ಕೊರೊನಾ ಎರಡನೇ ಅಲೆಯ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ. ಜನಸಾಮಾನ್ಯರು, ಗಣ್ಯರು ಯಾರೂ ಕೊರೊನಾ ನಿಯಮಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ರಾಜ್ಯದಲ್ಲಿ ಮದುವೆ ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ. ಅಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಯಾವುದನ್ನೂ ಪಾಲಿಸಲಾಗುತ್ತಿಲ್ಲ. ಮಾಸ್ಕ್ ಹಾಕಿಕೊಂಡು ನಾವೇನಾದರೂ ಹೋದರೆ ನಮಗೇ ಮಾಸ್ಕ್ ತೆಗೆಯಲು ಹೇಳುವ ಮಟ್ಟಿಗೆ ಜನ ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮಹಾರಾಷ್ಟ್ರ, ಕೇರಳ ರಾಜ್ಯಗಳು ಕಠಿಣ ನಿಯಮಗಳನ್ನು ಜಾರಿಗೊಳಿಸಿವೆ. ಮತ್ತೆ ನೈಟ್ಕರ್ಫ್ಯೂ, ಲಾಕ್ಡೌನ್ ಮೊರೆಹೋಗಿವೆ. ನಮ್ಮಲ್ಲೂ ಜನ ಹೇಳಿದ್ದನ್ನು ಅರ್ಥ ಮಾಡಿಕೊಳ್ಳದಿದ್ದರೆ ನಾವು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಮದುವೆ ಸಮಾರಂಭಗಳಿಗೂ ಮಾರ್ಷಲ್ಗಳನ್ನು ನಿಯೋಜಿಸಲು ಯೋಚಿಸುತ್ತಿದ್ದೇವೆ. ಜನಸಾಮಾನ್ಯರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಲೇಬೇಕು ಇಲ್ಲವೆಂದರೆ ಕಠಿಣ ಕ್ರಮ ಜಾರಿಗೊಳಿಸಲು ನೀವೇ ಪ್ರೇರೇಪಿಸಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಜೊತೆಗೆ ಕೇರಳ, ಮಹಾರಾಷ್ಟ್ರ ಜನರಿಗೆ ನಾವು ನಿರ್ಬಂಧ ವಿಧಿಸಿದ್ದೇವೆ ಎಂದು ತಪ್ಪು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ನಾವು ನಿರ್ಬಂಧ ಹೇರಿಲ್ಲ ಬದಲಾಗಿ ಕೊವಿಡ್ ನೆಗೆಟಿವ್ ವರದಿ ಕೇಳುತ್ತಿದ್ದೇವೆ ಎಂದು ವಿಧಾನಸೌಧದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಇದುವರೆಗೆ 4,24,573 ಆರೋಗ್ಯ ಕಾರ್ಯಕರ್ತರಿಗೆ ಹಾಗೂ 1,20,176 ಫ್ರಂಟ್‌ಲೈನ್ ವಾರಿಯರ್ಸ್‌ಗೆ ಲಸಿಕೆ ನೀಡಲಾಗಿದೆ. ಇಂದು, ನಾಳೆ ಹೆಚ್ಚು ಕೊವಿಡ್ ಲಸಿಕೆ ಪಡೆಯುವ ಸಾಧ್ಯತೆ ಇದೆ. ಇನ್ನು ಕಲಬುರಗಿಯಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳಿದ್ದು, ಶೇ.1.37 ರಷ್ಟು ಕೊವಿಡ್ ಪಾಸಿಟಿವ್ ಪ್ರಕರಣ ಇವೆ. 2ನೇ ಸ್ಥಾನದಲ್ಲಿ ಬೆಂಗಳೂರು, 3ನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗಳು ಇವೆ. ಉಳಿದಂತೆ ಎಲ್ಲ ಕಡೆ ಶೇ.1ಕ್ಕಿಂತ ಕಡಿಮೆ ಪಾಸಿಟಿವ್ ಕೇಸ್ ಇದ್ದು, ಮಾರ್ಚ್‌ನಿಂದ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಘೋಷಣೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಕೊರೊನಾ 2ನೇ ಅಲೆಯನ್ನು ನಾವು ತಡೆಯಲೇಬೇಕು. ಅಪಾಯ ಮೈಮೇಲೆ ಎಳೆದುಕೊಂಡಮೇಲೆ ಹೋರಾಡುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳಬೇಕು. ಸದ್ಯ ಶಾಲೆಗಳು ಆರಂಭವಾಗಿದೆಯಾದರೂ ಮಕ್ಕಳ ಹಾಜರಾತಿ ಕಡ್ಡಾಯವಲ್ಲ ಎಂದು ಸರ್ಕಾರ ತಿಳಿಸಿದೆ. ಹೀಗಾಗಿ ಈ ಬಗ್ಗೆ ಗೊಂದಲ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ, 5ಕ್ಕಿಂತ ಹೆಚ್ಚು ಜನರಿಗೆ ಒಂದೆಡೆ ಪಾಸಿಟಿವ್ ಬಂದರೆ ಅದನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತೆ ಚುರುಕುಗೊಂಡ ಕೊರೊನಾ: ಲಾಕ್ಡೌನ್ ಸೂಚನೆ ನೀಡಿದ ಮುಂಬೈ ಮೇಯರ್