Tv9 Impact: ಕಳಪೆ ಸಿಸಿ ರಸ್ತೆ ನಿರ್ಮಾಣ: ಕಾಮಗಾರಿ ಗುತ್ತಿಗೆದಾರನಿಗೆ ಬಿಲ್ ನೀಡದಂತೆ ಜಿಲ್ಲಾಧಿಕಾರಿ ಸೂಚನೆ
ನಗರದಲ್ಲಿ ಈಗಾಗಲೇ ಸರ್ಕಾರದಿಂದ ವಿವಿಧ ಯೋಜನೆಗಳಡಿ ರಸ್ತೆ, ಚರಂಡಿ, ಒಳಚರಂಡಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅವುಗಳನ್ನು ಗುಣಮಟ್ಟದಲ್ಲಿ ನಿರ್ವಹಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತ, ಅಭಿಯಂತರ ಮತ್ತು ಮೂರನೇ ವ್ಯಕ್ತಿ ತಪಾಸಣೆ ತಂಡದವರಿಗೆ ಡಿಸಿ ಸೂಚನೆ ನೀಡಿದರು.
ವಿಜಯಪುರ: ನಗರದ ವಿಶ್ವೇಶ್ವರಯ್ಯಾ ವೃತ್ತದಿಂದ ಆರ್ಟಿಓ ಕಚೇರಿವರೆಗೆ ನೂತನ ಸಿಸಿ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. 14 ನೇ ಹಣಕಾಸು ಯೋಜನೆಯಿಂದ 3.52 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಮಾಡಲಾಗಿದೆ. ಮಹಾನಗರ ಪಾಲಿಕೆಯ ಎದುರಿನ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದಿಂದ ಆರ್ಟಿಓ ಕಚೇರಿವರೆಗೆ ಸುಮಾರು 2 ಕಿಲೋಮೀಟರ್ಗೂ ಕಡಿಮೆ ಅಂತರದ ಸಿಸಿ ರಸ್ತೆಯ ಕಾಮಗಾರಿ ಕಳಪೆಯಾಗಿದೆ ಎಂಬುದರ ಕುರಿತು ಟಿವಿ9 ನಲ್ಲಿ ಕಳೆದ ಜನವರಿಯಂದು ಸುದ್ದಿ ಮಾಡಲಾಗಿತ್ತು. ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಕಳಪೆ ವಸ್ತುಗಳನ್ನು, ಕಡಿಮೆ ಪ್ರಮಾಣದ ಸಿಮೆಂಟ್ ಬಳಕೆ ಮಾಡಲಾಗಿದೆ ಎಂದು ವರದಿ ಮಾಡಲಾಗಿತ್ತು. ಈ ವರದಿಯ ಫಲವಾಗಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸೂಕ್ತವಾಗಿ ಪರಿಶೀಲನೆ ಮಾಡಿ, ನಿಯಮದಡಿ ಸಿಸಿ ರಸ್ತೆ ನಿರ್ಮಾಣವಾಗಿದ್ದರೆ ಮಾತ್ರ ಕಾಮಗಾರಿ ಗುತ್ತಿಗೆ ಹಿಡಿದವರಿಗೆ ಕಾಮಗಾರಿಯ ಹಣದ ಬಿಲ್ ಪಾವತಿ ಮಾಡಲಾಗುತ್ತದೆ. ಇಲ್ಲವಾದರೆ ಬಿಲ್ ತಡೆ ಹಿಡಿಯಲಾಗುತ್ತದೆ ಎಂದು ಹೇಳಿದ್ದರು.
ಸಿಸಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ್ದ ಡಿಸಿ ಟಿವಿ9 ನಲ್ಲಿ ಬಂದ ವರದಿಯನ್ನು ಗಂಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ವರದಿ ಬಂದ ಮಾರನೇ ದಿನವೇ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದಿಂದ ಆರ್ಟಿಓ ಕಚೇರಿವರೆಗೆ ನಿರ್ಮಾಣ ಮಾಡಿದ ಸಿಸಿ ರಸ್ತೆಯ ಕುರಿತು ಸಮಗ್ರ ಮಾಹಿತಿಯನ್ನು ಕಲೆ ಹಾಕಿದ್ದರು. ಸರ್ ಎಂ.ವಿಶ್ವೇಶ್ವರಯ್ಯ ವೃತ್ತದಿಂದ ಆರ್ಟಿಓ ಕಚೇರಿವರೆಗೂ ಆಧಿಕಾರಿಗಳನ್ನು ಕರೆದುಕೊಂಡು ಖುದ್ದಾಗಿ ಪರಿಶೀಲಿಸಿದ್ದಾರೆ. ಸಿಸಿ ರಸ್ತೆಯ ಕೆಲವು ಕಡೆ ರಸ್ತೆಯ ಮೇಲ್ಭಾಗ ಅಂದರೆ ಸ್ಕಿನ್ ಔಟ್ ಆಗಿರುವುದು ಕಂಡು ಬಂದಿರುವುದರಿಂದ ಅವುಗಳನ್ನು ಸರಿಪಡಿಸಿದ ನಂತರ ಬಿಲ್ ಸಂದಾಯ ಮಾಡಲು ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು. ನಂತರ ಸ್ಕಿನ್ ಔಟ್ ಸರಿಪಡಿಸಿದ ಬಳಿಕ ಬಿಲ್ ನೀಡುವುದಾಗಿ ಹೇಳಿದ್ದರು.
ಪುನಃ ಕಾಮಗಾರಿ ವೀಕ್ಷಣೆ ಮಾಡಿದ ಡಿಸಿ; ಬಿಲ್ ಪಾವತಿ ಮಾಡದಂತೆ ತಾಕೀತು ಮಾರ್ಚ್ 18ರಂದು ಮತ್ತೆ ಇದೇ ರಸ್ತೆಯ ಕಾಮಗಾರಿಯನ್ನು ಪುನಃ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗೆ ಸ್ಕಿನ್ ಔಟ್ ಸಮಸ್ಯೆ ಹಾಗೇಯೇ ಇರುವುದು ತಿಳಿದಿದೆ. ಇದೆಲ್ಲಾ ಸರಿಯಾಗುವರೆಗೂ ಕಾಮಗಾರಿಯ ಗುತ್ತಿಗೆಯನ್ನು ಹಿಡಿದವರಿಗೆ ಬಿಲ್ ನೀಡಬಾರದೆಂದು ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಹಾಗೂ ಇತರೆ ಆಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು ಹಲವಾರು ಕಡೆ ಸ್ಕಿನ್ ಔಟ್ ಆಗಿರುವುದನ್ನು ಸರಿಪಡಿಸದೇ ಇರುವುದರಿಂದ ಕಾಮಗಾರಿ ಗುತ್ತಿಗೆ ಪಡೆದಿರುವ ಪ್ರಕಾಶ ಕದರಿ ಎಂಬುವವರಿಗೆ ಬಿಲ್ ನೀಡಬಾರೆದಂದು ಖಡಕ್ ಸೂಚನೆ ನೀಡಿದರು. ಜೊತೆಗೆ ಈ ಕಾಮಗಾರಿಯನ್ನು ಸಂಪೂರ್ಣವಾಗಿ ಸರಿಪಡಿಸಬೇಕೆಂದು ಪಾಲಿಕೆಯ ಆಯುಕ್ತ, ಗುತ್ತಿಗೆದಾರರು, ಸಂಬಂಧಪಟ್ಟ ಅಭಿಯಂತರರು ಮತ್ತು ಮೂರನೇ ವ್ಯಕ್ತಿ ತಪಾಸಣಾ ತಂಡದವರಿಗೆ ಡಿಸಿ ಸೂಚಿಸಿದರು.
ವಿವಿಧ ಕಾಮಗಾರಿಗಳ ಗುಣಮಟ್ಟ ತಪಾಸಣೆ ಅಗತ್ಯ ನಗರದಲ್ಲಿ ಈಗಾಗಲೇ ಸರ್ಕಾರದಿಂದ ವಿವಿಧ ಯೋಜನೆಗಳಡಿ ರಸ್ತೆ, ಚರಂಡಿ, ಒಳಚರಂಡಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅವುಗಳನ್ನು ಗುಣಮಟ್ಟದಲ್ಲಿ ನಿರ್ವಹಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತ, ಅಭಿಯಂತರ ಮತ್ತು ಮೂರನೇ ವ್ಯಕ್ತಿ ತಪಾಸಣೆ ತಂಡದವರಿಗೆ ಡಿಸಿ ಸೂಚನೆ ನೀಡಿದರು.
ಒಂದು ವೇಳೆ ನಗರದಲ್ಲಿ ಕಳಪೆ ಕಾಮಗಾರಿಗಳು ನಿರ್ವಹಿಸುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ನೇರವಾಗಿ ತಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದ್ದಾರೆ. ಗುತ್ತಿಗೆದಾರರಿಗೂ ಸಹ ಯಾವುದೇ ತೊಂದರೆ ನೀಡದೆ ಪಾರದರ್ಶಕವಾಗಿ ಬಿಲ್ ಸಂದಾಯ ಮಾಡಬೇಕೆಂದು ಆಧಿಕಾರಿಗಳಿಗೆ ಡಿಸಿ ಸೂಚಿಸಿದರು. ಒಂದು ವೇಳೆ ಸರಿಯಾಗಿ ಕಾಮಗಾರಿ ಮುಗಿಸಿದರೂ ಬಿಲ್ ಸಂದಾಯ ಮಾಡದಿದ್ದರೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಬಿಲ್ ಸಂದಾಯ ಮಾಡಲು ಗುತ್ತಿಗೆದಾರರಿಗೆ ತೊಂದರೆ ನೀಡುತ್ತಿದ್ದಲ್ಲಿ, ಗುತ್ತಿಗೆದಾರರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಬೇಕೆಂದು ಸೂಚಿಸಿದರು.
ಇದನ್ನೂ ಓದಿ
West Bengal Elections 2021: ಓವೈಸಿಗೆ ಟಾಟಾ ಹೇಳಿ ಮಮತಾ ಬ್ಯಾನರ್ಜಿಗೆ ಬೆಂಬಲ ನೀಡಿದ AIMIM ಬಂಗಾಳ ಘಟಕದ ಅಧ್ಯಕ್ಷ
ದಾವಣಗೆರೆ ದೂಡಾ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿ! ಮಾಲೀಕರಿಗೆ ಶಾಕ್ ಕೊಟ್ಟ ದೂಡಾ ಅಧಿಕಾರಿ
Published On - 12:56 pm, Sat, 20 March 21