ಹೆಚ್​ಡಿಕೆ, ಚಂದ್ರಶೇಖರ್ ಮಧ್ಯೆ ತಾರಕಕ್ಕೇರಿದ ‘ಹಂದಿ’ಕುಸ್ತಿ: ಎಡಿಜಿಪಿ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ಜೆಡಿಎಸ್ ದೂರು

ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ನಡುವಣ ವಾಕ್ಸಮರ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಕೇಂದ್ರ ಸಚಿವರನ್ನು ನಿಂದಿಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೆಡಿಎಸ್ ನಿಯೋಗ ಕರ್ನಾಟಕ ಸರ್ಕಾರದ ಮುಕ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದೆ.

ಹೆಚ್​ಡಿಕೆ, ಚಂದ್ರಶೇಖರ್ ಮಧ್ಯೆ ತಾರಕಕ್ಕೇರಿದ ‘ಹಂದಿ’ಕುಸ್ತಿ: ಎಡಿಜಿಪಿ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ಜೆಡಿಎಸ್ ದೂರು
ಚಂದ್ರಶೇಖರ್ ವಿರುದ್ಧ ಸಿಎಸ್‌ಗೆ ದೂರು ನೀಡಿದ ಜೆಡಿಎಸ್ ನಿಯೋಗ
Follow us
ಪ್ರಸನ್ನ ಗಾಂವ್ಕರ್​
| Updated By: Ganapathi Sharma

Updated on: Sep 30, 2024 | 12:59 PM

ಬೆಂಗಳೂರು, ಸೆಪ್ಟೆಂಬರ್ 30: ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹಾಗೂ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಚಂದ್ರಶೇಖರ್ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಜೆಡಿಎಸ್ ದೂರು ನೀಡಿದೆ. ಜೆಡಿಎಸ್ ಶಾಸಕರು ಹಾಗೂ ಪರಿಷತ್ ಸದಸ್ಯರು ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಚಂದ್ರಶೇಖರ್ ವಿರುದ್ಧ ಸಿಎಸ್‌ಗೆ ಸೋಮವಾರ ದೂರು ನೀಡಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಪತ್ರದ ಮೂಲಕ ಹಂದಿಗೆ ಹೋಲಿಸಿ, ಚಂದ್ರಶೇಖರ್ ಟೀಕಿಸಿದ್ದಾರೆ. ಇದರಿಂದ ಕೇಂದ್ರ ಸಚಿವರಿಗೆ ಅಪಮಾನ ಮಾಡಲಾಗಿದೆ ಎಂದು ಚಂದ್ರಶೇಖರ್ ವಿರುದ್ದ ಕ್ರಮಕ್ಕೆ ಸಿಎಸ್​​​ಗೆ ಜೆಡಿಎಸ್ ನಿಯೋಗ ಮನವಿ ಮಾಡಿದೆ.

ಇತ್ತ ಕರ್ನಾಟಕ ಬಿಜೆಪಿ ಕೂಡ ಕುಮಾರಸ್ವಾಮಿ ಬೆಂಬಲಕ್ಕೆ ನಿಂತಿದೆ. ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಕಳಂಕಿತ ಅಧಿಕಾರಿ ಎಂದು ಬಿಜೆಪಿ ಆರೋಪಿಸಿದೆ. ಲೋಕಾಯುಕ್ತ ತನಿಖೆ ಪಾರದರ್ಶಕವಾಗಿ ನಡೆಯುವ ನಂಬಿಕೆ ಇಲ್ಲ. ಸಿಬಿಐ ತನಿಖೆಯೇ ಆಗಬೇಕೆಂದು ಒತ್ತಾಯಿಸಲು ಬಿಜೆಪಿ ಮುಂದಾಗಿದೆ. ಕೇಂದ್ರ ಸಚಿವರ ವಿರುದ್ಧವೇ ಲೋಕಾಯುಕ್ತ ಎಡಿಜಿಪಿ ಮಾತನಾಡುತ್ತಾರೆ. ಮುಡಾ ಕೇಸ್ ತನಿಖೆಯಲ್ಲಿ ಪಾರದರ್ಶಕತೆ ನಿರೀಕ್ಷೆ ಇಲ್ಲ ಎಂದು ಸಿಬಿಐ ತನಿಖೆಗೆ ಆಗ್ರಹಿಸಲು ಬಿಜೆಪಿ ಮುಂದಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಹೋರಾಟಕ್ಕೆ ವೇದಿಕೆ ಸಿದ್ಧಗೊಳಿಸಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಡಿಸಿಎಂ ಡಿಕೆ ಶಿವಕುಮಾರ್ ನಮಗೂ ಇದಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಇತರ ಕಾಂಗ್ರೆಸ್ ನಾಯಕರು ಎಡಿಜಿಪಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೆಚ್​ಡಿ ಕುಮಾರಸ್ವಾಮಿ ನನ್ನ ಮೇಲೆ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ: ಎಡಿಜಿಪಿ ಚಂದ್ರಶೇಖರ್

‘ಜಾರ್ಜ್​ ಬರ್ನಾರ್ಡ್ ಶಾ’ ಹೇಳಿದ್ದನ್ನು ಎಡಿಜಿಪಿ ಉಲ್ಲೇಖಿಸಿದ್ದಾರೆ. ಗಾದೆ ಹೇಳಿದರೆ ಅದು ನನಗೆ ಹೇಳಿದಹಾಗೆ ಅಂತ ಯಾಕೆ ತಿಳಿದುಕೊಳ್ಳಬೇಕು ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸಿದ್ದಾರೆ. ಹಾಸನ ತಾಲೂಕಿನ ಗೊರೂರಿನಲ್ಲಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಅದು ಬರ್ನಾಡ್ ಶಾ ಹೇಳಿಕೆ. ಎಡಿಜಿಪಿ ಚಂದ್ರಶೇಖರ್ ಅದನ್ನು ಉಲ್ಲೇಖಿಸಿದ್ದಾರೆ ಅಷ್ಟೆ ಎಂದಿದ್ದಾರೆ.

ಒಟ್ಟಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಚಂದ್ರಶೇಖರ್ ನಡುವಿನ ಸಮರ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ