
ನವದೆಹಲಿ, ಜನವರಿ 17: ಸಂಕ್ರಾಂತಿ ಮುಗಿಯುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ ಹಾರಿದ್ದಾರೆ. ಅಸ್ಸಾಂ ಚುನಾವಣಾ ವೀಕ್ಷಕರಾಗಿರುವ ಡಿಕೆಶಿ ಎಐಸಿಸಿ ಸಭೆಯಲ್ಲಿ ಭಾಗಿಯಾಗಿ ಚರ್ಚಿಸಿದ್ದಾರೆ. ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಹುಲ್ ಗಾಂಧಿಯವರನ್ನೂ ಭೇಟಿಯಾಗಿದ್ದಾರೆ. ಖರ್ಗೆ ಮತ್ತು ರಾಹುಲ್ ಗಾಂಧಿ ಭೇಟಿ ಬಳಿಕ ಮಾತನಾಡಿದ ಡಿಸಿಎಂ, ಅಲ್ಲಿ ಚರ್ಚೆ ಆಗಿದ್ದನ್ನೆಲ್ಲ ಹೇಳಲಾಗದು. ಬೇರೆ ಏನೂ ಮಾತನಾಡಲು ನಾನು ತಯಾರಿಲ್ಲ ಎಂದಿದ್ದಾರೆ.
ಮೊನ್ನೆ ತಮಿಳುನಾಡಿಗೆ ಹೋಗುತ್ತಿದ್ದ ರಾಹುಲ್ ಗಾಂಧಿ ಮೈಸೂರು ವಿಮಾನ ನಿಲ್ದಾಣದಲ್ಲಿ, ‘ದೆಹಲಿಗೆ ಬನ್ನಿ’ ಎಂದು ಡಿಸಿಎಂಗೆ ಹೇಳಿದ್ದರು. ಇದರ ಬೆನ್ನಲ್ಲೇ ಡಿಕೆಶಿ ದೆಹಲಿಗೆ ತೆರಳಿದ್ದು, ಇವತ್ತೂ ದೆಹಲಿಯಲ್ಲೇ ಇರಲಿದ್ದಾರೆ. ನಮ್ಮ ಪಥ ದೆಹಲಿ ಕಡೆಗೆ ಬದಲಾಗಿದೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ. ಸಂಕ್ರಾಂತಿ ಮುಗಿಯಿತು. ಈ ನಡುವೆ ಇನ್ನೇನಿದ್ರೂ ಯುಗಾದಿಗೆ ನೋಡೋಣ ಎಂದು ಸಚಿವ ಜಮೀರ್ ಹೇಳಿದ್ದಾರೆ.
ಅತ್ತ ಡಿಕೆ ಶಿವಕುಮಾರ್ ದೆಹಲಿಯಲ್ಲಿದ್ದರೆ, ಇತ್ತ ಸಿಎಂ ಸಿದ್ದರಾಮಯ್ಯ ಮಾಜಿ ಸಚಿವ ರಾಜಣ್ಣ ನಿವಾಸದಲ್ಲಿ ನಾಟಿಕೋಳಿ ಸಾರು, ರಾಗಿ ಮುದ್ದೆ ಸವಿದಿದ್ದಾರೆ. ರಾಜಣ್ಣಗೆ ಮತ್ತೆ ಸಚಿವ ಸ್ಥಾನದ ನೀಡುವ ಬಗ್ಗೆ ಹೈಕಮಾಂಡ್ ಜೊತೆ ಮಾತಾಡ್ತೀನಿ ಎಂದಿದ್ದಾರೆ. ಆದರೆ ಡಿಕೆಶಿ ದೆಹಲಿಗೆ ತೆರಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ಗೊತ್ತಿಲ್ಲಪ್ಪ’ ಎಂದರು.
ಇದನ್ನೂ ಓದಿ: 2 ದಿನಗಳ ಕಾಲ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿಯಾಗ್ತಾರಾ, ಸಿಗುತ್ತಾ ಕುರ್ಚಿ ಅಭಯ?
ಏತನ್ಮಧ್ಯೆ, ವಿಶೇಷ ಅಧಿವೇಶನ, ಸಂಸತ್ ಬಜೆಟ್ ಸೆಷನ್ ನಡುವೆ ಕಾಂಗ್ರೆಸ್ ಹೈಕಮಾಂಡ್ಗೆ ಸಮಯ ಸಿಗುತ್ತಾ? ರಾಜ್ಯ ನಾಯಕತ್ವದ ಬಗ್ಗೆ ಚರ್ಚಿಸುತ್ತಾರಾ ಎಂಬುದೇ ಸದ್ಯದ ಪ್ರಶ್ನೆ.