ನನ್ನನ್ನು ಸ್ವಾಗತಿಸಿದ ರಮೇಶ್ ಜಾರಕಿಹೊಳಿ ಬೆಂಬಲಿಗರಿಗೆ ಅಭಿನಂದನೆಗಳು: ಡಿ.ಕೆ. ಶಿವಕುಮಾರ್ ಟಾಂಗ್
ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದರೂ ಪ್ರಯೋಜನವಿಲ್ಲ. ರಾಜ್ಯದ ಸಮಸ್ಯೆಗಳ ಬಗ್ಗೆ ಸಂಸತ್ನಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ಲೋಕಸಭಾ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಕೈ ಪಾಳಯದ ಪರ ಪ್ರಚಾರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಿದ್ಧಾರೆ. ಬೆಳಗಾವಿಯ ಸಾಂಬ್ರಾ ನಿಲ್ದಾಣಕ್ಕೆ ಬಂದಿಳಿದ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ತಮ್ಮ ವಿರುದ್ಧ ಕಪ್ಪು ಪಟ್ಟಿ ತೊಟ್ಟು, ಕಪ್ಪು ಬಾವುಟ ಹಿಡಿದು ಪ್ರತಿಭಟಿಸಿದ ರಮೇಶ್ ಜಾರಕಿಹೊಳಿ ಬೆಂಬಲಿಗರಿಗೆ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಗೆ ನನ್ನನ್ನು ಸ್ವಾಗತಿಸುತ್ತಿರುವುದಕ್ಕೆ ಅಭಿನಂದಿಸುವೆ. ಘನಕಾರ್ಯಕ್ಕೆ ಸ್ವಾಗತ ಮಾಡುತ್ತಿದ್ದಾರೆ. ನನ್ನ ವಿರುದ್ಧದ ಪ್ರತಿಭಟನೆಗೆ ಅಭಿನಂದನೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಕೇಳಿಬಂದಿತ್ತು. ಕೇಸ್ನ ಮಹಾನಾಯಕ ಡಿ.ಕೆ. ಶಿವಕುಮಾರ್ ಎಂದು ನಿನ್ನೆ (ಮಾರ್ಚ್ 27) ಆರೋಪ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಶಿವಕುಮಾರ್ ಇಂದು (ಮಾರ್ಚ್ 28) ಬೆಳಗವಾವಿ ಪ್ರವಾಸ ಕೈಗೊಂಡಿದ್ದಾರೆ.
ಸುರೇಶ್ ಅಂಗಡಿಯವರ ನಿಧನದಿಂದ ಈ ಬೈಎಲೆಕ್ಷನ್ ಬಂದಿದೆ. ಬೆಳಗಾವಿ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಲಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಸೇರಿದಂತೆ ಎಲ್ಲರೂ ಒಮ್ಮತದ ಅಭ್ಯರ್ಥಿ, ಸತೀಶ್ ಜಾರಕಿಹೊಳಿಗೆ ನಿನ್ನೆಯೇ ಬಿಫಾರ್ಮ್ ಕೊಟ್ಟಿದ್ದೇವೆ. ಸತೀಶ್ ಜಾರಕಿಹೊಳಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ಪಾರ್ಲಿಮೆಂಟ್ಗೆ ಹೋಗೋದು ನಿಶ್ಚಿತ ಎಂದು ಬೆಳಗಾವಿ ಏರ್ಪೋರ್ಟ್ನಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದರೂ ಪ್ರಯೋಜನವಿಲ್ಲ. ರಾಜ್ಯದ ಸಮಸ್ಯೆಗಳ ಬಗ್ಗೆ ಸಂಸತ್ನಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಬೆಂಗಾವಲು ವಾಹನದ ಮೇಲೆ ಚಪ್ಪಲಿ ಎಸೆತ ಡಿ.ಕೆ. ಶಿವಕುಮಾರ್ ಬೆಂಗಾವಲು ವಾಹನದ ಮೇಲೆ ಪ್ರತಿಭಟನಾಕಾರರು ಚಪ್ಪಲಿ ಎಸೆದಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದಾರೆ. ಬೆಳಗಾವಿ ಏರ್ಪೋರ್ಟ್ನಿಂದ ತೆರಳುವ ವೇಳೆ ಘಟನೆ ನಡೆದಿದೆ.
ಇಷ್ಟೇ ಅಲ್ಲದೆ, ಕಾರ್ಯಕರ್ತನ ಮೇಲೆ ಲಾಠಿ ಬೀಸಿದ್ದಕ್ಕೆ ರಮೇಶ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನ್ಸ್‌ಟೇಬಲ್‌ನನ್ನು ಎಳೆದಾಡಿ ದಾಂಧಲೆ ಮಾಡಿದ್ದಾರೆ. ಬೆಂಬಲಿಗರಿಂದ ತಪ್ಪಿಸಿಕೊಂಡು ಓಡಿದ ಕಾನ್ಸ್‌ಟೇಬಲ್‌ನನ್ನು ವಶಕ್ಕೆ ಕೊಡಿ ಎಂದು ಕೂಗಿ, ಶರ್ಟ್ ಬಿಚ್ಚಿ, ಅರೆನಗ್ನರಾಗಿ ರಮೇಶ್ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ‘ಗೋ ಬ್ಯಾಕ್ ಡಿಕೆಶಿ’ ರಮೇಶ್ ಜಾರಕಿಹೊಳಿ ಬೆಂಬಲಿಗರ ಆಕ್ರೋಶ; ಪ್ರತಿಭಟನೆಗೂ, ನಮಗೂ ಸಂಬಂಧವಿಲ್ಲ ಎಂದ ಸತೀಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿ ವಿಜಯ ಮಲ್ಯನೋ ಇಲ್ಲವೇ ನೀರವ್ ಮೋದಿಯೋ?; ವಿಪಕ್ಷ ನಾಯಕ ಸಿದ್ದರಾಮಯ್ಯ
Published On - 3:49 pm, Sun, 28 March 21