ಮೂರು ದಿನಗಳಿಂದ ದೆಹಲೀಲಿದ್ದರೂ ಡಿಕೆ ಶಿವಕುಮಾರ್​ಗೆ ಸಿಗುತ್ತಿಲ್ಲ ರಾಹುಲ್ ಗಾಂಧಿ ಭೇಟಿ ಅವಕಾಶ!

ಮೈಸೂರಿನಲ್ಲಿ ರಾಹುಲ್ ಗಾಂಧಿ ದೆಹಲಿಗೆ ಕರೆಸಿ ಮಾತನಾಡುವ ಭರವಸೆ ನೀಡಿದ್ದರೂ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಗೆ ಮತ್ತೆ ಅವಕಾಶ ಸಿಗುತ್ತಿಲ್ಲ. ಶುಕ್ರವಾರ ಒಮ್ಮೆ ಮಾತನಾಡಲು ಸಿಕ್ಕಿದ್ದುಬಿಟ್ಟರೆ ಆ ಬಳಿಕ ರಾಹುಲ್ ಇತರ ಕಾರ್ಯಗಳಲ್ಲಿ ವ್ಯಸ್ತರಾಗಿದ್ದಾರೆ. ದಾವೋಸ್ ಪ್ರವಾಸ ರದ್ದುಗೊಳಿಸಿ ದೆಹಲಿಯಲ್ಲಿ ರಾಹುಲ್​ ಭೇಟಿಗಾಗಿ ಕಾದಿದ್ದ ಡಿಕೆಶಿ ಇಂದು ಸಂಜೆ ಬೆಂಗಳೂರಿಗೆ ಮರಳಲಿದ್ದಾರೆ.

ಮೂರು ದಿನಗಳಿಂದ ದೆಹಲೀಲಿದ್ದರೂ ಡಿಕೆ ಶಿವಕುಮಾರ್​ಗೆ ಸಿಗುತ್ತಿಲ್ಲ ರಾಹುಲ್ ಗಾಂಧಿ ಭೇಟಿ ಅವಕಾಶ!
ರಾಹುಲ್ ಗಾಂಧಿ ಹಾಗೂ ಡಿಕೆ ಶಿವಕುಮಾರ್​
Image Credit source: DK Shivakumar X Handle

Updated on: Jan 19, 2026 | 1:09 PM

ಬೆಂಗಳೂರು, ಜನವರಿ 19: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಜತೆ ‘ನಿಮ್ಮನ್ನು ದೆಹಲಿಗೆ ಕರೆಸಿ ಮಾತನಾಡುತ್ತೇನೆ’ ಎಂದಿದ್ದ ರಾಹುಲ್ ಗಾಂಧಿ (Rahul Gandhi) ಇದೀಗ ಭೇಟಿಗೆ ಅವಕಾಶವೇ ನೀಡುತ್ತಿಲ್ಲವೇ? ಇಂಥದ್ದೊಂದು ಪ್ರಶ್ನೆಗೆ ಇತ್ತೀಚಿನ ಬೆಳವಣಿಗೆಗಳು ಕಾರಣವಾಗಿವೆ. ಅಸ್ಸಾಂ ವಿಧಾನಸಭಾ ಚುನಾವಣೆಯ ವೀಕ್ಷಕರಾಗಿ ನೇಮಕಗೊಂಡಿರುವ ಶಿವಕುಮಾರ್, ಅದಕ್ಕೆ ಸಂಬಂಧಿಸಿದ ಪಕ್ಷದ ಕಾರ್ಯಗಳಿಗಾಗಿ ದೆಹಲಿಗೆ ತೆರಳಿದ್ದರೂ ಕರ್ನಾಟಕ ರಾಜಕಾರಣ ಸಂಬಂಧ ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸಲಿದ್ದಾರೆ ಎಂದೇ ಹೇಳಲಾಗಿತ್ತು. ಅಧಿಕಾರ ಹಂಚಿಕೆ ವಿಚಾರವಾಗಿಯೂ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಶುಕ್ರವಾರ ಅಸ್ಸಾಂ ಚುನಾವಣೆ ಸಂಬಂಧ ನಡೆದ ಸಭೆಯ ನಂತರ ಒಂದು ಬಾರಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು ಬಿಟ್ಟರೆ ಮತ್ತೆ ಅವಕಾಶ ಸಿಗಲೇ ಇಲ್ಲ.

ರಾಹುಲ್ ಗಾಂಧಿ ಇತರ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿರುವುದರಿಂದ ಭೇಟಿ ಇನ್ನೂ ಖಚಿತವಾಗಿಲ್ಲ. ಹೀಗಾಗಿ ಡಿಕೆ ಶಿವಕುಮಾರ್ ಇಂದು (ಸೋಮವಾರ) ಬೆಂಗಳೂರಿಗೆ ಮರಳುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಕುರಿತು ಚರ್ಚಿಸಲು ಶಿವಕುಮಾರ್ ಅವರು ರಾಹುಲ್ ಗಾಂಧಿಯವರ ಭೇಟಿಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿತ್ತು. ಅದಕ್ಕಾಗಿಯೇ ಶಿವಕುಮಾರ್ ದಾವೋಸ್ (ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸುವ) ಪ್ರವಾಸವನ್ನೂ ರದ್ದುಗೊಳಿಸಿ ದೆಹಲಿಯಲ್ಲಿ ಕಾದಿದ್ದರು.

ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶಿವಕುಮಾರ್ ಭೇಟಿಯಾಗಿ ಚರ್ಚೆ ನಡೆಸಿದ್ದರು. ಬಳಿಕ ಮಾತನಾಡಿದ್ದ ಡಿಕೆಶಿ, ಇತರ ರಾಜಕಾರಣಿಗಳಂತೆ ನಾನೂ ರಾಜಕಾರಣ ಮಾಡುತ್ತೇನೆ. ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲು ಸಮಯ ಕೇಳುವುದು ಸಹಜ. ಈ ಭೇಟಿಗಳ ಬಗ್ಗೆ ಮಾಧ್ಯಮಗಳ ಮುಂದೆ ಚರ್ಚಿಸಲು ಇಷ್ಟಪಡುವುದಿಲ್ಲ. ಎಲ್ಲ ಪ್ರಶ್ನೆಗಳಿಗೂ ಕಾಲವೇ ಉತ್ತರಿಸಲಿದೆ ಎಂದಿದ್ದರು.

ಅದಾದ ನಂತರ ಪಕ್ಷದ ಹಿರಿಯ ನಾಯಕ ಭೀಮಣ್ಣ ಖಂಡ್ರೆ ಅವರ ನಿಧನದ ಬೆನ್ನಲ್ಲೇ ಅವರ ಅಂತಿಮ ದರ್ಶನಕ್ಕಾಗಿ ಬೀದರ್​​ಗೆ ಶನಿವಾರ ಆಗಮಿಸಿದ್ದ ಡಿಕೆ ಶಿವಕುಮಾರ್ ತರಾತುರಿಯಲ್ಲಿ ಮತ್ತೆ ದೆಹಲಿಗೆ ತೆರಳಿದ್ದರು. ರಾಹುಲ್ ಗಾಂಧಿಯನ್ನು ಭೇಟಿಯಾಗಿ ಸಮಾಲೋಚನೆ ನಡೆಸುವುದಕ್ಕೆಂದೇ ದೆಹಲಿಯಲ್ಲಿ ಡಿಕೆಶಿ ಬೀಡುಬಿಟ್ಟಿದ್ದಾರೆ ಎಂದು ಮೂಲಗಳು ಹೇಳಿದ್ದವು. ಆದಾಗ್ಯೂ ಇದೀಗ ಅವರಿಗೆ ಮತ್ತೆ ರಾಹುಲ್ ಭೇಟಿಗೆ ಅವಕಾಶವೇ ಸಿಕ್ಕಿಲ್ಲ.

ಇದನ್ನೂ ಓದಿ: 2 ದಿನಗಳ ಕಾಲ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿಯಾಗ್ತಾರಾ, ಸಿಗುತ್ತಾ ಕುರ್ಚಿ ಅಭಯ?

ಮತ್ತೊಂದೆಡೆ, ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹರಿಯಾಣದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದೂ ಕುತೂಹಲ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ