AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎತ್ತಿನಹೊಳೆ ನೆಪದಲ್ಲಿ ಪರಮೇಶ್ವರ್, ಡಿಕೆ ಶಿವಕುಮಾರ್ ಭೇಟಿ: ಕುತೂಹಲಕ್ಕೆ ಕಾರಣವಾದ ಸಿಎಂ ಸ್ಥಾನ ಆಕಾಂಕ್ಷಿಗಳ ಮಾತುಕತೆ

ಒಂದೆಡೆ ಸಿಎಂ ಸಿದ್ದರಾಮಯ್ಯಗೆ ಮುಡಾ ಹಗರಣದ ಉರುಳು ಬಿಗಿಯಾಗುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿದೆ. ಸಿಎಂ ಸ್ಥಾನದ ಆಕಾಂಕ್ಷಿಗಳು ಪದೇ ಪದೇ ಭೇಟಿಯಾಗಿ ಸಮಾಲೋಚನೆ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ. ಈ ಮಧ್ಯೆ, ಎತ್ತಿನಹೊಳೆ ನೆಪದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಭೇಟಿಯಾಗಿದ್ದಾರೆ.

ಎತ್ತಿನಹೊಳೆ ನೆಪದಲ್ಲಿ ಪರಮೇಶ್ವರ್, ಡಿಕೆ ಶಿವಕುಮಾರ್ ಭೇಟಿ: ಕುತೂಹಲಕ್ಕೆ ಕಾರಣವಾದ ಸಿಎಂ ಸ್ಥಾನ ಆಕಾಂಕ್ಷಿಗಳ ಮಾತುಕತೆ
ಪರಮೇಶ್ವರ್ ನಿವಾಸಕ್ಕೆ ಆಗಮಿಸಿದ ಡಿಕೆ ಶಿವಕುಮಾರ್
Anil Kalkere
| Updated By: Ganapathi Sharma|

Updated on:Sep 30, 2024 | 10:22 AM

Share

ಬೆಂಗಳೂರು, ಸೆಪ್ಟೆಂಬರ್ 30: ಕರ್ನಾಟಕ ರಾಜಕೀಯದಲ್ಲಿ ಮುಡಾ ಹಗರಣದ ಸದ್ದು ಜೋರಾಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ಸಂದರ್ಭ ಬಂದಲ್ಲಿ ಹೊಸ ಸಿಎಂ ಯಾರಾಗಲಿದ್ದಾರೆ ಎಂಬ ಚರ್ಚೆಯೂ ಜೋರಾಗಿದೆ. ಇಂಥ ಸಂದರ್ಭದಲ್ಲೇ ಎತ್ತಿನಹೊಳೆ ಯೋಜನೆ ನೆಪದಲ್ಲಿ ಸಿಎಂ ಹುದ್ದೆಯ ಆಕಾಂಕ್ಷಿಗಳಾದ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಕೆಲವೇ ದಿನಗಳ ಹಿಂದಷ್ಟೇ, ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್​ನ ಅನೇಕ ನಾಯಕರು ಸಿಎಂ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿ ಹೇಳಿಕೆಗಳನ್ನು ನೀಡಿದ್ದಾರೆ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ ಎನ್ನುತ್ತಲೇ ‘ಕೈ’ ನಾಯಕರು ತಾವೂ ಸಿಎಂ ಸ್ಥಾನದ ಆಕಾಂಕ್ಷಿ ಎನ್ನುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್, ಸಚಿವ ಸತೀಶ್ ಜಾರಕಿಹೊಳಿ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳು ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಡಿಕೆ ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದೀಗ ಗೃಹ ಸಚವರನ್ನು ಡಿಸಿಎಂ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

ಕೆಲವು ಮೂಲಗಳ ಪ್ರಕಾರ, ಉಭಯ ನಾಯಕರ ಭೇಟಿ ಹಾಗೂ ಸಮಾಲೋಚನೆಗೆ ಎತ್ತಿನಹೊಳೆ ನೆಪ ಮಾತ್ರ. ಡಿಕೆ ಶಿವಕುಮಾರ್ ಹಾಗೂ ಪರಮೇಶ್ವರ್ ಭೇಟಿ ಹಿಂದಿನ ಅಸಲಿ ಕಾರಣ ಬೇರೆಯೇ ಇದೆ ಎನ್ನಲಾಗುತ್ತಿದೆ.

ಡಿಕೆ ಶಿವಕುಮಾರ್ ಹಾಗೂ ಪರಮೇಶ್ವರ್ ಭೇಟಿ ವೇಳೆ ಮುಂದಿನ ರಾಜಕೀಯ ನಡೆಗಳ ಕುರಿತು ಚರ್ಚೆಯಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕುತೂಹಲಕ್ಕೆ ಕಾರಣವಾಗುತ್ತಿರುವ ಕಾಂಗ್ರೆಸ್ ನಾಯಕರ ನಡೆ

ಸಿಎಂ ರೇಸ್‌ನಲ್ಲಿರುವ ನಾಯಕರೇ ಪದೇ ಪದೇ ಭೇಟಿಯಾಗಿ ಚರ್ಚೆ ನಡೆಸುತ್ತಿರುವುದು ರಾಜ್ಯ ಕಾಂಗ್ರೆಸ್​​ನಲ್ಲಿ ಪರ್ಯಾಯ ವೇದಿಕೆ ಸೃಷ್ಟಿಯಾಗುತ್ತಿದೆಯಾ ಎಂಬ ಅನುಮಾನ, ಕುತೂಹಲಗಳನ್ನು ಸೃಷ್ಟಿಸುತ್ತಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಲೆದಂಡವಾಗಬಹುದು ಎಂಬ ಲೆಕ್ಕಾಚಾರದಲ್ಲೇ ಸಿಎಂ ಸ್ಥಾನದ ಆಕಾಂಕ್ಷಿಗಳ ಭೇಟಿ ನಡೆಯುತ್ತಿವೆ ಎನ್ನಲಾಗುತ್ತಿದೆ. ಈ ಬೆಳವಣಿಗೆ ಸದ್ಯ ಕಾಂಗ್ರೆಸ್ ಪಾಳೆಯದಲ್ಲೇ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ಮುಡಾ ಹಗರಣ: ಇಂದಿನಿಂದ ಲೋಕಾಯುಕ್ತ ಅಸಲಿ ತನಿಖೆ ಶುರು, ತನಿಖಾ ಪ್ರಕ್ರಿಯೆ ಹೇಗಿರಲಿದೆ ಗೊತ್ತೇ?

ಏತನ್ಮಧ್ಯೆ, ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಸಂಬಂಧ ಲೋಕಾಹಯುಕ್ತ ತನಿಖೆ ಅಧಿಕೃತವಾಗಿ ಇಂದಿನಿಂದ ಆರಂಭವಾಗಲಿದೆ. ಮತ್ತೊಂದೆಡೆ, ದೂರುದಾರ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೂ ಸಿಎಂ ವಿರುದ್ಧ ದೂರು ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:21 am, Mon, 30 September 24