ನವದೆಹಲಿ, ಮಾ.16: ನಾನು ರಾಜಕೀಯಕ್ಕೆ ಬಂದಿರುವುದು ರಾಜಕೀಯ ಮಾಡುವುದಕ್ಕೆ ಅಲ್ಲ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ(BJP) ಅಭ್ಯರ್ಥಿ ಡಾ.ಮಂಜುನಾಥ್(Dr.C.N Manjunath) ಹೇಳಿದರು. ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಮಾತನಾಡಿದ ಅವರು, ‘ ಇದೊಂದು ಸೌಹಾರ್ದಯುತ ಭೇಟಿಯಾಗಿದೆ. ಇದುವರೆಗೂ ನಾನು ಅಮಿತ್ ಶಾರನ್ನು ನೋಡಿರಲಿಲ್ಲ. ಇಂದು(ಮಾ.16) ಭೇಟಿಯಾಗಿ ಲೋಕಸಭಾ ಚುನಾವಣೆಗೆ ಅವರ ಸಹಕಾರ ಕೇಳಿದ್ದೇನೆ ಎಂದರು.
ಸೋಮವಾರ(ಮಾ.18)ದಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರುತಿದ್ದೇನೆ. ವೈಯಕ್ತಿಕವಾಗಿ ಯಾರನ್ನೂ ಟೀಕಿಸಲ್ಲ, ಇದೊಂದು ಧರ್ಮಯುದ್ಧ ಇದ್ದಂತೆ. ಜಿಡಿಎಸ್ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹೋದಲೆಲ್ಲಾ ಪಾಸಿಟಿವ್ ಪ್ರತಿಕ್ರಿಯೆ ಬರುತ್ತಿದೆ ಎಂದು ದೆಹಲಿಯಲ್ಲಿ ಡಾ. ಮಂಜುನಾಥ್ ಹೇಳಿದರು.
ಇನ್ನು ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಮಾ.13 ರಂದು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಸಿ.ಎನ್ ಮಂಜುನಾಥ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಆ ಬಳಿಕ ಮಾತನಾಡಿದ್ದ ಅವರು, ‘ಅಧಿಕೃತವಾಗಿ ಬಿಜೆಪಿ ಸೇರುತ್ತೇನೆ. ಯಡಿಯೂರಪ್ಪನವರ ಜೊತೆಗೆ ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಅಂದರೇನೇ ರಾಜಕೀಯ. ಆದರೆ, ನಾನು ರಾಜಕೀಯ ಮಾಡಲ್ಲ ಎಂದರು. ಚುನಾವಣೆಗೆ ನಿಂತ ಮೇಲೆ ಎಲ್ಲವೂ ಬಂದೇ ಬರುತ್ತದೆ. ಪ್ರಧಾನಿ ಮೋದಿಯವರ ಜನಪ್ರಿಯತೆ ಹಾಗೂ ಬಿಎಸ್ ಯಡಿಯೂರಪ್ಪ ಅವರ ನಾಯಕತ್ವ, ಹೆಚ್ ಡಿ ದೇವೇಗೌಡ ಮತ್ತು HD ಕುಮಾರಸ್ವಾಮಿ ಅವರ ಸಲಹೆಯಂತೆ ಕೆಲಸ ಮಾಡುತ್ತೇನೆ. ಎಲ್ಲ ರೀತಿಯಲ್ಲಿ ಚುನಾವಣೆ ಎದುರಿಸಲು ನಾನು ಸಿದ್ಧನಾಗಿದ್ದೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇಂದು ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ