ಬೆಂಗಳೂರು, ಅಕ್ಟೋಬರ್ 28: ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ರಜೆಗಳು ಸಮೀಪಿಸುತ್ತಿದ್ದಂತೆಯೇ ಖಾಸಗಿ ಬಸ್ ಟಿಕೆಟ್ ದರಗಳು ಗಗನಕ್ಕೇರಿದೆ. ಬೆಂಗಳೂರು ಹಾಗೂ ಮಂಗಳೂರು ಮಧ್ಯೆ ಖಾಸಗಿ ಬಸ್ಗಳು 1,000 ರೂ.ನಿಂದ 1,500 ರೂ.ವರಗೆ ಟಿಕೆಟ್ ದರ ವಸೂಲಿ ಮಾಡುತ್ತಿವೆ. ಕೆಲವು ಬಸ್ಗಳಲ್ಲಂತೂ ಟಿಕೆಟ್ ದರ 2,000 ರೂ. ವರೆಗೆ ಇದೆ.
ನೈಋತ್ಯ ರೈಲ್ವೆ ವಿಶೇಷ ದೀಪಾವಳಿ ರೈಲುಗಳ ಸೇವೆ ಒದಗಿಸುತ್ತಿದೆ. ಆದರೆ, ವಿಶೇಷ ರೈಲುಗಳ ಎಲ್ಲ ಸೀಟುಗಳು ಈಗಾಗಲೇ ಕಾಯ್ದಿರಿಸಲಾಗಿವೆ. ಹೀಗಾಗಿ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೆಎಸ್‌ಆರ್‌ಟಿಸಿ ಬಸ್ಗಳಲ್ಲಿಯೂ ಬಹುತೇಕ ಸೀಟ್ಗಳು ಮುಂಗಡ ಕಾಯ್ದಿರಿಸಲಾಗಿದೆ. ವಿಶೇಷ ಬಸ್ಗಳಲ್ಲಿಯೂ ಮುಂಗಡ ಕಾಯ್ದಿರಿಸುವಿಕೆ ಜೋರಾಗಿದೆ. ಹೀಗಾಗಿ ಪ್ರಯಾಣಿಕರು ದುಬಾರಿ ದರ ತೆತ್ತು ಆನ್‌ಲೈನ್‌ನಲ್ಲಿ ಖಾಸಗಿ ಬಸ್‌ಗಳ ಟಿಕೆಟ್ ಖರೀದಿಸುತ್ತಿದ್ದಾರೆ.
ಬೆಂಗಳೂರು ಹಾಗೂ ಉಡುಪಿ ಮಧ್ಯೆ ಸಾಮಾನ್ಯವಾಗಿ 400 ರೂ.ನಿಂದ 700 ರೂ. ಇರುತ್ತಿದ್ದ ಖಾಸಗಿ ಬಸ್ ಟಿಕೆಟ್ ದರ ಈಗ 1,000 ರೂ. ದಾಟಿದೆ.
ಹಬ್ಬ ಹಾಗೂ ದೀರ್ಘ ವಾರಾಂತ್ಯದ ಕಾರಣ ಪ್ರಯಾಣಿಕರ ಹೆಚ್ಚುವರಿ ಬೇಡಿಕೆಗೆ ಅನುಗುಣವಾಗಿ ಕೆಲವು ಖಾಸಗಿ ಬಸ್ ಸಂಸ್ಥೆಗಳೂ ಸಹ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲು ಮುಂದಾಗಿವೆ. ಆದರೆ, ಈ ಬಸ್ಗಳಲ್ಲಿ ಟಿಕೆಟ್ ದರ ದುಪ್ಪಟ್ಟು ನಿಗದಿಪಡಿಸಲಾಗುತ್ತಿದೆ. ಲಗೇಜ್‌ಗೂ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ ಎಂದು ಪ್ರಯಾಣಿಕರು ಅಲವತ್ತುಕೊಳ್ಳುತ್ತಿದ್ದಾರೆ.
ಮತ್ತೊಂದೆಡೆ, ಮಂಗಳೂರು ಮತ್ತು ಬೆಂಗಳೂರು ನಡುವಿನ ಕೆಎಸ್‌ಆರ್‌ಟಿಸಿ ಬಸ್ ದರಗಳು ಸ್ಥಿರವಾಗಿವೆ. ಹೆಚ್ಚುವರಿ ವಿಶೇಷ ಬಸ್ ಸೇವೆಗಳಿಗೆ ಮಾತ್ರ ಶೇ 20 ರಷ್ಟು ದರ ಹೆಚ್ಚಳ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಡುಪಿ ಮತ್ತು ಕುಂದಾಪುರ ಮಾರ್ಗಗಳು ಸೇರಿದಂತೆ ಕರಾವಳಿ ಪ್ರದೇಶಗಳಿಗೆ ಈವರೆಗೆ 18 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ನಿಯೋಜಿಸಿದೆ.
ಇದನ್ನೂ ಓದಿ: ದೀಪಾವಳಿಗೆ ಖಾಸಗಿ ಬಸ್ ದುಬಾರಿ: ಮಾಲೀಕರಿಗೆ ಸಾರಿಗೆ ಇಲಾಖೆಗೆ ಖಡಕ್ ಎಚ್ಚರಿಕೆ!
ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳಿಗೆ ಆರ್‌ಟಿಒ ಇಂತಿಷ್ಟೇ ಎಂದು ದರ ನಿಗದಿಪಡಿಸಿಲ್ಲ. ಆದಾಗ್ಯೂ, ಖಾಸಗಿ ಬಸ್ಗಳವರು ಬೇಕಾಬಿಟ್ಟಿ ದರ ಹೆಚ್ಚಿಸಲು ಸಾಧ್ಯವಿಲ್ಲ. ಆ ಬಗ್ಗೆ ದೂರುಗಳು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಆರ್‌ಟಿಒ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ