ನನಗೆ ಹೆಚ್​ಡಿಕೆ ಸುದ್ದಿನೂ ಬೇಡ, ಸುಮಲತಾ ಸುದ್ದಿನೂ ಬೇಡ; ನಮ್ಮ ಗಮನ ಮೇಕೆದಾಟು ವಿಚಾರದಲ್ಲಿ: ಡಿ ಕೆ ಶಿವಕುಮಾರ್

| Updated By: ganapathi bhat

Updated on: Jul 06, 2021 | 4:16 PM

ಸರ್ಕಾರ ಮೊದಲು ಟೆಂಡರ್ ಕರೆದು ಡ್ಯಾಂ ಕಟ್ಟುವ ಕೆಲಸ ಮಾಡಲಿ. ಡ್ಯಾಂ ವಿಚಾರದಲ್ಲಿ ಏರುಪೇರು ಇದ್ರೆ ಅದಕ್ಕೊಂದು ತಂಡವಿದೆ. ಆ ತಂಡದ ಮೂಲಕ ಸರ್ಕಾರ ಸಮಸ್ಯೆಯನ್ನ ಬಗೆಹರಿಸಲಿ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನನಗೆ ಹೆಚ್​ಡಿಕೆ ಸುದ್ದಿನೂ ಬೇಡ, ಸುಮಲತಾ ಸುದ್ದಿನೂ ಬೇಡ; ನಮ್ಮ ಗಮನ ಮೇಕೆದಾಟು ವಿಚಾರದಲ್ಲಿ: ಡಿ ಕೆ ಶಿವಕುಮಾರ್
ಡಿ.ಕೆ. ಶಿವಕುಮಾರ್
Follow us on

ಉಡುಪಿ: ನನಗೆ ಹೆಚ್​ಡಿಕೆ ಸುದ್ದಿನೂ ಬೇಡ, ಸುಮಲತಾ ಸುದ್ದಿನೂ ಬೇಡ. ನಮ್ಮ ಗಮನ ಇರುವುದು ಮೇಕೆದಾಟು ವಿಚಾರದಲ್ಲಿ ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಡುಪಿಯಲ್ಲಿ ಇಂದು (ಜುಲೈ 6) ಹೇಳಿಕೆ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪತ್ರ ಬರೆದಿರುವುದು ಸರಿಯಲ್ಲ ಎಂದು ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ಮೊದಲು ಟೆಂಡರ್ ಕರೆದು ಡ್ಯಾಂ ಕಟ್ಟುವ ಕೆಲಸ ಮಾಡಲಿ. ಡ್ಯಾಂ ವಿಚಾರದಲ್ಲಿ ಏರುಪೇರು ಇದ್ರೆ ಅದಕ್ಕೊಂದು ತಂಡವಿದೆ. ಆ ತಂಡದ ಮೂಲಕ ಸರ್ಕಾರ ಸಮಸ್ಯೆಯನ್ನ ಬಗೆಹರಿಸಲಿ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ನಿನ್ನೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ನಡುವೆ ವಾಗ್ವಾದ ಏರ್ಪಟ್ಟಿತು. ಮೈಶುಗರ್ ಫ್ಯಾಕ್ಟರಿ ಹಾಗೂ ಕೆಆರ್​ಎಸ್ ಡ್ಯಾಂ ವಿಚಾರವಾಗಿ ವಾದ-ಪ್ರತಿವಾದ ತಾರಕಕ್ಕೇರಿತ್ತು. ಇಂದು ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ನನಗೆ ಕುಮಾರಸ್ವಾಮಿ ಸುದ್ದಿನೂ ಬೇಡ ಸುಮಲತಾ ಸುದ್ದಿನೂ ಬೇಡ ಎಂದು ಹೇಳಿದ್ದಾರೆ.

ಕರ್ನಾಟಕಕ್ಕೆ ಇಂದು ಹೊಸ ರಾಜ್ಯಪಾಲರ ನೇಮಕವಾಗಿದೆ. ವಜೂಭಾಯಿ ವಾಲಾ ಬಳಿಕ ತಾವರ್​ಚಂದ್ ಗೆಹ್ಲೋಟ್ ನೂತನ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಹೊಸ ರಾಜ್ಯಪಾಲರಿಗೆ ನಾನು ಅಭಿನಂದನೆ ಸಲ್ಲಿಸುವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಿರ್ಗಮಿತ ರಾಜ್ಯಪಾಲರು ತಮ್ಮ ಕೈಲಾದ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ಸಾಕಷ್ಟು ಭಿನ್ನಾಭಿಪ್ರಾಯ ಇರಬಹುದು. ಭೇಟಿ ಮಾಡಲು ಬಯಸಿದಾಗಲೆಲ್ಲ ನಮ್ಮನ್ನ ಅವ್ರು ಕರೆದಿದ್ದಾರೆ. ಕಾಂಗ್ರೆಸ್ ಪಕ್ಷದವರ ಜತೆ ಚರ್ಚಿಸಿದ್ದಾರೆ. ಉಳಿದಂತೆ ಪೊಲಿಟಿಕಲ್ ಬಾಸ್‌ಗಳು ಹೇಳಿದಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮೇಕೆದಾಟು ಯೋಜನೆ ಸಂಬಂಧ ಪತ್ರ ವಿವಾದ ವಿಚಾರ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ಗೆ ಪತ್ರ ಬರೆದಿದ್ದರು. ವಿದ್ಯುತ್ ಉತ್ಪಾದನೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದ ಕಾರಣ ‘ಸುಪ್ರೀಂ’ ಆದೇಶದನ್ವಯ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ. ಈ ಯೋಜನೆ ಎರಡೂ ರಾಜ್ಯಕ್ಕೆ ಉಪಯುಕ್ತವಾಗಲಿದೆ. ಜತೆಗೆ ಯೋಜನೆಯಿಂದ ತಮಿಳುನಾಡಿನ ರೈತರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು  ಬರೆದಿದ್ದರು.

ಇದಕ್ಕೆ ಪ್ರತಿಯಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಬೆಂಗಳೂರಿನ 4.75 ಟಿಎಂಸಿ ಕುಡಿಯುವ ನೀರಿನ ಬಳಕೆಗೆ 67.16 ಟಿಎಂಸಿ ಸಾಮರ್ಥ್ಯದ ಡ್ಯಾಂ ನಿರ್ಮಾಣ ಒಪ್ಪುವಂಥದ್ದಲ್ಲ. ಮೇಕೆದಾಟು ಯೋಜನೆಯನ್ನು ಮುಂದುವರೆಸಬೇಡಿ ಎಂದು ಪ್ರತ್ಯುತ್ತರ ಬರೆದಿದ್ದರು.

ಬಳಿಕ, ಮೇಕೆದಾಟು ಯೋಜನೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಯೋಜನೆಗೆ ಎಲ್ಲವೂ ಅನುಕೂಲಕರವಾಗಿದೆ. ಪತ್ರವನ್ನು ಬರೆದು ಸೌಹಾರ್ದತೆಯಿಂದ ಬಗೆಹರಿಸಲು ಮುಂದಾಗಿದ್ದೆ. ಆದರೆ ಯಾಕೋ ತಮಿಳುನಾಡಿನವರು ಸರಿಯಾಗಿ ಸ್ಪಂದಿಸಲಿಲ್ಲ. ಆದರೆ ನಾವು ಮೇಕೆದಾಟು ಯೋಜನೆಯನ್ನು ಮುಂದುವರೆಸುತ್ತೇವೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Thawar Chand Gehlot: ಸಂಘ ಪರಿವಾರ ಹಿನ್ನೆಲೆಯ ತಾವರ್‌ಚಂದ್ ಗೆಹ್ಲೋಟ್ ಈ ಹಿಂದೆಯೂ ಕರ್ನಾಟಕದೊಂದಿಗೆ ಸಂಪರ್ಕದಲ್ಲಿದ್ದರು

Sumalatha v/s HDK ಕುಮಾರಸ್ವಾಮಿ ವಿರುದ್ಧ ಸುಮಲತಾ ಮತ್ತೆ ವಾಗ್ದಾಳಿ..!

Published On - 4:09 pm, Tue, 6 July 21