AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚರಂಡಿ ಕಾಮಗಾರಿ ವೇಳೆ ಪಾಯಕ್ಕೆ ಪೆಟ್ಟು; ಬೆಂಗಳೂರಿನಲ್ಲಿ ರಸ್ತೆಗೆ ವಾಲಿದ ಮೂರು ಅಂತಸ್ತಿನ ಕಟ್ಟಡ

Bangalore News: ಒಂದೆಡೆ ಬೆಂಗಳೂರಿನಲ್ಲಿ ಮಳೆಯೂ ಸುರಿಯುತ್ತಿದ್ದು, ಇದೀಗ ಒಳಚರಂಡಿ ಕಾಮಗಾರಿ ವೇಳೆ ಪಾಯದ ಕಲ್ಲು ತೆಗೆದ ಕಾರಣ ಕಟ್ಟಡ ವಾಲಿರುವುದು ಸುತ್ತಮುತ್ತಲಿನವರ ನಿದ್ದೆಗೆಡಿಸಿದೆ. ರಾಜಾಜಿನಗರದ 6ನೇ ಬ್ಲಾಕ್​ನಲ್ಲಿರುವ ಕಟ್ಟಡ ವಾಲುತ್ತಿದ್ದಂತೆಯೇ ಮನೆಯ ಮಾಲೀಕ ಗೋವಿಂದರಾಜು ಕುಟುಂಬವನ್ನು ಅಲ್ಲಿಂದ ಖಾಲಿ ಮಾಡಿಸಲಾಗಿದೆ.

ಚರಂಡಿ ಕಾಮಗಾರಿ ವೇಳೆ ಪಾಯಕ್ಕೆ ಪೆಟ್ಟು; ಬೆಂಗಳೂರಿನಲ್ಲಿ ರಸ್ತೆಗೆ ವಾಲಿದ ಮೂರು ಅಂತಸ್ತಿನ ಕಟ್ಟಡ
ವಾಲಿರುವ ಮೂರು ಅಂತಸ್ತಿನ ಕಟ್ಟಡ
TV9 Web
| Updated By: Digi Tech Desk|

Updated on:Jul 13, 2021 | 1:23 PM

Share

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿ ಒಳಚರಂಡಿ ಕಾಮಗಾರಿ ವೇಳೆ ಪಾಯಕ್ಕೆ ಹೊಡೆತ ಬಿದ್ದು ಮೂರಂತಸ್ತಿನ ಕಟ್ಟಡ ವಾಲಿರುವ ಘಟನೆ ನಡೆದಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್​ಎಸ್​ಬಿ – BWSSB) ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಮನೆಯ ಪಾಯದ (Foundation) ಕಲ್ಲೊಂದನ್ನು ಕಿತ್ತಿದ್ದಾರೆ ಎನ್ನಲಾಗಿದ್ದು, ಅದರ ಪರಿಣಾಮ ಗೋವಿಂದರಾಜು ಎಂಬುವವರಿಗೆ ಸೇರಿದ ಮೂರು ಅಂತಸ್ತಿನ ಬೃಹತ್​ ಕಟ್ಟಡ ಕೊಂಚ ವಾಲಿದೆ. ಇದರಿಂದಾಗಿ ಕಟ್ಟಡ ಯಾವಾಗ ಬೀಳುವುದೋ ಎನ್ನುವ ಆತಂಕ ಅಕ್ಕಪಕ್ಕದವರಿಗೆ ಶುರುವಾಗಿದ್ದು, ನೆರೆಮನೆಯ ವೃದ್ಧೆಯೊಬ್ಬರ ಕಟ್ಟಡ ಉರುಳಿದರೆ ನಮ್ಮ ಶೀಟ್​ ಮನೆಯ ಮೇಲೆಯೇ ಬೀಳುತ್ತದೆ. ನಮಗೆ ಏನು ಮಾಡಬೇಕೆಂದೇ ತೋಚುತ್ತಿಲ್ಲವೆಂದು ಕಣ್ಣೀರು ಹಾಕಿದ್ದಾರೆ.

ಒಂದೆಡೆ ಬೆಂಗಳೂರಿನಲ್ಲಿ ಮಳೆಯೂ ಸುರಿಯುತ್ತಿದ್ದು, ಇದೀಗ ಒಳಚರಂಡಿ ಕಾಮಗಾರಿ ವೇಳೆ ಪಾಯದ ಕಲ್ಲು ತೆಗೆದ ಕಾರಣ ಕಟ್ಟಡ ವಾಲಿರುವುದು ಸುತ್ತಮುತ್ತಲಿನವರ ನಿದ್ದೆಗೆಡಿಸಿದೆ. ರಾಜಾಜಿನಗರದ 6ನೇ ಬ್ಲಾಕ್​ನಲ್ಲಿರುವ ಕಟ್ಟಡ ವಾಲುತ್ತಿದ್ದಂತೆಯೇ ಮನೆಯ ಮಾಲೀಕ ಗೋವಿಂದರಾಜು ಕುಟುಂಬವನ್ನು ಅಲ್ಲಿಂದ ಖಾಲಿ ಮಾಡಿಸಲಾಗಿದೆ. ಕಟ್ಟಡಕ್ಕೆ ಕಬ್ಬಿಣದ ರಾಡ್​ಗಳನ್ನು ಆಧಾರವಾಗಿ ಕೊಡಲಾಗಿದ್ದು, ಧರೆಗುರುಳದಂತೆ ತಡೆಯಲು ಪ್ರಯತ್ನಿಸಲಾಗಿದೆ. ಸ್ಥಳಕ್ಕೆ ಇಂಜಿನಿಯರ್​ಗಳು ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RR NAGAR BUILDING DAMAGE

ಕಬ್ಭಿಣದ ಸರಳುಗಳನ್ನು ಆಧಾರವಾಗಿ ಕೊಟ್ಟಿರುವುದು

RR NAGAR BUILDING LEANING

ಕಣ್ಣೀರು ಹಾಕುತ್ತಿರುವ ನೆರೆಮನೆಯ ವೃದ್ಧೆ

ಸದ್ಯ ಮನೆಯ ಎರಡೂ ಬದಿಯ ರಸ್ತೆಯನ್ನು ಬಂದ್ ಮಾಡಿರುವ ಪೊಲೀಸರು ಯಾರೂ ಆ ಪ್ರದೇಶದಲ್ಲಿ ತಿರುಗಾಡದಂತೆ ನಿಗಾ ವಹಿಸುತ್ತಿದ್ದಾರೆ. ಕಟ್ಟಡದಲ್ಲಿ ಬಿರುಕು ಸಹ ಮೂಡಿದೆ ಎಂದಿರುವ ಸ್ಥಳೀಯರು ಯಾವ ಸಂದರ್ಭದಲ್ಲಿ ಬೇಕಾದರೂ ಇದು ಉರುಳಬಹುದು. ಮೂರಂತಿಸ್ತಿನ ಮನೆಯಾಗಿರುವುದರಿಂದ ಅಕ್ಕಪಕ್ಕದ ಮನೆಗಳು ಕೂಡಾ ಜಖಂ ಆಗಲಿವೆ. ಯಾರೋ ಮಾಡಿದ ತಪ್ಪಿಗೆ ನಾವೂ ಶಿಕ್ಷೆ ಅನುಭವಿಸಬೇಕು. ನಮ್ಮ ಶೀಟ್​ ಮನೆಗಳೆಲ್ಲಾ ಪುಡಿಯಾಗುತ್ತವೆ ಎಂದು ಆತಂಕ ಹಂಚಿಕೊಂಡಿದ್ದಾರೆ.

ಪಕ್ಕದ ಮನೆಯ ವೃದ್ಧೆಯೊಬ್ಬರು ಕಟ್ಟಡ ವಾಲಿರುವುದನ್ನು ನೋಡಿ ಕಣ್ಣೀರು ಹಾಕಿದ್ದು, ಇಷ್ಟು ದೊಡ್ಡ ಮನೆ ಬಿದ್ದರೆ ನಾವು ಎಲ್ಲಿಗೆ ಹೋಗಬೇಕು? ನಮ್ಮ ಬಳಿ ಜಾಸ್ತಿ ಏನೂ ಇಲ್ಲ. ಈ ಕಟ್ಟಡ ಬಿದ್ದರೆ ನಮ್ಮ ಮನೆ ಪುಡಿಯಾಗುತ್ತದೆ ಎಂದು ದುಃಖ ತೋಡಿಕೊಂಡಿದ್ದಾರೆ. ಬಿಡಬ್ಲ್ಯೂಎಸ್​ಎಸ್​ಬಿ ಕಾಮಗಾರಿ ನಡೆಸುತ್ತಿದ್ದ ವೇಳೆ ಕಟ್ಟಡದ ಪಾಯದಿಂದ ಕಲ್ಲೊಂದನ್ನು ಕಿತ್ತಿದ್ದೇ ಇದಕ್ಕೆಲ್ಲಾ ಕಾರಣ ಎನ್ನಲಾಗುತ್ತಿದ್ದು, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಫ್ಲೋರಿಡಾದಲ್ಲಿ ಕಟ್ಟಡ ಕುಸಿತ; ಭಾರತೀಯ ಮೂಲದ ದಂಪತಿ, 1 ವರ್ಷದ ಮಗು ಸಹಿತ 150 ಜನ ಕಣ್ಮರೆ 

ಬೆಂಗಳೂರು: ಅನಧಿಕೃತ ಕಟ್ಟಡಗಳ ತೆರವು ವಿಚಾರ; ಕ್ರಮ ಕೈಗೊಳ್ಳದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ

Published On - 1:19 pm, Tue, 13 July 21