಪ್ಪು ಹೋಲಿಕೆ ಸರಿಯಲ್ಲ. ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ. ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್ಗೆ PIL ಸಲ್ಲಿಸುತ್ತೇನೆ. ಕನಕ ಜಯಂತಿ ಆಚರಣೆ ಮಾಡಲು ಮನವಿ ಮಾಡುತ್ತೇವೆ ಎಂದರು.
Published On - 11:52 am, Thu, 10 November 22