ಗಾಂಧಿ ಕಾಂಗ್ರೆಸ್ ನಾಯಕತ್ವಕ್ಕೆ 100 ವರ್ಷ: ಪಕ್ಷ ಮತ್ತು ಸರ್ಕಾರದಿಂದ ಗಾಂಧಿ ನಡಿಗೆ; ಡಿಕೆ ಶಿವಕುಮಾರ್
ಮಹಾತ್ಮ ಗಾಂಧಿಯವರು ಕಾಂಗ್ರೆಸ್ನ ನಾಯಕತ್ವ ವಹಿಸಿಕೊಂಡು 100 ವರ್ಷಗಳಾದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು, ಸೆಪ್ಟೆಂಬರ್ 30: ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಮಹಾತ್ಮ ಗಾಂಧಿಯವರು (Mahatma Gandhi) ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡು ಈ ವರ್ಷಕ್ಕೆ 100 ವರ್ಷ ಆಗುತ್ತದೆ. ಮತ್ತು ಮಹಾತ್ಮಾ ಗಾಂಧೀಜಿ ಅವರು ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮ ಆರಂಭಿಸಿ 100 ವರ್ಷಗಳು ತುಂಬಿದೆ. ಮಹಾತ್ಮ ಗಾಂಧಿಯವರು ಕಾಂಗ್ರೆಸ್ನ (Congress) ನಾಯಕತ್ವ ವಹಿಸಿಕೊಂಡ ಮೇಲೆ ದೇಶಕ್ಕೆ ಹೊಸ ಹುರುಪು ಬಂತು. ಈ ಹಿನ್ನೆಲೆಯಲ್ಲಿ ಈ ವರ್ಷ ಸರ್ಕಾರ ಮತ್ತು ಪಕ್ಷದ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷ ಮತ್ತು ಸರ್ಕಾರ ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸಲು ತೀರ್ಮಾನ ಮಾಡಿದ್ದೇವೆ. ಮಹತ್ಮಾ ಗಾಂಧಿಯವರ ಜನ್ಮದಿನ ಅಕ್ಟೋಬರ್ 2ರಂದು ಗಾಂಧಿ ನಡಿಗೆ ಹಮ್ಮಿಕೊಂಡಿದ್ದೇವೆ. ಅಂದು ಬೆಳಗ್ಗೆ 9 ಗಂಟೆಗೆ ಗಾಂಧಿ ಭವನದಿಂದ ಒಂದೂವರೆ ಕಿಮೀ ನಡೆಯುತ್ತೇವೆ. ಟೌನ್ ಹಾಲ್ನಲ್ಲಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪಕ್ಷದ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಶಿಕ್ಷಣ ಇಲಾಖೆ, ಸಂಸ್ಕೃತಿ ಇಲಾಖೆ ಮತ್ತು ಬಿಬಿಎಂಪಿ ಒಟ್ಟಾಗಿ ಕಾರ್ಯಕ್ರಮ ಮಾಡುತ್ತೇವೆ. ಇದೇ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯಲಿದೆ ಎಂದರು.
ಕಾರ್ಯಮಕ್ಕೆ ಪ್ರತಿಯೊಬ್ಬರು ಬಿಳಿ ಟೋಪಿ, ಬಿಳಿ ಬಟ್ಟೆ ಧರಿಸಿಕೊಂಡು ಬರಬೇಕು. ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜವನ್ನು ಮಾತ್ರ ಬಳಸಬೇಕು. ಕನ್ನಡ ಧ್ವಜ, ಪಕ್ಷದ ಬಾವುಟ ಯಾವುದನ್ನೂ ಬಳಸಬಾರದು ಎಂದು ಸೂಚನೆ ನೀಡಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಕಾರ್ಯಕ್ರಮ
ರಾಜ್ಯದ ಉದ್ದಲಕ್ಕೂ ಬೆಳಿಗ್ಗೆ 11 ಗಂಟೆಗೆ ಪಕ್ಷದ ವತಿಯಿಂದ ಕಾರ್ಯಕ್ರಮ ನಡೆಸಲಾಗುವುದು. ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆಯವರಿಗೆ ನಡಿಗೆ ಇರುತ್ತದೆ. ನಂತರ ಎಂ.ಜಿ ರಸ್ತೆಯಿಂದ ಭಾರತ್ ಜೋಡೋ ಭವನದವರೆಗೆ ಪಕ್ಷದ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ಎಲ್ಲ ಸಂಘ ಸಂಸ್ಥೆಗಳು ಭಾಗಿಯಾಗಬೇಕು. ಜಿಲ್ಲಾ, ತಾಲ್ಲೂಕು ಮಟ್ಟದಲ್ಲೂ ಎಲ್ಲರೂ ಆಚರಿಸಲು ಸೂಚನೆ ನೀಡಿದ್ದೇನೆ. ಗಾಂಧಿಜಿಯವರ ವಿಚಾರಗಳನ್ನು ಜನರಿಗೆ ತಿಳಿಸುತ್ತೇವೆ. 136 ಕ್ಷೇತ್ರದ ಶಾಸಕರು ಅವರ ಕ್ಷೇತ್ರದಲ್ಲಿದ್ದು ಆಚರಣೆ ಮಾಡಲು ಆದೇಶ ನೀಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಉರುಳಿಸಲು ಸಾವಿರ ಕೋಟಿ ರೆಡಿ: ಯತ್ನಾಳ್ ಹೇಳಿಕೆ ಬಗ್ಗೆ ಐಟಿ ತನಿಯಾಗಲಿ ಎಂದ ಡಿಕೆ ಶಿವಕುಮಾರ್
ಗಾಂಧಿ ಭಾರತ ಅಂತ ಕಾರ್ಯಕ್ರಮ
ಯಾವ ರೀತಿ ಗಾಂಧಿಜಿ ನಾಯಕತ್ವ ವಹಿಸಿಕೊಂಡು ಮಾರ್ಗದರ್ಶನ ನೀಡಿದ್ದಾರೆ ಅದನ್ನು ಅಳವಡಿಸಿಕೊಳ್ಳಬೇಕು. ಮಹಾತ್ಮ ಗಾಂಧಿಜಿಯವರ ಆಚಾರ, ವಿಚಾರ ಯುವಕರಿಗೆ ತಿಳಿಸಬೇಕು. ಬರುವ ಡಿಸೆಂಬರ್ನಲ್ಲಿ ಪಕ್ಷ ಮತ್ತು ವಿಧಾನಸಭೆಯ ಜಂಟಿ ಅಧಿವೇಶನ ಬೆಳಗಾವಿಯಲ್ಲಿ ನಡೆಸಲು ತೀರ್ಮಾನ ಮಾಡಿದ್ದೇವೆ. ಗಾಂಧಿ ಭಾರತ ಅಂತ ಕಾರ್ಯಕ್ರಮ ರೂಪಗೊಳ್ಳಲಿದೆ. ಅಲ್ಲಿಯೂ ಗಾಂಧೀಜಿಯವರ ವಿಚಾರಧಾರೆಯನ್ನು ತಿಳಿಸುತ್ತೇವೆ ಎಂದರು.
ಬಿಜೆಪಿ ಪಕ್ಷ ಆಗ ಹುಟ್ಟಿರಲಿಲ್ಲ
ಸ್ವಾತಂತ್ರ್ಯ ಪೂರ್ವಕ್ಕೂ, ಇಂದಿರಾ ಗಾಂಧಿಗೂ ಸಂಬಂಧವಿಲ್ಲ ಎಂಬ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷ ಆಗ ಹುಟ್ಟಿರಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದೇ ಕಾಂಗ್ರೆಸ್ ಪಕ್ಷ. ಅವರಿಗೆ ದೇಶದ ಸ್ವಾತಂತ್ರ್ಯ ಬಗ್ಗೆ ಗೊತ್ತಿಲ್ಲ. ಬಿಜೆಪಿಗೆ ಸ್ವಾತಂತ್ರ್ಯ ಇತಿಹಾಸ ಗೊತ್ತಿಲ್ಲ. ಇಂದಿರಾ ಗಾಂಧಿ ಬಗ್ಗೆ ಅವರು ಹೇಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಚಿವ ಹೆಚ್.ಕೆ ಪಾಟೀಲ್, ಮಾಜಿ ಸಿಎಂ ವೀರಪ್ಪ ಮೋಯ್ಲಿ ಆರ್.ವಿ.ದೇಶಪಾಂಡೆ, ಹೆಚ್.ಎಂ ರೇವಣ್ಣ, ಬಿ.ಕೆ ಹರಿಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತಿ ಇದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:08 pm, Mon, 30 September 24