ಸಾಲಬಾಧೆಯಿಂದ ಕರ್ನಾಟಕದಲ್ಲಿ 456 ರೈತರ ಆತ್ಮಹತ್ಯೆ, 354 ಮಂದಿ ಸರ್ಕಾರದ ಪರಿಹಾರಕ್ಕೆ ಅರ್ಹರು
ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 61, ಬೆಳಗಾವಿಯಲ್ಲಿ 56 ಮತ್ತು ಚಿಕ್ಕಮಗಳೂರಿನಲ್ಲಿ 49 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ 968 ರೈತರು ಪ್ರಾಣ ಕಳೆದುಕೊಂಡಿದ್ದು, ಅದರಲ್ಲಿ 849 ಪ್ರಕರಣಗಳು ಪರಿಹಾರಕ್ಕೆ ಅರ್ಹವೆಂದು ಕಂಡುಬಂದಿದ್ದು ಪರಿಹಾರ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು, ಡಿಸೆಂಬರ್ 19: ಪ್ರಸಕ್ತ ಋತುವಿನಲ್ಲಿ ಮಳೆಯ ಕೊರತೆಯಿಂದಾಗಿ ಕರ್ನಾಟಕದಾದ್ಯಂತ ಬರ (Drought) ಪರಿಸ್ಥಿತಿಯು ರೈತರ ಆರ್ಥಿಕ ಸಂಕಷ್ಟವನ್ನು ಹೆಚ್ಚಿಸಿ ಹೆಚ್ಚಿನ ಸಂಖ್ಯೆಯ ಆತ್ಮಹತ್ಯೆಗಳಿಗೆ (Farmers Suicide) ಕಾರಣವಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಈ ವರ್ಷ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಸಾಲಬಾಧೆಯಿಂದಾಗಿ ಒಟ್ಟು 456 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ವರ್ಷ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ.
456 ರೈತರ ಆತ್ಮಹತ್ಯೆಗಳ ಪೈಕಿ 354 ಪ್ರಕರಣಗಳು ಸರ್ಕಾರದ ಪರಿಹಾರಕ್ಕೆ ಅರ್ಹವಾಗಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರು 5 ಲಕ್ಷ ರೂಪಾಯಿ ಪರಿಹಾರ ಮತ್ತು ಮಾಸಿಕ 2000 ರೂಪಾಯಿ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
ಸಂತ್ರಸ್ತರ ಕುಟುಂಬವು ತಮ್ಮ ಹಕ್ಕುಗಳನ್ನು ಸಾಬೀತುಪಡಿಸಲು ದಾಖಲೆಗಳನ್ನು ಒದಗಿಸಬೇಕು ಮತ್ತು ಅನುಮೋದನೆ ದೊರೆತ ನಂತರ, ಸರ್ಕಾರವು ಪರಿಹಾರವನ್ನು ಬಿಡುಗಡೆ ಮಾಡುತ್ತದೆ.
ಕಳೆದ ಏಳು ತಿಂಗಳಿಂದ ರಾಜ್ಯದಲ್ಲಿ ವರದಿಯಾದ ಸಾವುಗಳ ಪೈಕಿ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಅಂದರೆ 259 ರೈತರ ಆತ್ಮಹತ್ಯೆಗಳು ದಾಖಲಾಗಿವೆ.
ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 61, ಬೆಳಗಾವಿಯಲ್ಲಿ 56 ಮತ್ತು ಚಿಕ್ಕಮಗಳೂರಿನಲ್ಲಿ 49 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ವರ್ಷ 968 ರೈತರು ಪ್ರಾಣ ಕಳೆದುಕೊಂಡಿದ್ದು, ಅದರಲ್ಲಿ 849 ಪ್ರಕರಣಗಳು ಪರಿಹಾರಕ್ಕೆ ಅರ್ಹವೆಂದು ಕಂಡುಬಂದಿದ್ದು ಪರಿಹಾರ ಬಿಡುಗಡೆ ಮಾಡಲಾಗಿದೆ.
ಈ ವರ್ಷ ಮಳೆ ಕೊರತೆಯಿಂದ ರಾಜ್ಯಾದ್ಯಂತ ಒಟ್ಟು 33,770 ಕೋಟಿ ರೂ.ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಪತ್ತೆ, ಆದಾಯ ಸೋರಿಕೆ ತಡೆಗೆ ಬರಲಿದೆ 3ಡಿ ಡ್ರೋನ್!
ಬರ ಸಮೀಕ್ಷೆ ನಡೆಸಿದ ನಂತರ ಸರ್ಕಾರವು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ಡಿಆರ್‌ಎಫ್) ಅಡಿಯಲ್ಲಿ 17,901 ಕೋಟಿ ರೂಪಾಯಿ ಪರಿಹಾರವನ್ನು ಕೋರಿ ಕೇಂದ್ರಕ್ಕೆ ಪತ್ರ ಬರೆದಿದೆ. ರಾಜ್ಯ ಸರ್ಕಾರ ಅಕ್ಟೋಬರ್‌ನಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಹಣ ಬಿಡುಗಡೆಗಾಗಿ ಕಾಯುತ್ತಿದೆ ಎಂದು ಹೇಳಲಾಗಿದೆ.
ಏತನ್ಮಧ್ಯೆ, ರಾಜ್ಯದ ಸಹಕಾರಿ ಬ್ಯಾಂಕ್‌ಗಳಿಂದ ಪಡೆದಿರುವ ಕೃಷಿ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 14 ರಂದು ಘೋಷಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ