ಬೆಂಗಳೂರು: ಅನಧಿಕೃತ ಕಟ್ಟಡಗಳ ತೆರವು ವಿಚಾರ; ಕ್ರಮ ಕೈಗೊಳ್ಳದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ
ಪರವಾನಗಿ ಇಲ್ಲದೇ ನಿರ್ಮಿಸಿದ ಕಟ್ಟಡಗಳ ತೆರವಿಗೆ ಬಿಬಿಎಂಪಿ ಹಿಂದೇಟು ಹಾಕಿದೆ. ಹೀಗಾಗಿ ಕಟ್ಟಡಗಳ ತೆರವಿಗೆ ಎರಡನೇ ಆದ್ಯತೆ ನೀಡಲಾಗುತ್ತಿದೆ. ಪರವಾನಗಿ ಇಲ್ಲದ ಕಟ್ಟಡಗಳ ತೆರವಿಗೆ ಕೂಡಲೇ ಕ್ರಮಕೈಗೊಳ್ಳಿ ಎಂದು ಹೈಕೋರ್ಟ್ ಹೇಳಿದೆ.
ಬೆಂಗಳೂರು: ನಗರದಲ್ಲಿ ಅನಧಿಕೃತ ಕಟ್ಟಡಗಳ ತೆರವು ವಿಚಾರವಾಗಿ ಹೈಕೋರ್ಟ್‌ನಲ್ಲಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು (ಜುಲೈ 6) ವಿಚಾರಣೆ ನಡೆಸಲಾಗಿದೆ. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ. ಮೊದಲಿಗೆ ಪರವಾನಗಿ ಉಲ್ಲಂಘಿಸಿದ ಕಟ್ಟಡಗಳ ಸರ್ವೆ ನಡೆಸಲಾಗಿದೆ. ನಂತರ ಪರವಾನಗಿ ಇಲ್ಲದೇ ನಿರ್ಮಿಸಿದ ಕಟ್ಟಡಗಳ ಸರ್ವೆ ಮಾಡುತ್ತೇವೆ. ಸರ್ವೆ ಕಾರ್ಯ ನಡೆಸಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್‌ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಆದರೆ, ಗೌರವ್ ಗುಪ್ತಾ ಪ್ರಮಾಣಪತ್ರಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪರವಾನಗಿ ಇಲ್ಲದೇ ನಿರ್ಮಿಸಿದ ಕಟ್ಟಡಗಳ ತೆರವಿಗೆ ಬಿಬಿಎಂಪಿ ಹಿಂದೇಟು ಹಾಕಿದೆ. ಹೀಗಾಗಿ ಕಟ್ಟಡಗಳ ತೆರವಿಗೆ ಎರಡನೇ ಆದ್ಯತೆ ನೀಡಲಾಗುತ್ತಿದೆ. ಪರವಾನಗಿ ಇಲ್ಲದ ಕಟ್ಟಡಗಳ ತೆರವಿಗೆ ಕೂಡಲೇ ಕ್ರಮಕೈಗೊಳ್ಳಿ ಎಂದು ಹೈಕೋರ್ಟ್ ಹೇಳಿದೆ.
ಇದಕ್ಕೆ 2019ರಲ್ಲೇ ಆದೇಶ ನೀಡಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ. ಅನಧಿಕೃತ ಕಟ್ಟಡಗಳ ತೆರವಿಗೆ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಬಿಬಿಎಂಪಿಗೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಅಭಯ್ ಎಸ್ ಒಕಾ ತರಾಟೆ ತೆಗೆದುಕೊಂಡಿದ್ದಾರೆ. ಹೊಸ ಪ್ರಮಾಣಪತ್ರ ಸಲ್ಲಿಸುವುದಾಗಿ ಪಾಲಿಕೆ ಪರ ವಕೀಲರು ಹೇಳಿಕೆ ನೀಡಿದ್ದಾರೆ. ಬಳಿಕ, ವಿಚಾರಣೆಯನ್ನು ಜುಲೈ 29ಕ್ಕೆ ಹೈಕೋರ್ಟ್ ಮುಂದೂಡಿದೆ.
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳ ಸಾವು ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ಮತ್ತೊಂದು ಅತ್ಯಂತ ಮಹತ್ವದ ತೀರ್ಪು ನೀಡಿದೆ. ಮೃತರ 13 ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಆಕ್ಸಿಜನ್ ಕೊರತೆಯಾದ ರಾತ್ರಿ, ಬೆಳಗ್ಗೆ 13 ರೋಗಿಗಳ ಸಾವನ್ನಪ್ಪಿದ್ದಾರೆ. ಈ ಮೃತರ 13 ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಿ. ಬಳಿಕ ಮೃತಪಟ್ಟ 11 ಜನರ ಕುಟುಂಬಕ್ಕೆ ತಲಾ 2ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಆಯೋಗದ ವರದಿ ಬಳಿಕ ಹೆಚ್ಚುವರಿ ಪರಿಹಾರ ಬಗ್ಗೆ ನಿರ್ಧರಿಸಿ ಎಂದು ಸಹ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
AgriGold scam: ಅಗ್ರಿಗೋಲ್ಡ್ ಹೂಡಿಕೆದಾರರ ಹಿತರಕ್ಷಣೆಗಾಗಿ ತಕ್ಷಣ ಸುಪ್ರೀಂ ಕೋರ್ಟ್ ಮೊರೆ ಹೋಗಲು ಹೈಕೋರ್ಟ್ ಸೂಚನೆ
Published On - 6:12 pm, Tue, 6 July 21