ಬೆಂಗಳೂರು: ರಾಜ್ಯದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರರು ಭಾಗಿಯಾಗಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದಂರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಾಂಧೀಜಿಯವರ ತತ್ವಗಳನ್ನ ನಾವೆಲ್ಲರೂ ಅನುಸರಿಸಬೇಕು. ಸ್ವಾತಂತ್ರ್ಯಕ್ಕಾಗಿ ಪ್ರಾಣಕೊಟ್ಟವರನ್ನ ನಾವೆಲ್ಲರೂ ಸ್ಮರಿಸಬೇಕು. ಎಲ್ಲೆಡೆ ಅಸಮಾನತೆ ನಿವಾರಿಸಿ ಸಮಾನತೆ ಸಾಧಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನ ನಾವು ಎತ್ತಿಹಿಡಿಯಬೇಕು. ದೇಶದ ಐಕ್ಯತೆಯನ್ನ ನಾವು ಇಂದು ಉಳಿಸಬೇಕಿದೆ ಎಂದು ಹೇಳಿದರು.
ಇಂದು ಸಂವಿಧಾನಕ್ಕೆ ಅಪಚಾರವಾಗುತ್ತಿದೆ. ಸಂವಿಧಾನ ಅಳಿಸುವ ಮೇಲಾಟ ನಡೆದಿದೆ. ಸಂವಿಧಾನದ ಮೇಲೆ ಬಿಜೆಪಿಯವರಿಗೆ ಕನಿಷ್ಠ ಬೆಲೆಯಿಲ್ಲ. ಸಂವಿಧಾನ ಸುಡಲು ಹೊರಟವರು ಅವರು. ಹೀಗಾಗಿ, ಕೋಮುವಾದಿಗಳಿಂದ ಸ್ವಾತಂತ್ರ್ಯ ಪಡೆಯಬೇಕಿದೆ. ಅವರು ಕೋಮುವಾದ ಮತ್ತು ದ್ವೇಷದ ಬೀಜ ಬಿಜೆಪಿ ಬಿತ್ತುತ್ತಿದ್ದಾರೆ ಎಂದರು.
ಈ ವಿಷ ಬೀಜವನ್ನ ನಾವು ಕಿತ್ತುಹಾಕಬೇಕಿದೆ. ನಾವು ಹೋರಾಟದ ಮೂಲಕವೇ ಸ್ವಾತಂತ್ರ್ಯ ಪಡೀಬೇಕು. ದೇಶದಲ್ಲಿನ ತಿಕ್ಕಾಟವನ್ನ ತೊಡೆಯಬೇಕಿದೆ. ರಾಷ್ಟ್ರದಲ್ಲಿ ಮತ್ತೊಂದು ಬದಲಾವಣೆ ತರಬೇಕಿದೆ. ಮುಂದಿನ ದಿನದಲ್ಲಿ ಕೆಂಪುಕೋಟೆಯಲ್ಲಿ ಭಾಷಣ ಮಾಡ್ತೇವೆ ಎಂಬ ಆತ್ಮವಿಶ್ವಾಸದ ಮಾತುಗಳನ್ನು ಆಡಿದರು.
ಅದಕ್ಕೆ ನಾವು ಇಲ್ಲಿಂದಲೇ ಧ್ವನಿ ನೀಡಬೇಕಿದೆ. ಯುವಜನತೆಯ ಮೂಲಕ ಹೋರಾಟ ಮಾಡಬೇಕಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್ ತಮ್ಮ ಭಾಷಣದ ಮೂಲಕ ಕರೆ ನೀಡಿದರು.