ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ? ಮೊಟ್ಟೆ ರಹಸ್ಯ ಬಿಚ್ಚಿಟ್ಟ ತಜ್ಞ ವೈದ್ಯರು, ಎಲ್ಲಾ ಗೊಂದಲಗಳಿಗೆ ತೆರೆ!

ಮೊಟ್ಟೆ ಮೇಲೆ ಸದ್ಯ ಅನುಮಾನ ‌ಮೂಡಿದೆ. ಮೊಟ್ಟೆಗಳಲ್ಲಿ AOZ (ನೈಟ್ರೋಫ್ಯುರಾನ್) ಎಂಬ ಕ್ಯಾನ್ಸರ್ ಕಾರಕ ಅಂಶ ಪತ್ತೆ ಎಂಬ ಸುದ್ದಿ ವೈರಲ್ ಆಗಿದೆ. ಹೀಗಾಗಿ ಹೆದರಿದ ಜನರು ಮೊಟ್ಟೆ ಸೇವಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಆದ್ರೆ, ಇದುವರೆಗೂ ಅಧಿಕೃತವಾಗಿ ಯಾವುದೇ ಅಂಶ ಬೆಳಕಿಗೆ ಬಂದಿಲ್ಲ. ಹೀಗಾಗಿ ಜನ ಗೊಂದಲದಲ್ಲಿದ್ದಾರೆ. ಮೊಟ್ಟೆ ಸೇವಿಸೋದ್ರಿಂದ ಆರೋಗ್ಯಕ್ಕೆ ಕಂಟಕನಾ? ಮೊಟ್ಟೆಯಲ್ಲಿ ಕ್ಯಾನ್ಸರ್​ ಕಾರಕ ಪತ್ತೆಯಾಗಿದ್ಯಾ? ಮೊಟ್ಟೆ ತಿಂದರೇ ಮಾರಕ ಕ್ಯಾನ್ಸರ್​ ಬರುತ್ತಾ? ಹೀಗೊಂದು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದ್ದು, ಇದರ ನಡುವೆ ಇದೀಗ ಕ್ಯಾನ್ಸರ್ ತಜ್ಞರು, ಮೊಟ್ಟೆ ಕ್ಯಾನ್ಸರ್ ರಹಸ್ಯ ಬಿಚ್ಚಿಟ್ಟಿದ್ದಾರೆ.

ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ? ಮೊಟ್ಟೆ ರಹಸ್ಯ ಬಿಚ್ಚಿಟ್ಟ ತಜ್ಞ ವೈದ್ಯರು, ಎಲ್ಲಾ ಗೊಂದಲಗಳಿಗೆ ತೆರೆ!
ಮೊಟ್ಟೆ
Edited By:

Updated on: Dec 16, 2025 | 7:48 PM

ಬೆಂಗಳೂರು, (ಡಿಸೆಂಬರ್ 16): ಕಳೆದೊಂದು ಆರೇಳು ತಿಂಗಳಿನಿಂದ ಬರೀ‌ ಆಹಾರದ್ದೇ (Food) ಚರ್ಚೆ. ಕಾಟನ್ ಕ್ಯಾಂಡಿ‌ ಕಲರ್ ಬ್ಯಾನ್ ನಿಂದ ಶುರುವಾದ ಚರ್ಚೆ ಇಡ್ಲಿ ತನಕ ಬಂದು ನಿಂತಿದೆ. ಹೀಗಾಗಿ ಏನು ತಿನ್ಬೇಕು, ಏನ್ ಬಿಡೋದು ಎನ್ನುವ ಗೊಂದಲದಲ್ಲಿರುವ ಜನರಿಗೆ ಇದೀಗ ಪೆಟ್ರೊಟಿನ್​ ಅಂಶವಿರುವ ‌ಮೊಟ್ಟೆ (Egg) ಶಾಕ್ ಎದುರಾಗಿದೆ. ಹೌದು.. ಮೊಟ್ಟೆಯಲ್ಲಿ AOZ ಅಂಶ ಇದೆ, ಇದು ಕ್ಯಾನ್ಸರ್  (cancer) ಕಾರಕ ಎನ್ನುವ ಒಂದು ವಿಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮೊಟ್ಟೆ ಸೇವಿಸೋದ್ರಿಂದ ಆರೋಗ್ಯಕ್ಕೆ ಕಂಟಕನಾ? ಮೊಟ್ಟೆಯಲ್ಲಿ ಕ್ಯಾನ್ಸರ್​ ಕಾರಕ ಪತ್ತೆಯಾಗಿದ್ಯಾ? ಮೊಟ್ಟೆ ತಿಂದರೇ ಮಾರಕ ಕ್ಯಾನ್ಸರ್​ ಬರುತ್ತಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಹೀಗಾಗಿ ಮೊಟ್ಟೆ ಸೇವನೆಗೆ ಜನ ಹಿಂದೆ ಮುಂದೆ ನೋಡುವಂತಾಗಿದೆ. ಆದ್ರೆ, ಬೆಂಗಳೂರಿನ ಪ್ರಸಿದ್ಧ ‌ಕ್ಯಾನ್ಸರ್ ಆಸ್ಪತ್ರೆ ವೈದ್ಯರ ಪ್ರಕಾರ ಮೊಟ್ಟೆ ಸೇಪ್, ಯಾವುದೇ ಆತಂಕ ಬೇಡ. ಮೊಟ್ಟೆ ಸೇವಿಸುವುದರಿಂದ ಯಾವುದೇ ಕ್ಯಾನ್ಸರ್ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೊಟ್ಟೆ ಸೇಫ್ ಎಂದ ಕ್ಯಾನ್ಸರ್ ತಜ್ಞರು..!

ಸದ್ಯ ಮೊಟ್ಟೆಯದ್ದೇ ಚರ್ಚೆಯಾಗುತ್ತಿರುವುದರಿಂದ ಈ ಬಗ್ಗೆ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ದೇಶಕ ಡಾ.ನವೀನ್ ಮಾತನಾಡಿದ್ದು, ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರುತ್ತೆ ಎನ್ನುವುದು ಸುಳ್ಳು. ಮೊಟ್ಟೆ ಸೇಫ್, ಮೊಟ್ಟೆಯಿಂದ ಕಾಯಿಲೆ ಬರಲ್ಲ. ಅದರಲ್ಲೂ ಕ್ಯಾನ್ಸರ್ ಬರಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ಮೂಲಕ ಜನರ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ನೋಡಿ: ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಸೋಶಿಯಲ್​​ ಮೀಡಿಯಾಗಳಲ್ಲೀಗ ಇದೇ ಚರ್ಚೆ!

ಈ ಹಿಂದೆ ಪೌಲ್ಟ್ರಿಗಳಲ್ಲಿ ಕೋಳಿಗಳಿಗೆ ಆಂಟಿಬಯೋಟಿಕ್ ಯೂಸ್ ಮಾಡಲಾಗುತ್ತಿತ್ತು. ನೈಟ್ರೋಫ್ಯೂರಾನ್ ತುಂಬಾ ಹಿಂದೆ ಬಳಕೆ ಇತ್ತು ಎನ್ನಲಾಗಿತ್ತು. ಯೂರಿನರಿ ಇನ್ಫೆಕ್ಷನ್ ಟ್ರೀಟ್ಮೆಂಟ್ ಗೆ ಇದರ ಬಳಕೆ ಮಾಡಲಾಗುತ್ತಿತ್ತು. ಆದ್ರೆ, ಈಗ ನೈಟ್ರೋಫ್ಯೂರಾನ್ ಬ್ಯಾನ್ ಆಗಿದೆ. ನೈಟ್ರೋಫ್ಯೂರಾನ್ ರೋಗನಿರೋಧಕವಾಗಿ ಬಳಕೆ ಆಗುತ್ತಿಲ್ಲ. ಹೀಗಾಗಿ ಇದರ ಅಪಾಯ ಕಡಿಮೆ ಎಂದು ಕ್ಯಾನ್ಸರ್ ತಜ್ಞ ಡಾ.ನವೀನ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಇದೇ ವಿಚಾರವಾಗಿ ಕಿದ್ವಾಯಿ ಆಸ್ಪತ್ರೆಯ ಆಂಕಾಲಜಿಸ್ಟ್​ ಡಾ.ಸುರೇಶ್ ಬಾಬು ಮಾತನಾಡಿ, FSSAI ಪ್ರಕಾರ ನೈಟ್ರೋಫ್ಯೂರಾನ್ ಶೇ.1ರರ ವರೆಗೆ ಇದ್ರೆ ಸೇಫ್. ವೈರಲ್ ಆದ ರಿಪೋರ್ಟ್ ಪ್ರಕಾರ AOZ 0.7% ರಷ್ಟಿದೆ. ‌ಆದರೆ ಇದು ಕೋಳಿಯಿಂದ ಹರಡಿತೋ ಅಥವಾ ಕಂಟ್ಯಾಮಿನೇಟ್ ಆಯಿತೋ ಎಂಬ ಪ್ರಶ್ನೆ ಮೂಡಿದೆ. ನೈಟ್ರೋಫ್ಯೂರಾನ್ ಆಹಾರದಲ್ಲಿ ೦% ಇದ್ದರೆ ಉತ್ತಮ. ಸದ್ಯಕ್ಕೆ ಮೊಟ್ಟೆ ಬಗ್ಗೆ ಭೀತಿ ಬೇಡ. ಮೊಟ್ಟೆ ತಿಂದರೆ ಕ್ಯಾನ್ಸರ್ ಬರಲ್ಲ ಎಂದು ಎಂದು ಹೇಳಿದರು. ಈ ಮೂಲಕ ಜನರಲ್ಲಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಆಹಾರ ತಜ್ಞೆ ಹೇಳಿದ್ದೇನು?

ಈ ಬಗ್ಗೆ ಆಹಾರ ತಜ್ಞೆ ಕೀರ್ತಿ ಹಿರಿಸಾವೆ ಮಾತನಾಡಿ, ಒಂದು ಮೊಟ್ಟೆ ಸ್ಯಾಂಪಲ್ ಟೆಸ್ಟ್ ಗೆ ಒಳಪಡಿಸಿದಾಗ AOZ ಅಂಶ ಪತ್ತೆಯಾಗಿರೋದು ತಿಳಿದಿದೆ. ಆಂಟಿಬಯೋಟಿಕ್ ಅಂಶಗಳು ಮೊಟ್ಟೆಯಲ್ಲಿ ಕಂಡು‌ಬಂದಿದೆ. AOZ ಅಂದ್ರೆ ಆಂಟಿಬಯೋಟಿಕ್ ‌ನಲ್ಲಿ‌ ಇರೋ ಒಂದು ಅಣುಅಂಶ. ಇದು 0.7 ನಿಂದ 1 ವರೆಗೂ ಇರಬಹುದು ಅಂತಿದೆ. ಈಗಿನ ಸ್ಯಾಂಪಲ್ ರಿಪೋರ್ಟ್ ನಲ್ಲಿ 0.7 ಕಂಡುಬಂದಿದೆ. ಆದರೆ AOZ ನಿಂದ ಕ್ಯಾನ್ಸರ್ ಬರುತ್ತೆ ಅಂತ ಎಲ್ಲೂ‌ ಪ್ರೂವ್ ಆಗಿಲ್ಲ. AOZ ಪ್ರಾಣಿಗಳಲ್ಲಿ ಉದಾಹರಣೆಗೆ ಕೋಳಿ, ಮೊಟ್ಟೆ, ಕುರಿಯಲ್ಲಿ ಕಂಡುಬಂದರೆ ಅದು ಕ್ಯಾನ್ಸರ್ ಕಾರಕ ಹೌದು. ಇಂತಹ ಪ್ರಾಣಿಗಳ ಆಹಾರದಿಂದ ಮಾನವನ ದೇಹಕ್ಕೆ ಪರಿಣಾಮ ಉಂಟಾಗುತ್ತದೆ. ಜೀನೋಟಾಕ್ಸಿಸ್ ರಿಲೀಸ್ ಆಗುವ ಅಪಾಯ ಇದೆ ಎಂದು ಹೇಳಿದ್ದಾರೆ.

ಟೆಸ್ಟ್​​ಗೆ ಕಳುಹಿಸಿರುವ ಆರೋಗ್ಯ ಇಲಾಖೆ

ಮೊಟ್ಟೆಯಲ್ಲಿ ಕಾನ್ಸರ್ ಕಾರಕ ಅಂಶ ಪತ್ತೆ ಚರ್ಚೆ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಅರ್ಲಟ್​ ಆಗಿದ್ದು, ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿಧ ನಗರಲ್ಲಿನ ಮೊಟ್ಟೆಗಳನ್ನು ಸಂಗ್ರಹಣೆ ಮಾಡಿದ್ದು, ಟೆಸ್ಟ್​​ ಮಾಡಲು ಲ್ಯಾಬ್​​ಗೆ ಕಳುಹಿಸಿದೆ. ಮಂದಿನ ವಾರದಲ್ಲಿ ಮೊಟ್ಟೆಗಳ ವರದಿ ಆರೋಗ್ಯ ಇಲಾಖೆಯ ಕೈ ಸೇರಲಿದ್ದು, ಆಗ ಮೊಟ್ಟೆ ಎಷ್ಟು ಸೇಫ್ ಎನ್ನುವುದು ಸ್ಪಷ್ಟವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ