ಯಾರೂ ಕೂಡ ಅಧಿಕಾರ ಹಂಚಿಕೆ ಬಗ್ಗೆ ಮಾತಾಡಕೂಡದು, ಅದರಿಂದ ಪಕ್ಷಕ್ಕೆ ಹಾನಿ: ಡಿಕೆ ಶಿವಕುಮಾರ್ ಖಡಕ್ ಸೂಚನೆ

ರಾಜ್ಯ ರಾಜಕಾರಣದಲ್ಲಿ ಈವರಗೆ ಶಾಂತವಾಗಿದ್ದ ಪವರ್ ಶೇರಿಂಗ್​​ ಕೂಗು ಇದೀಗ ಮತ್ತೆ ಸದ್ದು ಮಾಡುತ್ತಿದೆ. ಮುಂದಿನ ಎರಡೂವರೆ ವರ್ಷ ನಾನೇ ಸಿಎಂ ಆಗಿರುತ್ತೇನೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಕೆಲ ಕಾಂಗ್ರೆಸ್​​ ನಾಯಕರು ಡಿಕೆ ಶಿವಕುಮಾರ್​​ ನವೆಂಬರ್​​ನಲ್ಲಿ ಸಿಎಂ ಆಗುತ್ತಾರೆ ಎಂದಿದ್ದಾರೆ. ಹೀಗಿರುವಾಗಲೇ ಪವರ್ ಶೇರಿಂಗ್ ಬಗ್ಗೆ ಮಾತನಾಡುವುದಕ್ಕೆ ಯಾರಿಗೂ ಹಕ್ಕಿಲ್ಲ ಎಂದು ಡಿಕೆ ಶಿವಕುಮಾರ್​​​ ಗುಡುಗಿದ್ದಾರೆ.

ಯಾರೂ ಕೂಡ ಅಧಿಕಾರ ಹಂಚಿಕೆ ಬಗ್ಗೆ ಮಾತಾಡಕೂಡದು, ಅದರಿಂದ ಪಕ್ಷಕ್ಕೆ ಹಾನಿ: ಡಿಕೆ ಶಿವಕುಮಾರ್ ಖಡಕ್ ಸೂಚನೆ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

Updated on: Oct 02, 2025 | 12:15 PM

ಬೆಂಗಳೂರು, ಅಕ್ಟೋಬರ್​ 02: ಕಾಂಗ್ರೆಸ್ (Congress) ಪಾಳೆಯದಲ್ಲಿ ಮತ್ತೆ ಪವರ್ ಶೇರಿಂಗ್​​​ ಚರ್ಚೆ ಮುನ್ನಲೆಗೆ ಬಂದಿದೆ. ನವೆಂಬರ್ ಕ್ರಾಂತಿಯ ಮಾತು ಜೋರಾಗಿದೆ. ಈಗಾಗಲೇ ಕೆಲ ಕಾಂಗ್ರೆಸ್​​ ನಾಯಕರು ಡಿಕೆ ಶಿವಕುಮಾರ್ (DK Shivakumar)​​ ಸಿಎಂ ಆಗುತ್ತಾರೆ ಎಂದಿದ್ದಾರೆ. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್​, ಕಾಂಗ್ರೆಸ್​ನಲ್ಲಿ ಯಾರೂ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಬೇಡಿ, ಅದು ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಎಂದು ಹೇಳಿದ್ದಾರೆ.

ಕುಣಿಗಲ್ ಶಾಸಕ ರಂಗನಾಥ್​ಗೆ ನೋಟಿಸ್ ಕೊಡಲು ಹೇಳಿದ್ದೇನೆ ಎಂದ ಡಿಕೆ ಶಿವಕುಮಾರ್

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಯಾರಿಗೂ ಪವರ್ ಶೇರಿಂಗ್ ಬಗ್ಗೆ ಮಾತನಾಡುವುದಕ್ಕೆ ಹಕ್ಕಿಲ್ಲ. ಕುಣಿಗಲ್ ಶಾಸಕ ರಂಗನಾಥ್ ಸೇರಿದಂತೆ ಯಾರು ಸಹ ಮಾತನಾಡಬಾರದು. ಅವರಿಗೆ ನೋಟಿಸ್ ಕೊಡಲು ಹೇಳಿದ್ದೇನೆ ಎಂದರು.

ಇದನ್ನೂ ಓದಿ: ಸೆಪ್ಟೆಂಬರ್ ಆಯ್ತು ಈಗ ಕಾಂಗ್ರೆಸ್​ನಲ್ಲಿ ನವೆಂಬರ್ ಕ್ರಾಂತಿಯ ಮಾತು! ಮತ್ತೆ ಸಿಎಂ ಬದಲಾವಣೆ ಚರ್ಚೆ

ಪವರ್ ಶೇರಿಂಗ್ ಬಗ್ಗೆ ಎಲ್ಲಿ ಚರ್ಚೆ ಇದೆ? ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ, ಯಾರು ಚರ್ಚೆ ಮಾಡಬಾರದು. ಇದರ ಬಗ್ಗೆ ಮಾತನಾಡುವವರು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪರವಾಗಿ ಮಾತಾಡಿದರೂ, ನನ್ನ ಪರವಾಗಿ ಮಾತಾಡಿದರೂ ಅದು ಡ್ಯಾಮೇಜ್ ಆಗುತ್ತೆ. ಇದರ ಬಗ್ಗೆ ಚರ್ಚೆ ಮಾಡಿದರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದಂತೆ ಎಂದು ಖಡಕ್​​​ ಆಗಿ ಹೇಳಿದ್ದಾರೆ.

ಇದನ್ನೂ ಓದಿ: 5 ವರ್ಷವೂ ನಾನೇ ಸಿಎಂ: ವಿರೋಧಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಕ್ಕರ್​

ಸಿದ್ದರಾಮಯ್ಯ ಬೇರೆ ರೀತಿ ಹೇಳಿದ್ದಾರೆ, ಅವರು ಹೇಳಿದಂತೆ ಹೈಕಮಾಂಡ್ ಮಾತೇ ಅಂತಿಮ. ಹೈಕಮಾಂಡ್​ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ. ನಮಗೆ ಪಕ್ಷ ಮುಖ್ಯ, ವ್ಯಕ್ತಿಯಲ್ಲ. ಪಕ್ಷ ಹೇಳಿದಂತೆ ಕೇಳಿಕೊಂಡು ಹೋಗುತ್ತೇವೆ ಅಂತ ಹೇಳಿದ್ದಾರೆ. ನೀವು ಹೇಳಿದ್ದು ನಮ್ಮ ಬಾಯಲ್ಲಿ ಹೇಳಿಸುವುದಕ್ಕೆ ಹೋಗಬೇಡಿ, ನಾನು ಮೂರ್ಖನಲ್ಲ ಎಂದಿದ್ದಾರೆ.

ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್​​ ವಾಗ್ದಾಳಿ

ಬಿಜೆಪಿ ಪಕ್ಷದರು ಅವರ ಪಾರ್ಟಿಯ ಕ್ರಾಂತಿಯ ಬಗ್ಗೆ ಚರ್ಚೆ ಮಾಡಿಕೊಂಡು ಹೋಗಲಿ. ನಾನು ಸೂಜಿ, ದಾರ ಬೇಕಾದರೆ ಕಳಿಸಿಕೊಡುತ್ತೇನೆ ಅವರು ಹೊಲೆದುಕೊಂಡು ಅವರ ಪಕ್ಷವನ್ನು ರೆಡಿ ಮಾಡಿಕೊಳ್ಳಲಿ ಎಂದು ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್​​ ವಾಗ್ದಾಳಿ ಮಾಡಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.