ಹಣ್ಣು, ಬಿಸ್ಕತ್ತು ಇಟ್ಟು ಮಗನಂತೆ ಸಾಕಿದ ನಾಯಿಯ ತಿಥಿ ಮಾಡಿದ ಹಾವೇರಿ ದಂಪತಿ; ಟೈಸನ್​ ನೆನೆದು ಕಣ್ಣೀರು

ಶ್ವಾನದ ಭಾವಚಿತ್ರ ಮಾಡಿಸಿ ಹಣ್ಣು, ಬಿಸ್ಕಿಟ್ ಸೇರಿದಂತೆ ಶ್ವಾನ ತಿನ್ನುತ್ತಿದ್ದ ತಿನಿಸುಗಳನ್ನು ಫೋಟೋದ ಮುಂದಿಟ್ಟು ಪೂಜೆ ಸಲ್ಲಿಸಿದ್ದು, ಅರ್ಚಕರನ್ನು ಕರೆಯಿಸಿ ಮನೆಯ ಮಗನಂತಿದ್ದ ಶ್ವಾನಕ್ಕೆ ತಿಥಿ ಕಾರ್ಯ ನೆರವೇರಿಸಿದ್ದಾರೆ. ಶ್ವಾನದ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ವೇಳೆ ದಂಪತಿ ಟೈಸನ್​ನ ಒಡನಾಟ ನೆನೆದು ಕಣ್ಣೀರು ಹಾಕಿದ್ದಾರೆ.

ಹಣ್ಣು, ಬಿಸ್ಕತ್ತು ಇಟ್ಟು ಮಗನಂತೆ ಸಾಕಿದ ನಾಯಿಯ ತಿಥಿ ಮಾಡಿದ ಹಾವೇರಿ ದಂಪತಿ; ಟೈಸನ್​ ನೆನೆದು ಕಣ್ಣೀರು
ಟೈಸನ್​ ನೆನೆದು ಕಣ್ಣೀರು
Follow us
TV9 Web
| Updated By: preethi shettigar

Updated on: Jul 13, 2021 | 12:45 PM

ಹಾವೇರಿ: ಮದುವೆಯಾಗಿ ಹನ್ನೊಂದು ವರ್ಷಗಳು ಕಳೆದಿದ್ದರು ದಂಪತಿಗೆ ಈವರೆಗೂ ಸಂತಾನ ಪ್ರಾಪ್ತಿಯಾಗಿಲ್ಲ. ಮಕ್ಕಳಾಗದಿರುವ ನೋವು ಮರೆಯೋ ಸಲುವಾಗಿ ದಂಪತಿ ಲ್ಯಾಬ್ರಡಾರ್ ತಳಿಯ ಶ್ವಾನವೊಂದನ್ನ ಸಾಕಿದ್ದರು. ಮಕ್ಕಳಿಲ್ಲದ ನಮಗೆ ಈ ನಾಯಿಯೇ ಮಗು ಎಂದು ಭಾವಿಸಿದ್ದರು. ಎಲ್ಲಿಯೇ ಹೋದರು ಇದನ್ನು ಕರೆದುಕೊಂಡು ಹೋಗುತ್ತಿದ್ದರು. ದಂಪತಿಯ ಕಾರಿನಲ್ಲಿ ಶ್ವಾನ ಮಗನಂತೆಯೇ ಸದಾ ಇರುತ್ತಿತ್ತು. ಆದರೆ ಕಳೆದ‌ ಮೂರು ದಿನಗಳ ಹಿಂದೆ ಪ್ರೀತಿಯ ಶ್ವಾನ ಅನಾರೋಗ್ಯದಿಂದ ಮೃತಪಟ್ಟಿತ್ತು. ತಮ್ಮ ಮಗ ಎಂದು ತಿಳಿದುಕೊಂಡಿದ್ದ ಶ್ವಾನದ ಅಗಲಿಕೆಯಿಂದ ನೊಂದಿದ ಈ ದಂಪತಿ ಮನುಷ್ಯರಿಗೆ ಮಾಡುವಂತೆ ತಿಥಿ ಕಾರ್ಯ ಮಾಡಿದ್ದಾರೆ.

ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಪ್ರಶಾಂತ ಕುಮಾರ ಮತ್ತು ಪಾರ್ವತಿ ದಂಪತಿಯ ನಿವಾಸದಲ್ಲಿ ಕಳೆದ ಮೂರು ದಿನಗಳಿಂದ ನೀರವ ಮೌನ ಇದಕ್ಕೆ ಕಾರಣ ಮಗನಂತೆ ಸಾಕಿದ ನಾಯಿ ಮೃತಪಟ್ಟಿರುವುದೇ ಆಗಿದೆ. ಪಾರ್ವತಿ ಸವಣೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಪನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಪಾರ್ವತಿಯ ಪತಿ ಪ್ರಶಾಂತ ಕುಮಾರ ಫಾರ್ಮಸಿ ಮಾಡಿದ್ದಾರೆ. ಪಾರ್ವತಿ ಮತ್ತು ಪ್ರಶಾಂತ ಕುಮಾರಗೆ ಮದುವೆಯಾಗಿ ಹನ್ನೊಂದು ವರ್ಷಗಳು ಕಳೆದಿವೆ. ಮಕ್ಕಳಾಗಿಲ್ಲ ಎನ್ನುವ ನೋವಿನಿಂದ ಇವರು ಕೊರಗುತ್ತಿದ್ದರು. ಈ ನೋವು ಮರೆಯುವ ಸಲುವಾಗಿ ಈ ದಂಪತಿ ಲ್ಯಾಬ್ರಡಾರ ತಳಿಯ ಶ್ವಾನವೊಂದನ್ನು ಸಾಕಿದ್ದು, ಅದಕ್ಕೆ ಪ್ರೀತಿಯಿಂದ ಟೈಸನ್ ಎಂದು ನಾಮಕರಣ ಮಾಡಿದ್ದರು.

ಶ್ವಾನ ಕೂಡ ದಂಪತಿಗೆ ತಂದೆ ತಾಯಿಯ ಸ್ಥಾನ ನೀಡಿದಂತೆಯೇ ವರ್ತಿಸುತ್ತಿತ್ತು. ಆದರೆ ಟೈಸನ್ ಹೆಸರಿನ ಶ್ವಾನ ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದೆ. ಸಾಕ್ಷಾತ್ ತಮ್ಮ ಮಗನನ್ನೆ ಕಳೆದುಕೊಂಡಂತೆ ಪ್ರಶಾಂತ ಕುಮಾರ ಮತ್ತು ಅವರ ಪತ್ನಿ ಪಾರ್ವತಿ ಕಣ್ಣೀರು ಹಾಕಿದ್ದು, ಇಂದು ತಿಥಿ ಕಾರ್ಯ ನೆರವೆರಿಸಿದ್ದಾರೆ.

ಆಗಾಗ ಟೈಸನ್​ಗೆ ಹೊಸ ಹೊಸ ಬಟ್ಟೆ ತಂದು ಹಾಕುತ್ತಿದ್ದೇವು. ವರ್ಷಕ್ಕೊಮ್ಮೆ ಟೈಸನ್ ಬರ್ತ್ ಡೇ ಕೂಡ ಮಾಡುತ್ತಿದ್ದೆವು. ಟೈಸನ್ ಮನೆಯ ಮಗನ ಪ್ರೀತಿ ಕೊಟ್ಟಿತ್ತು. ಟೈಸನ್​ನ ಪ್ರೀತಿ ನೋಡಿ ಮಕ್ಕಳಿಲ್ಲ ಎನ್ನುವ ನೋವು ಮರೆತಿದ್ದೇವು. ಆದರೆ ಅನಾರೋಗ್ಯದಿಂದ ಮೂರು ದಿನಗಳ ಹಿಂದೆ ಶ್ವಾನ ಮೃತಪಟ್ಟಿದೆ. ಹೀಗಾಗಿ ಮನೆಯಲ್ಲಿ ಯಾರಾದರು ಮೃತಪಟ್ಟಾಗ ಮಾಡುವಂತೆಯೇ ಶ್ವಾನಕ್ಕೆ ತಿಥಿ ಕಾರ್ಯ ನೆರವೇರಿಸುತ್ತಿದ್ದೇವೆ ಎಂದು ಶ್ವಾನದ ಮಾಲೀಕ ಪ್ರಶಾಂತ ಕುಮಾರ ತಿಳಿಸಿದ್ದಾರೆ.

ಶ್ವಾನದ ಭಾವಚಿತ್ರ ಮಾಡಿಸಿ ಹಣ್ಣು, ಬಿಸ್ಕಿಟ್ ಸೇರಿದಂತೆ ಶ್ವಾನ ತಿನ್ನುತ್ತಿದ್ದ ತಿನಿಸುಗಳನ್ನು ಫೋಟೋದ ಮುಂದಿಟ್ಟು ಪೂಜೆ ಸಲ್ಲಿಸಿದ್ದು, ಅರ್ಚಕರನ್ನು ಕರೆಯಿಸಿ ಮನೆಯ ಮಗನಂತಿದ್ದ ಶ್ವಾನಕ್ಕೆ ತಿಥಿ ಕಾರ್ಯ ನೆರವೇರಿಸಿದ್ದಾರೆ. ಶ್ವಾನದ ತಿಥಿಗೆ ದಂಪತಿಯ ಸಂಬಂಧಿಕರು ಕೂಡ ಆಗಮಿಸಿದ್ದು, ಶ್ವಾನದ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ವೇಳೆ ದಂಪತಿ ಟೈಸನ್​ನ ಒಡನಾಟ ನೆನೆದು ಕಣ್ಣೀರು ಹಾಕಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯರ ನಡುವೆ ಸಂಬಂಧಗಳೆ ಸರಿ ಇಲ್ಲ. ಅಂಥದರಲ್ಲಿ ಈ ದಂಪತಿ ಪ್ರೀತಿಯಿಂದ‌ ಸಾಕಿದ್ದ ಶ್ವಾನ ಮೃತಪಟ್ಟಿದ್ದಕ್ಕೆ ಶ್ವಾನದ ತಿಥಿ ಕಾರ್ಯ ನೆರವೇರಿಸಿದ್ದಾರೆ. ಶ್ವಾನದ ತಿಥಿಗೆ ಆಗಮಿಸಿದ ದಂಪತಿಯ ಸಂಬಂಧಿಕರು ಸಹ ಶ್ವಾನದ ಮೇಲಿನ ದಂಪತಿಯ ಪ್ರೀತಿ ನೆನೆದು ಭಾವೋದ್ವೇಗಕ್ಕೆ ಒಳಗಾದರು.

ಇದನ್ನೂ ಓದಿ: ವಯೋಸಹಜ ಕಾಯಿಲೆಯಿಂದ ಸಾಕು ನಾಯಿ ಸಾವು, ದುಃಖ ಹಂಚಿಕೊಂಡ ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಹಾವೇರಿಯಲ್ಲಿ ಶ್ವಾನಕ್ಕೆ ಹುಟ್ಟುಹಬ್ಬದ ಸಂಭ್ರಮ; ಕೆಕ್​ ಕತ್ತರಿಸಿ ಕನಕನಿಗೆ ಶುಭಕೋರಿದ ಪೊಲೀಸರು