ಕಾಂಗ್ರೆಸ್ ಸರ್ಕಾರ ಉರುಳಿಸಲು ಸಾವಿರ ಕೋಟಿ ರೆಡಿ: ಯತ್ನಾಳ್ ಹೇಳಿಕೆ ಬಗ್ಗೆ ಐಟಿ ತನಿಯಾಗಲಿ ಎಂದ ಡಿಕೆ ಶಿವಕುಮಾರ್

|

Updated on: Sep 30, 2024 | 2:45 PM

ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ದೊಡ್ಡ ಮಟ್ಟದಲ್ಲಿ ಷಡ್ಯಂತ್ರ ನಡೆದಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಐಟಿ, ಇಡಿ ತನಿಖೆಯಾಗಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಹಾಗಾದರೆ ಯತ್ನಾಳ್ ಹೇಳಿದ್ದೇನು? ಡಿಕೆಶಿ ಪ್ರತಿಕ್ರಿಯೆ ಏನಿತ್ತು? ಇಲ್ಲಿದೆ ಪೂರ್ಣ ವಿವರ.

ಕಾಂಗ್ರೆಸ್ ಸರ್ಕಾರ ಉರುಳಿಸಲು ಸಾವಿರ ಕೋಟಿ ರೆಡಿ: ಯತ್ನಾಳ್ ಹೇಳಿಕೆ ಬಗ್ಗೆ ಐಟಿ ತನಿಯಾಗಲಿ ಎಂದ ಡಿಕೆ ಶಿವಕುಮಾರ್
ಬಸನಗೌಡ ಪಾಟೀಲ್ ಯತ್ನಾಳ್ & ಡಿಕೆ ಶಿವಕುಮಾರ್
Follow us on

ಬೆಂಗಳೂರು, ಸೆಪ್ಟೆಂಬರ್ 30: ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು 1,200 ಕೋಟಿ ರೂಪಾಯಿ ರೆಡಿ ಮಾಡಿ ಇಟ್ಟುಕೊಳ್ಳಲಾಗಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಆದಾಯ ತೆರಿಗೆ ಇಲಾಖೆಯಿಂದ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಯತ್ನಾಳ್​ ಹೇಳಿಕೆ ಬಗ್ಗೆ ನಮಗೂ ಮಾಹಿತಿ ಇದೆ ಎಂದರು.

ಯತ್ನಾಳ್ ಹೇಳಿಕೆ ಕುರಿತು ಚರ್ಚಿಸಲು ​ಕಾಂಗ್ರೆಸ್ ಕಾನೂನು ತಂಡದ ಸಭೆ ಕರೆದಿದ್ದೇನೆ. 1,200 ಕೋಟಿ ರೂಪಾಯಿ ರೆಡಿಯಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಕಡೆಯಿಂದ ಈ ಹಣ ರೆಡಿಯಾಗಿದೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಈ ಮಾಹಿತಿಯನ್ನು ತಿಳಿಸಿದ್ದೇನೆ. ಇದು ತೆರಿಗೆ ಇಲಾಖೆ ಹಾಗೂ ಇಡಿ (ಜಾರಿ ನಿರ್ದೇಶನಾಲಯ) ತನಿಖೆಯ ವ್ಯಾಪ್ತಿಗೆ ಬರುವ ವಿಚಾರ. ದೂರು ನೀಡುವ ಸಂಬಂಧ ಇಂದು ಚರ್ಚೆ ಮಾಡಲಿದ್ದೇನೆ ಎಂದರು.

ಏನು ಹೇಳಿದ್ದರು ಬಸನಗೌಡ ಪಾಟೀಲ್ ಯತ್ನಾಳ್?

ದಾವಣಗೆರೆಯಲ್ಲಿ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಪತನಗೊಳಿಸಲು ಷಡ್ಯಂತ್ರ ನಡೆಸಲಾಗಿದೆ. ಅದಕ್ಕಾಗಿ 1,200 ಕೋಟಿ ರೂ. ರೆಡಿ ಮಾಡಿ ಇಡಲಾಗಿದೆ. ಈ ಷಡ್ಯಂತ್ರದ ಭಾಗವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರು ಇದ್ದಾರೆ. ಬಿಜೆಪಿ ಹೈಕಮಾಂಡ್‌ಗೆ ಆಸಕ್ತಿಯಿಲ್ಲದಿದ್ದರೂ ಬಿಜೆಪಿಯೊಳಗಿನ ಕೆಲವು ಮಂದಿ ಆಪರೇಷನ್ ಕಮಲದ ಬಗ್ಗೆ ಯೋಚಿಸುತ್ತಿದ್ದಾರೆ. ಈ ಸಂಚಿನ ಬಗ್ಗೆ ನನಗೆ ಮಾಹಿತಿ ಇದೆ. ಆದರೆ ನಾವು ಅದಕ್ಕೆ ಆಸ್ಪದ ನೀಡುವುದಿಲ್ಲ ಎಂದಿದ್ದರು.

ಕೆಲವರು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ: ಯತ್ನಾಳ್

ಕೆಲವರು ಆಪರೇಷನ್‌ಗೆ ಹಣವನ್ನೂ ಇಟ್ಟುಕೊಂಡು ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲು ಪಾಲಾಗಬಹುದು. ಮುಡಾ ಘಟನೆ ಬಂದಾಗ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮನವಿ ಮಾಡಿದ್ದೆ. ಜನಪ್ರತಿನಿಧಿಗಳ ನ್ಯಾಯಾಲಯ, ಹೈಕೋರ್ಟ್ ಮೊರೆ ಹೋಗುವ ಮೂಲಕ ಸಿದ್ದರಾಮಯ್ಯ ವರ್ಚಸ್ಸು ಕಳೆದುಕೊಂಡಿದ್ದಾರೆ. ಅವರು ಹೈಕೋರ್ಟ್‌ಗೆ ಹೋಗದೇ ಇದ್ದಿದ್ದರೂ ಈ ಬಗ್ಗೆ ತನಿಖೆಯಾಗಲೇ ಬೇಕಿತ್ತು ಎಂದು ಯತ್ನಾಳ್ ಹೇಳಿದ್ದರು.

ಕಾಂಗ್ರೆಸ್ ಶಾಸಕರಿಂದಲೇ ಸಿದ್ದು ವಿರುದ್ಧ ಪಿತೂರಿ: ಯತ್ನಾಳ್

ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಗ್ಯಾರಂಟಿ ಹಣ ಮತ್ತು ಸಿಬ್ಬಂದಿ ವೇತನ ನೀಡಲು ಕಷ್ಟವಾಗುತ್ತಿದೆ. ಆದರೆ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಸರ್ಕಾರವನ್ನು ಬೀಳಿಸಲು ಹೆಚ್ಚು ಒಲವು ತೋರುತ್ತಿದ್ದಾರೆ. ಇದನ್ನು ಯಾರೂ ಬಹಿರಂಗವಾಗಿ ಹೇಳುತ್ತಿಲ್ಲ. ಮುಡಾ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರೇ ನಮಗೆ ದಾಖಲೆಗಳನ್ನು ನೀಡಿದ್ದರು. ನಿಜಕ್ಕಾದರೆ ಈ ಹೋರಾಟಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು.

ಇದನ್ನೂ ಓದಿ: ಕೆಲವರು ಸಿಎಂ ಆಗಲು ಸಾವಿರ ಕೋಟಿ ಹಣ ಇಟ್ಕೊಂಡು ಕಾಯ್ತಿದ್ದಾರೆ: ಶಾಸಕ ಯತ್ನಾಳ್ ಬಾಂಬ್

ರಾಜ್ಯ ಸರ್ಕಾರ ಈಗಾಗಲೇ ಭ್ರಷ್ಟವಾಗಿದ್ದು, ಅಧಿಕಾರದಲ್ಲಿ ಮುಂದುವರಿಯಬಾರದು. ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುತ್ತಾರೆ ಎಂದು ಭಾವಿಸಲಾಗಿತ್ತು. ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿರುವ ಇದೇ ಮಂದಿ ಖರ್ಗೆ ಅವರನ್ನು ಸಿಎಂ ಮಾಡುವ ತಂತ್ರದ ಹಿಂದೆ ಇದ್ದಾರೆ ಎಂದು ಯತ್ನಾಳ್ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:17 pm, Mon, 30 September 24