ಧಾರವಾಡ: ಆರ್ಎಸ್ಎಸ್ನವರೇ ಹೆಚ್ಚಾಗಿ ವಿವಿ ಸಿಂಡಿಕೇಟ್ಗಳಲ್ಲಿ ಸದಸ್ಯರಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ, ವಿವಿ ಸಿಂಡಿಕೇಟ್ ಸದಸ್ಯರು ತಿರುಗೇಟು ನೀಡಿದ್ದಾರೆ. ಧಾರವಾಡದ ಕರ್ನಾಟಕ ವಿವಿಯ ಸಿಂಡಿಕೇಟ್ ಸದಸ್ಯರಲ್ಲಿ ಆರ್ಎಸ್ಎಸ್ನವರು ಇದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಹೇಳಿರುವುದು ನಿಜ. ನಾವು ಆರ್ಎಸ್ಎಸ್ (RSS) ಕಾರ್ಯಕರ್ತರೆಂದು ಹೆಮ್ಮೆಯಿಂದ ಹೇಳುತ್ತೇವೆ ಎಂದು ತಿಳಿಸಿದ್ದಾರೆ.
ವಿವಿಯಲ್ಲಿ 6 ಸಿಂಡಿಕೇಟ್ ಸದಸ್ಯರು ಆರ್ಎಸ್ಎಸ್ ಹಿನ್ನೆಲೆಯವರು. ಸಿಂಡಿಕೇಟ್ ಸದಸ್ಯರು ಹಣ ಪಡೆದ ಬಗ್ಗೆ ಸಾಬೀತುಪಡಿಸಲಿ. ಇಲ್ಲವಾದಲ್ಲಿ ಮಾನಹಾನಿ ಪ್ರಕರಣ ದಾಖಲಿಸುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿಗೆ ಧಾರವಾಡ ವಿವಿ ಸಿಂಡಿಕೇಟ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಹಣ ತೆಗೆದುಕೊಂಡವರ ಹೆಸರು ಹೇಳಬೇಕು. ಏಳು ದಿನಗಳಲ್ಲಿ ಹಣ ತೆಗೆದುಕೊಂಡಿದ್ದನ್ನು ಸಾಬೀತು ಮಾಡಬೇಕು. ಆಗದಿದ್ದಲ್ಲಿ ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದರೆ ಮಾನಹಾನಿ ಕೇಸ್ ಹಾಕುತ್ತೇವೆ. ಪ್ರಚಾರಕ್ಕಾಗಿ ಆರ್ಎಸ್ಎಸ್ ಬಗ್ಗೆ ಹೇಳುತ್ತಿದ್ದಾರೆ. ಸಂಘ ಪರಿವಾರಕ್ಕೆ ಬೈದರೆ ವೋಟ್ ಬರುತ್ತವೆ ಎಂದು ಹೀಗೆ ಹೇಳುತ್ತಿದ್ದಾರೆ ಎಂದು ಸಿಂಡಿಕೇಟ್ ಸದಸ್ಯ ಸುಂಧೀಂದ್ರ ದೇಶಪಾಂಡೆ ತಿಳಿಸಿದ್ದಾರೆ.
ಆರ್ಎಸ್ಎಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
ಆರ್ಎಸ್ಎಸ್ ವಿರುದ್ಧ ಇತ್ತೀಚೆಗೆ ಗಂಭೀರ ಆರೋಪಗಳನ್ನು ಮಾಡುತ್ತಾ ಬಂದಿರುವ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ ಅವರು ನಿನ್ನೆ(ಅಕ್ಟೋಬರ್ 16) ಹೊಸ ಬಾಂಬ್ ಸಿಡಿಸಿದ್ದಾರೆ. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಆರ್ಎಸ್ಎಸ್ನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿರುವ ಹೆಚ್. ಡಿ.ಕುಮಾರಸ್ವಾಮಿ ಮತ್ತೆ ಆರ್ಎಸ್ಎಸ್ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಇವತ್ತು ಈ ಸರ್ಕಾರದಲ್ಲಿ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಆರ್ಎಸ್ಎಸ್ನ ಕಾರ್ಯಕರ್ತರನ್ನು ಸಿಂಡಿಕೇಟ್ ಮೆಂಬರ್ ಮಾಡಿಕೊಂಡಿದ್ದಾರೆ. ಕೆಲಸ ಆಗಲು ಒಂದು ಎರಡು ಲಕ್ಷ ರೂಪಾಯಿ ಡಿಮ್ಯಾಂಡ್ ಇಟ್ಟಿದ್ದಾರೆ. 40 ವರ್ಷದ ಹಿಂದಿನ ಆರ್ಎಸ್ಎಸ್ ಬೇರೆ, ಈಗಿನ ಆರ್ಎಸ್ಎಸ್ ಬೇರೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಇದನ್ನೂ ಓದಿ:
‘ಆರ್ಎಸ್ಎಸ್ ಒಂದು ಕೋಮುವಾದಿ ಸಂಘಟನೆ’- ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
Published On - 1:20 pm, Sun, 17 October 21