ಬೆಳಗಾವಿ: ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾನಾ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಇಂದು ಬೆಳಗಾವಿಯಲ್ಲಿ ನಡೆದ ಜನಸೇವಕ ಸಮಾರೋಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಕರ್ನಾಟಕ ವಿಕಾಸಕ್ಕೆ ಡಬಲ್ ಎಂಜಿನ್ ಸರ್ಕಾರ ಇದೆ ಎಂದರು.
ಕರ್ನಾಟಕದ ಅಭಿವೃದ್ಧಿಗೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ಇದೆ. ಇದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯ. ಮುಂದೆ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿದೆ. ಅಲ್ಲಿಯೂ ಬಿಜೆಪಿಗೆ ಮತ ನೀಡಿ ಬಿಜೆಪಿ ಗೆಲ್ಲಿಸಿ. ರಾಜ್ಯದ ಅಭಿವೃದ್ಧಿಗಾಗಿ ನಮಗೆ ಮತ ನೀಡಿ ಎಂದು ಅಮಿತ್ ಶಾ ಮನವಿ ಮಾಡಿದರು.
ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ..
ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿದ್ದೇವೆ. ಜವಾಹರ್ಲಾಲ್ ನೆಹರು ಕಾಲದಿಂದ ಆರಂಭಿಸಿ ಡಾ. ಮನಮೋಹನ್ ಸಿಂಗ್‌ವರೆಗಿನ ಸರ್ಕಾರದಲ್ಲಿ ಈ ಕೆಲಸ ಆಗಿರಲಿಲ್ಲ. ಇದನ್ನು ಪ್ರಧಾನಿ ನರೇಂದ್ರ ಮೋದಿ ಸಾಧಿಸಿ ತೋರಿಸಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ನನಸಾಯಿತು. ಪ್ರಧಾನಿ ಮೋದಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಆದರೆ, ಇವೆಲ್ಲದಕ್ಕೂ ಕಾಂಗ್ರೆಸ್ವಿ ರೋಧ ವ್ಯಕ್ತಪಡಿಸಿತು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕರ್ನಾಟಕಕ್ಕೆ ಏನು ಕೊಟ್ಟಿದ್ದೀರಿ ಎಂದು ಲೆಕ್ಕ ಕೊಡಿ ಎಂದು ಅಮಿತ್ ಶಾ ಆಗ್ರಹಿಸಿದ್ದಾರೆ.
ಕೊರೊನಾ ಲಸಿಕೆ ವಿಚಾರದಲ್ಲಿ ಅಪಸ್ವರ ತೆಗೆದ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅಮಿತ್ ಶಾ, ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಲಸಿಕೆ ತಯಾರಿಕೆ ಮೋದಿಯವರ ಕಣ್ಗಾವಲಿನಲ್ಲೇ ಆಗಿದೆ. ನಾವು ಹಂತಹಂತವಾಗಿ ದೇಶವನ್ನ ಕೊರೋನಾ ಭಯದಿಂದ ಮುಕ್ತವಾಗಿಸುತ್ತೇವೆ. ದೇಶಕ್ಕೊಂದು ಸುರಕ್ಷಾ ಕವಚ ನೀಡುತ್ತೇವೆ ಎಂದು ಅಮಿತ್ ಶಾ ಭರವಸೆ ನೀಡಿದರು.
ಭಯೋತ್ಪಾದನೆ ಹತ್ತಿಕ್ಕಲು ಕ್ರಮ
ಸದಾ ಭಯೋತ್ಪಾದನೆಗೆ ಪ್ರಚೋದನೆ ನೀಡುವ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲು ಭಾರತೀಯ ರಕ್ಷಣಾ ಇಲಾಖೆ ಎರಡು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಈ ಘಟನೆಯನ್ನು ಅಮಿತ್ ಶಾ ನೆನೆದಿದ್ದಾರೆ. ನೆರೆಯ ಪಾಕಿಸ್ತಾನಕ್ಕೆ 2 ಬಾರಿ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಏರ್‌ಸ್ಟ್ರೈಕ್, ಸರ್ಜಿಕಲ್ ಸ್ಟ್ರೈಕ್ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದೇವೆ. ಇದರಿಂದ ಪಾಕ್ ಪ್ರಚೋದಿತ ಭಯೋತ್ಪಾದನೆ ನಿಂತಿದೆ ಎಂದು ಅಮಿತ್ ಶಾ ಹೆಮ್ಮೆ ವ್ಯಕ್ತಪಡಿಸಿದರು.
ಮೋದಿ ಸರ್ಕಾರ ಜನ ಸಾಮಾನ್ಯ ಸ್ನೇಹಿ
ಮೋದಿ ಸರ್ಕಾರದಿಂದ ಜನ ಸಾಮಾನ್ಯರಿಗೆ ಸಹಾಯವಾಗಿದೆ ಎಂದಿರುವ ಅಮಿತ್ ಶಾ, ಮೋದಿ ಸರ್ಕಾರ ಬಂದ ಮೇಲೆ ಪ್ರತಿ ಮನೆಗೆ ಬ್ಯಾಂಕ್ ಖಾತೆ ಆಗಿದೆ. ಹೊಗೆಮುಕ್ತ ದೇಶಕ್ಕಾಗಿ ಪ್ರತಿಮನೆಗೂ ಸಿಲಿಂಡರ್ ನೀಡುತ್ತಿದ್ದೇವೆ. ಹಲವು ಮನೆಗಳಲ್ಲಿ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಈಗ ಮನೆ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಆಯುಷ್ಮಾನ್ ಭಾರತ್ ಯೋಜನೆಯಡಿ ₹5 ಲಕ್ಷದವರೆಗೆ ವಿಮೆ ನೀಡಲಾಗಿದೆ. 5 ಟ್ರಿಲಿಯನ್ ಆರ್ಥಿಕತೆಯತ್ತ ನಾವು ಮುನ್ನಡೆಯುತ್ತಿದ್ದೇವೆ. ಇದೆಲ್ಲವೂ ಪ್ರಧಾನಿ ಮೋದಿ ಸರ್ಕಾರದ ಸಾಧನೆ ಎಂದರು.
ಸಂಗೊಳ್ಳಿ ರಾಯಣ್ಣ ಸ್ಮರಿಸಿದ ಅಮಿತ್ ಶಾ
ಭಾಷಣದ ವೇಳೆ ಅಮಿತ್ ಶಾ ಬೆಳವಡಿ ಮಲ್ಲಮ್ಮ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸ್ಮರಣೆ ಮಾಡಿದರುE. ಅಲ್ಲದೆ, ಸಂಗೊಳ್ಳಿ ರಾಯಣ್ಣ ಬಲಿದಾನವನ್ನೂ ಕೂಡ ಅವರು ಸ್ಮರಿಸಿದರು.
ಗ್ರಾ.ಪಂ. ಚುನಾವಣೆಯಲ್ಲಿ ಪ್ರಚಂಡ ಗೆಲುವು
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಯಡಿಯೂರಪ್ಪ, ಕಟೀಲು ನೇತೃತ್ವದಲ್ಲಿ ಬಿಜೆಪಿ ಪ್ರಚಂಡ ಗೆಲುವು ದಾಖಲಿಸಿದೆ. ಮೋದಿಗೆ ಮತಗಳ ಮೂಲಕ ಜೋಳಿಗೆ ತುಂಬಿಸಿದ್ದೀರಿ ಈ ಗೆಲುವು ತಂದುಕೊಟ್ಟ ಜನರಿಗೆ ಆಭಾರಿಯಾಗಿದ್ದೇವೆ ಎಂದು ಅಮಿತ್ ಶಾ ಹೇಳಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ನಂತರ ಆ ಮಟ್ಟಕ್ಕೆ ಬೆಳೆದವರು ಗೃಹ ಸಚಿವ ಅಮಿತ್ ಶಾ: ಯಡಿಯೂರಪ್ಪ
Published On - 5:47 pm, Sun, 17 January 21