ಮೀಸಲಾತಿ ನೀಡದಿದ್ದರೆ ಮಾಡು ಇಲ್ಲವೆ ಮಡಿ ಹೋರಾಟ: ವಿಜಯಾನಂದ ಕಾಶಪ್ಪನವರ್
ಮೀಸಲಾತಿ ನೀಡದಿದ್ದರೆ ಐದನೇ ಹಂತದ ಹೋರಾಟ ನಡೆಯಲಿದ್ದು, ಇದು ಮಾಡು ಇಲ್ಲವೆ ಮಡಿ ಹೋರಾಟ ಆಗಿರಲಿದೆ ಎಂದು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
ಬಾಗಲಕೋಟೆ: ಸರ್ಕಾರ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿರುವುದನ್ನು ಸ್ವಾಗತಿಸುತ್ತೇನೆ. ಇದು ನಮಗೂ ಸಂತಸ ತಂದಿದೆ. ಆದರೆ ಅದೇ ರೀತಿ ಪಂಚಮಸಾಲಿ ಸಮುದಾಯಕ್ಕೂ 2ಎ ಮೀಸಲಾತಿ ನೀಡಬೇಕು. ಈ ಬಗ್ಗೆಯೂ ಸರ್ವ ಪಕ್ಷ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು ಎಂದು ಪಂಚಮಸಾಲಿ ಸಮುದಾಯ (Panchamasali Community)ದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಪಂಚಮಸಾಲಿ ಮೀಸಲಾತಿ ಹೋರಾಟದ ಮುಖ್ಯಸ್ಥ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ಮಾತನಾಡಿದ ಅವರು, ನಿರಂತರವಾಗಿ ಎರಡು ವರ್ಷಗಳಿಂದ ಪಂಚಮಸಾಲಿ ಸ್ವಾಮೀಜಿ ಬಸವಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ (2A Reservation)ಗಾಗಿ ಹೋರಾಟ ನಡೆಯುತ್ತಿದೆ. ಎಲ್ಲ ಲಿಂಗಾಯತ ಒಳಸಮುದಾಯವನ್ನು ಕೇಂದ್ರವು ಒಬಿಸಿ ಸೇರ್ಪಡೆಗೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದೇವೆ. ಈ ಬಗ್ಗೆ ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ಸರ್ವ ಪಕ್ಷ ಸಭೆ ಕರೆದು ನಮಗೂ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ಅಕ್ಟೋಬರ್ 23 ರಂದು ಕಿತ್ತೂರ ಚೆನ್ನಮ್ಮನ ಜಯಂತಿ ಹಾಗೂ ವಿಜಯೋತ್ಸವ ಬಹಿಷ್ಕಾರ ಹಾಕಬೇಕಾಗುತ್ತದೆ. ಅದಲ್ಲದೇ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ 20 ಲಕ್ಷ ಜನ ಸೇರಿಸಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಂಚಮಸಾಲಿ ಮೀಸಲಾತಿ ಬಗ್ಗೆ ಪದೇಪದೆ ಭರವಸೆ ನೀಡುತ್ತಿದೆ. ಮೀಸಲಾತಿ ವಿಚಾರದಲ್ಲಿ ನಮಗೆ ನಾಲ್ಕು ಬಾರಿ ಈ ಸರಕಾರ ಸುಳ್ಳು ಹೇಳಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಿರಬಹುದು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಿರಬಹುದು, ಇಬ್ಬರುಕೂಡ ಮಾತು ಕೊಟ್ಟು ತಪ್ಪಿದ್ದಾರೆ. ಈ ಸರ್ಕಾರಕ್ಕೆ ಆತ್ಮಸಾಕ್ಷಿ ಇದ್ದರೆ ಮೀಸಲಾತಿ ಕೊಟ್ಟು ತೋರಿಸಲಿ ಎಂದು ಸವಾಲೆಸೆದರು.
ಮುಂದೆ ನಡೆಯುವ ನಮ್ಮ ಹೋರಾಟ ಕೊನೆಯ ಹೋರಾಟವಾಗಿರಲಿದೆ. ಈಗಾಗಲೇ ನಾಲ್ಕನೇ ಹಂತದ ಪ್ರತಿಭಟನೆ ನಡೆದಿದೆ. ಐದನೇ ಹಂತದ ಹೋರಾಟ ಅಂತಿಮವಾಗಿರುತ್ತದೆ. ಈ ಹೋರಾಟವು ಮಾಡು ಇಲ್ಲವೆ ಮಡಿಯಾಗಿರಲಿದೆ. ಮಡಿಯುವ ಹೋರಾಟ ಮೀಸಲಾತಿ ಪಡೆದು ಮಡಿಯುವ ಹೋರಾಟವಾಗುತ್ತದೆ ಎಂದು ಹೇಳಿಕೆ ನೀಡಿದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ